ಮಂಗಳೂರು: ಕರ್ಣಾಟಕ ಬ್ಯಾಂಕ್ ವತಿಯಿಂದ ನಗರದ ಕೆಪಿಟಿ ವೃತ್ತದಿಂದ ಪಂಪ್‌ವೆಲ್ ಸರ್ಕಲ್‌ವರೆಗೆ 3.1 ಕಿ.ಮೀ. ರಾಷ್ಟ್ರೀಯ ಹೆದ್ದಾರಿಯ ವಿಭಜಕದಲ್ಲಿ 1.10 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ತಡೆಬೇಲಿ ಹಾಗೂ ಹೂದೋಟವನ್ನು ಗುರುವಾರ ನಗರಾರ್ಪಣೆಗೊಳಿಸಲಾಯಿತು.
ಈ ವೇಳೆ ಮಾತನಾಡಿದ ಶಾಸಕ ವೇದವ್ಯಾಸ ಕಾಮತ್, ಹೆದ್ದಾರಿ ನಡುವಿನ ವಿಭಜಕದಲ್ಲಿ ತಡೆಬೇಲಿ ಅಳವಡಿಸಿದ ಕರ್ಣಾಟಕ ಬ್ಯಾಂಕ್ ಕಾರ್ಯ ಶ್ಲಾಘನೀಯ. ಇಲ್ಲಿ ನಿರ್ಮಾಣವಾಗಿರುವ ಹೂದೋಟಕ್ಕೆ ನೀರಿನ ಲೈನ್ ಅಳವಡಿಸಿ ಡ್ರಿಪ್ ನೀರಾವರಿ ವ್ಯವಸ್ಥೆ ಮಾಡಲಾಗುವುದು ಎಂದರು.
ಬ್ಯಾಂಕ್ ಅಧ್ಯಕ್ಷ ಪಿ.ಜಯರಾಮ ಭಟ್ ಮಾತನಾಡಿ, ಸಮಾಜದಿಂದ ಪಡೆದುದರಲ್ಲಿ ಒಂದಂಶವನ್ನು ಸಮಾಜಕ್ಕೆ ಕೊಡುಗೆ ನೀಡುವುದು ನಮ್ಮ ಕರ್ತವ್ಯ ಹಾಗೂ ಜವಾಬ್ದಾರಿ. ಈ ನಿಟ್ಟಿನಲ್ಲಿ ಬ್ಯಾಂಕ್ ಹಲವಾರು ಕಾರ್ಯಗಳನ್ನು ಮಾಡುತ್ತ ಬಂದಿದೆ. ಈ ತಡೆಬೇಲಿ ಮತ್ತು ಹೂದೋಟದ ಕೆಲಸ ಕ್ಷಿಪ್ರವಾಗಿ ಮಾಡಿಸಿದ್ದೇವೆ. ಇನ್ನು ಈ ಹೂದೋಟದ ನಿರ್ವಹಣೆಯೂ ಸಮರ್ಪಕವಾಗಿ ಆಗಬೇಕಿದೆ ಎಂದು ಹೇಳಿದರು.
ಕೃಷಿ ವಲಯಕ್ಕೆ ಹೆಚ್ಚಿನ ಕೊಡುಗೆ
ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆವಿ ಮಾತನಾಡಿ, ಸದೃಢ ಬ್ಯಾಂಕಿಂಗ್ ವ್ಯವಸ್ಥೆಯೊಂದಿಗೆ ಸಾಮಾಜಿಕ ಕಳಕಳಿ, ವಿತ್ತೀಯ ಶಿಸ್ತು ಹೊಂದಿರುವ ಕರ್ಣಾಟಕ ಬ್ಯಾಂಕ್ ಖಾಸಗಿಯಾದರೂ ಕೃಷಿ ವಲಯಕ್ಕೆ ಹೆಚ್ಚು ಕೊಡುಗೆ ನೀಡುತ್ತಿದೆ. ರಸ್ತೆ ಸುರಕ್ಷತೆಯ ನಿಟ್ಟಿನಲ್ಲಿ ಕೈಗೆತ್ತಿಕೊಂಡಿರುವ ಕೆಲಸ ಸಾಮಾಜಿಕ ಕಳಕಳಿಗೆ ಸಾಕ್ಷಿ ಎಂದರು.
ಎಸ್ಪಿ ಲಕ್ಷ್ಮೀಪ್ರಸಾದ್, ಮಂಗಳೂರು ನಗರ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಯೋಜನಾ ನಿರ್ದೇಶಕ ಶಿಶುಮೋಹನ್, ಡಿಸಿಪಿ ವಿನಯ್ ಗಾಂವ್ಕರ್, ಎಸಿಪಿ ನಟರಾಜ್, ಇನ್‌ಸ್ಪೆಕ್ಟರ್ ಗೋಪಾಲಕೃಷ್ಣ ಭಟ್, ಮುಡಾ ಅಧ್ಯಕ್ಷ ರವಿಶಂಕರ ಮಿಜಾರ್, ಕಾರ್ಪೊರೇಟರ್ ರಾಧಾಕೃಷ್ಣ, ಮಹಾಪ್ರಬಂಧಕ ಮಂಜುನಾಥ ಭಟ್ ಬಿ.ಕೆ, ಎಜಿಎಂ ಶ್ರೀನಿವಾಸ ದೇಶಪಾಂಡೆ ಮತ್ತಿತರರು ಇದ್ದರು. ಮುಖ್ಯನಿರ್ವಹಣಾಧಿಕಾರಿ ಬಾಲಚಂದ್ರ ವೈ.ವಿ ವಂದಿಸಿದರು.
ಜನೋಪಯೋಗಿ ಯೋಜನೆ: ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಎಂ.ಎಸ್.ಮಹಾಬಲೇಶ್ವರ ಸ್ವಾಗತಿಸಿ, ನಗರಕ್ಕೆ ಉಪಯೋಗವಾಗುವಂಥ ಯೋಜನೆ ಕೈಗೆತ್ತಿಕೊಳ್ಳುವುದು ನಮ್ಮ ಉದ್ದೇಶವಾಗಿತ್ತು ಎಂದು ಹೇಳಿದರು. ಜನರ ಸುರಕ್ಷತೆ ಉದ್ದೇಶದಿಂದ 3.10 ಕಿ.ಮೀ ಉದ್ದದ ರಸ್ತೆ ವಿಭಜಕಕ್ಕೆ ತಡೆ ಬೇಲಿ ಅಳವಡಿಸುವುದಲ್ಲದೆ ಸೌಂದರ್ಯ ಉದ್ದೇಶದಿಂದ ವಿವಿಧ ಗಿಡಗಳನ್ನು ನೆಡುವ ಯೋಜನೆಗೆ ಮುಂದಾದೆವು. ಮಹಾವೀರ ವೃತ್ತದಲ್ಲಿ ಮುಂದೆ ಕಲಶ ಅಳವಡಿಸುವುದು, ಬೀಚ್ ಅಭಿವೃದ್ಧಿ ಇತ್ಯಾದಿ ಉದ್ದೇಶಗಳನ್ನೂ ಹಾಕಿಕೊಳ್ಳಲಾಗಿದೆ ಎಂದರು.
ವರ್ಷವಿಡೀ ಹೂ ಬಿಡುವ ಗಿಡಗಳು: ವಿಭಜಕದಲ್ಲಿ ನೆಟ್ಟಿರುವ ಫಾಕ್ಸ್ ಟೈಲ್ ಪಾಮ್, ಕ್ರಿಸ್ಟಿನಾ, ಲಂಟಾನಾ, ಹಮೇಲಿಯಾ, ತಿಯೊಮೇರಿಯಾ, ಎಕ್ಸೋರ, ರುಸೂಲಿಯಾ, ಹೈಬಿಸ್ಕಸ್ ರೋಸಾ ಸಿನಾನಿಸಿಸ್ ಇತ್ಯಾದಿ ಗಿಡಗಳು ವರ್ಷವಿಡೀ ಹೂ ಬಿಡುವ ಜಾತಿಯಾಗಿದ್ದು ಸೌಂದರ್ಯ ಹೆಚ್ಚಿಸಲಿವೆ. ಉತ್ತಮ ದರ್ಜೆಯ ಪೈಪ್, ಕಬ್ಬಿಣ ಬಳಸಿ ತಡೆಬೇಲಿ ನಿರ್ಮಿಸಲಾಗಿದ್ದು ಜನರು ದಿಢೀರ್ ಅಡ್ಡದಾಡುವುದನ್ನು ತಡೆಗಟ್ಟಿ ಸುರಕ್ಷತೆ ಹೆಚ್ಚಿಸಲಿವೆ.