ಹೂವಿನಹಡಗಲಿ: ತಾಲೂಕಿನ ಸುಕ್ಷೇತ್ರ ಮೈಲಾರದ ಮೈಲಾರಲಿಂಗೇಶ್ವರನ ಜಾತ್ರೆಯ ವಿಶೇಷತೆಗಳಲ್ಲಿ ಒಂದಾದ ಕಂಚಾವೀರರ ಶಸ್ತ್ರ ಪವಾಡವು ಶನಿವಾರ ಮೈಲಾರಲಿಂಗೇಶ್ವರ ಹಾಗೂ ಗಂಗಿಮಾಳಮ್ಮ ದೇವಸ್ಥಾನದ ಆವರಣದಲ್ಲಿ ಜರುಗಿದವು. ಕಂಚಾವೀರರಿಂದ ನಡೆದ ವಿವಿಧ ಶಸ್ತ್ರ ಪವಾಡ ಮತ್ತು ಕಬ್ಬಿಣದ ಸರಪಳಿ ಹರಿಯುವ ಕಾರ್ಯಕ್ರಮಗಳು ಭಕ್ತರ ಮೈನವಿರೇಳಿಸುವ ಮೂಲಕ ಶ್ರೀಸ್ವಾಮಿ ಪವಾಡಕ್ಕೆ ಸಾಕ್ಷಿಯಾದವು.
ಶ್ರೀಮೈಲಾರಲಿಂಗೇಶ್ವರನ ಜಾತ್ರೆಯ ನಾಲ್ಕನೇ ದಿನವಾದ ಶನಿವಾರ ದೇವಸ್ಥಾನದ ಆವರಣದಲ್ಲಿ ವಂಶಪಾರಂಪರ್ಯ ಧರ್ಮಕರ್ತ ವೆಂಕಪ್ಪಯ್ಯ ಒಡೆಯರ್ ಅವರ ನೇತೃತ್ವದಲ್ಲಿ ಕಂಚಾವೀರರಿಂದ ವಿವಿಧ ರೀತಿಯ ಶಸ್ತ್ರಪವಾಡ ಮತ್ತು ಕಬ್ಬಿಣದ ಸರಪಳಿ ಹರಿಯುವ ಪವಾಡಗಳು ನಡೆದವು.
ಈ ಪವಾಡ ಮಾಡುವ ಕಂಚಾವೀರರ ವಂಶಸ್ಥರಲ್ಲಿ ಸರದಿಯ ಪ್ರಕಾರ ವಷರ್ಕ್ಕೆ ಒಂದು ಮನೆಯವರಂತೆ ಪವಾಡಗಳನ್ನು ನೆರವೇರಿಸುತ್ತಾ ಬಂದಿದ್ದಾರೆ. ಈ ಬಾರಿ ಪಕ್ಕಿರೇಶ ಕಂಚಾವೀರ ಕಾಲಿನಲ್ಲಿ ಬಗಣಿಗೂಟವನ್ನು ಬಡಿದುಕೊಂಡು ಆ ರಂಧ್ರದ ಮೂಲಕ ಹಗ್ಗ ಹಾಗೂ ಮುಳ್ಳಿನ ಕಂಟೆಯನ್ನು ದಾಟಿಸುವ ಪವಾಡ ಮಾಡಿದರು.
ಈ ದೃಶ್ಯ ನೋಡುಗರ ಮೈ ರೋಮಾಂಚನ ವೆನಿಸುವಂತ್ತಿತ್ತು. ನೆರೆದ ಸಹಾಸ್ರಾರು ಭಕ್ತರು ಏಳುಕೋಟಿಗೋ.... ಏಳು ಕೋಟಿಗೊ.... ಚಾಂಗಮಲೋ ಎಂದು ಹರ್ಷೋದ್ಘಾರ ವ್ಯಕ್ತಪಡಿಸಿದರು.
ನಂತರ ಕಂಚಾವೀರ ಸಂದೀಪ್ ಕಾಲಿನಲ್ಲಿ ಸುಮಾರು ಐದು ಅಡಿ ಉದ್ದದ ದಪ್ಪನೆಯ ಕಬ್ಬಿಣದ ಸರಳು ದಾಟಿಸುವ ಮೂಲಕ ಶಸ್ತ್ರ ಪವಾಡ ಮಾಡಿದರು. ಕಂಚಾವೀರ ಮಾಲತೇಶ ಮುಂಗೈಯಲ್ಲಿ ಶಸ್ತ್ರ ಚುಚ್ಚಿಕೊಂಡು ಆರತಿ ಬೆಳಗುವ ಪವಾಡ ಮಾಡಿದರು. ಅನಿಲ್ ದಳವಾಯಿ ದಪ್ಪನೆಯ ಕಬ್ಬಿಣದ ಸರಪಳಿಯನ್ನು ಕಟ್ಟೆಗೆ ಕಟ್ಟಿ ಒಂದೇ ಬಾರಿಗೆ ಜಗ್ಗಿ ಹರಿಯುವ ಪವಾಡ ಮಾಡಿದರು. ಕಂಚಾವೀರರು ಹಾಗೂ ಬಾಬುದಾರರು ಮತ್ತು ಇತರರು ಸ್ವಾಮಿಗೆ ಸೇವೆ ಸಲ್ಲಿಸಿದರು. ಇದರೊಂದಿಗೆ ವಾರದಿಂದ ಕ್ಷೇತ್ರದಲ್ಲಿ ನಡೆದುಕೊಂಡು ಬಂದ ಮೈಲಾರ ಜಾತ್ರೆಗೆ ತೆರೆಬಿದ್ದಿತು. ಪೊಲೀಸ್ ಇಲಾಖೆ ಅಧಿಕಾರಿಗಳು ಸೇರಿ ಇತರೆ ಇಲಾಖೆಗಳ ಅಧಿಕಾರಿಗಳು ಸಾರ್ವಜನಿಕರು ಇದ್ದರು.