ಜಿಲ್ಲೆ

ಏರುಮುಖದತ್ತ ತರಕಾರಿ, ಹೂವಿನ ಬೆಲೆ, ಸುಡುತ್ತಿದೆ ಗ್ರಾಹಕರ ಜೇಬು

Kolar

ಕೋಲಾರ: ಬಹುತೇಕ ಲಾಕ್‌ಡೌನ್ ಸಡಿಲಿಕೆ ನಂತರ ಹೋಟೆಲ್, ರೆಸ್ಟೋರೆಂಟ್‌ಗಳು ತೆರೆದಿವೆ. ದೇಗುಲಗಳು ಓಪನ್ ಆಗುತ್ತಿದ್ದಂತೆ ಮಾರುಕಟ್ಟೆಯಲ್ಲಿ ತರಕಾರಿ, ಮಾಂಸ, ಮೊಟ್ಟೆ, ಹೂವು, ಹೀಗೆ ಎಲ್ಲದರ ಬೆಲೆ ಏರುಮುಖವಾಗಿದೆ.

ಮಾ.24ರ ಲಾಕ್‌ಡೌನ್ ಘೋಷಣೆ ನಂತರ ಜಿಲ್ಲೆಯಲ್ಲಿ ಕ್ಯಾಪ್ಸಿಕಂ, ಹೂಕೋಸು, ಎಲೆಕೋಸು, ಟೊಮ್ಯಾಟೊಗೆ ಮಾರುಕಟ್ಟೆ ಸಿಗದೆ ತೋಟದಲ್ಲೇ ಕೊಳೆತರೆ, ಇನ್ನು ಕೆಲ ರೈತರು ಫಸಲು ನಾಶಪಡಿಸಿದ್ದರು. ಕೆಲ ರೈತರು ಸಂಕಷ್ಟದ ಸಂದರ್ಭದಲ್ಲೂ ಸಾರ್ವಜನಿಕರಿಗೆ ಉಚಿತವಾಗಿ ಹಂಚುವ ಮೂಲಕ ನಷ್ಟದಲ್ಲೂ ಸಾರ್ಥಕತೆ ಕಂಡವರಿದ್ದಾರೆ.

ಬೆಲೆ ಏರಿಕೆ: ಲಾಕ್‌ಡೌನ್ ತೆರವಿನ ಬಳಿಕ ಜೂ.8ರಿಂದ ಹೋಟೆಲ್, ರೆಸ್ಟೋರೆಂಟ್, ಡಾಬಾಗಳು ಕಾರ್ಯಾರಂಭ ಮಾಡಿದ್ದು, ತರಕಾರಿಗಳಿಗೆ ಬೇಡಿಕೆ ಹೆಚ್ಚಾಗಿದೆ. ಎಪಿಎಂಸಿ ಮಾರುಕಟ್ಟೆಯಲ್ಲಿ ಅವಕ ಕಡಿಮೆ ಇರುವುದರಿಂದ ಬೆಲೆ ಏರಿಕೆಯತ್ತ ಸಾಗಿದೆ. ಖಾಸಗಿ ಮಾರುಕಟ್ಟೆಯಲ್ಲಿ ಪ್ರತಿ ಕೆಜಿ ಮೇಲೆ ಕನಿಷ್ಠ 1ರಿಂದ 15 ರೂ. ಹೆಚ್ಚೇ ಇದ್ದು, ಸಂಕಷ್ಟದ ನಡುವೆ ಗ್ರಾಹಕರ ಜೇಬು ಸುಡುತ್ತಿದೆ.

ಲಾಕ್‌ಡೌ ವೇಳೆ ಕೆಜಿಗೆ 5 ರೂ.ಗೂ ಕೇಳುವವರಿಲ್ಲದ ಕ್ಯಾಪ್ಸಿಕಂ ಬೆಲೆ 50ರಿಂದ 60 ರೂ, ಟೊಮ್ಯಾಟೊ 15 ಕೆಜಿ ಬಾಕ್ಸ್ ಬೆಲೆ 240ರಿಂದ 250 ರೂ.ಗೆ ಏರಿದೆ. ಕಳೆದ ವಾರ ಹುರುಳಿಕಾಯಿ ಕೆಜಿಗೆ 90 ರೂ.ಗೆ ಏರಿತ್ತಾದರೂ ಪ್ರಸ್ತುತ 60ರಿಂದ 70 ರೂ. ಇದೆ. ಒಂದು ಕಟ್ಟಿಗೆ ಗರಿಷ್ಠ 20 ರೂ.ಗೆ ಮಾರಾಟ ಆಗುತ್ತಿದ್ದ ಕೊತ್ತಂಬರಿ ಸೊಪ್ಪು ಬೆಲೆ 50ರಿಂದ 60 ರೂ.ಗೆ ಜಿಗಿದಿದೆ.

ಈಗ ಮಾಂಸಾಹಾರಿ ಹೋಟೆಲ್ ತೆರದಿರುವುದರಿಂದ ಕೋಳಿ ಮಾಂಸದ ಬೆಲೆ ಕೆಜಿಗೆ ದ್ವಿಶಕತ ಬಾರಿಸಿದೆ. ನಾಟಿ ಕೋಳಿ ಬೆಲೆ 350 ರೂ. ಕುಸಿದಿದ್ದ ಮೊಟ್ಟೆ ಬೆಲೆ ಹೋಲ್‌ಸೇಲ್‌ನಲ್ಲಿ 100ಕ್ಕೆ 455ರಿಂದ 465 ರೂ.ಗಳಾದರೆ, ಗ್ರಾಮೀಣ ಭಾಗದಲ್ಲಿ ಮೊಟ್ಟೆಯೊಂದಕ್ಕೆ 5 ರೂ,ನಂತೆ ಮಾರಾಟವಾಗುತ್ತಿದೆ. ಕುರಿ ಮಾಂಸದ ಬೆಲೆಯೂ 650 ರೂ.ಗೆ ಏರಿದೆ.

ಹೂವಿಗೂ ಬೇಡಿಕೆ: ಕರೊನಾದಿಂದ ಶುಭ ಸಮಾರಂಭ ರದ್ದುಗೊಂಡು, ದೇವಾಲಯ ಮುಚ್ಚಿದ್ದರಿಂದ ಹೂವು ಬೆಳೆಗಾರರ ಬದುಕು ಅಕ್ಷರಶಃ ಮುದುಡಿತ್ತು. ಜಿಲ್ಲೆಯಲ್ಲಿ ಅನೇಕ ರೈತರು ಚೆಂಡು ಹೂವು ತೋಟ ನಾಶಪಡಿಸಿದ್ದರು. ಈಗ ಹೂವಿಗೂ ಬೇಡಿಕೆ ಬಂದಿದೆ. ಬಟನ್ ರೋಸ್ ಕೆಜಿಗೆ 200 ರೂ ಇದೆ. ಇದೇ ರೀತಿ ಇತರ ಹೂವಿನಲ್ಲೂ ಬೆಲೆ ಏರಿಕೆ ಕಂಡಿದೆ.

ಲಾಕ್‌ಡೌನ್ ಸಡಿಲಿಕೆಯಿಂದ ಹೋಟೆಲ್ ಉದ್ಯಮ ಆರಂಭಗೊಂಡಿರುವುದರಿಂದ ತರಕಾರಿ, ಮಾಂಸ, ಮೊಟ್ಟೆ ಬೆಲೆಯಲ್ಲಿ ಏರಿಕೆ ಕಂಡಿದೆ. ಇನ್ನಷ್ಟು ದಿನ ಬೆಲೆ ಏರಿಕೆ ಮುಂದುವರಿಯಬಹುದು. ಮಹೇಶ್, ವ್ಯಾಪಾರಿ, ಕೋಲಾರ