ಹೂವಿನಹಡಗಲಿಯ ತಾಲೂಕು ಕ್ರೀಡಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ದಸರಾ ಕ್ರೀಡಾಕೂಟದಲ್ಲಿ ಕಬಡ್ಡಿ ಪಂದ್ಯ ನಡೆಯಿತು. 
ಜಿಲ್ಲೆ

ಮಾನಸಿಕ ಸಮತೋಲನಕ್ಕೆ ಕ್ರೀಡೆಗಳು ಸಹಕಾರಿ

ಹೂವಿನಹಡಗಲಿ: ಕ್ರೀಡೆಯು ಮನೋಚೈತನ್ಯ ಹಾಗೂ ಉಲ್ಲಾಸ ನೀಡುವ ಮೂಲಕ ಉತ್ತಮ ಆರೋಗ್ಯಕ್ಕೆ ಸಹಕಾರಿಯಾಗಿದೆ ಎಂದು ಬಿಇಒ ವಿ.ಮಹೇಶ ಪೂಜಾರ ಹೇಳಿದರು.

ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಕ್ರೀಡಾ ಇಲಾಖೆ, ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಗುರುವಾರ ಆಯೋಜಿಸಿದ್ದ ತಾಲೂಕು ಮಟ್ಟದ ದಸರಾ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.

ಮಾನಸಿಕ ಸಮತೋಲನ ಕಾಪಾಡಿಕೊಳ್ಳಲು ಕ್ರೀಡೆಗಳು ಸಹಕಾರಿಯಾಗಿವೆ. ಸ್ಪರ್ಧಾತ್ಮಕ ಯುಗದಲ್ಲಿ ಯುವಕರು ಹೆಚ್ಚು ಕ್ರೀಡೆಗಳಲ್ಲಿ ಭಾಗವಹಿಸುವ ಮೂಲಕ ಕ್ರೀಡಾ ನೈಪುಣ್ಯತೆ ಹೊಂದಿ ಸಾಧನೆ ಮಾಡಬೇಕು ಎಂದರು.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ವಿ.ಬಿ.ಜಗದೀಶ ಮಾತನಾಡಿ, ಕ್ರೀಡೆಗಳು ಮನುಷ್ಯನ ವ್ಯಕ್ತಿತ್ವವನ್ನು ವಿಕಸನಗೊಳಿಸುವುದರ ಜತೆಗೆ ಸಹೋದರತ್ವ ಭಾವನೆ ಬೆಳೆಸುತ್ತವೆ ಎಂದರು.

ಪುರಸಭೆ ಸದಸ್ಯ ಲೀಲಾ ಅಟವಾಳಗಿ ಮಾತನಾಡಿದರು. ಖೋಖೋ, ವಾಲಿಬಾಲ್ ಮತ್ತು ಕಬಡ್ಡಿ ಸೇರಿದಂತೆ ಇತರ ಕ್ರೀಡೆಗಳಲ್ಲಿ ತಾಲೂಕಿನ ವಿವಿಧ ಭಾಗಗಳ ಪಟುಗಳು ಭಾಗವಹಿಸಿದ್ದರು. ಕ್ಷೇತ್ರ ಸಮನ್ವಯಾಧಿಕಾರಿ ಎ.ಕೋಟೆಪ್ಪ, ಗೃಹರಕ್ಷಕ ದಳದ ಸೀನಿಯರ್ ಪ್ಲಾಟೂನ್ ಕಮಾಂಡರ್ ಕೆ.ರಾಜಾಪೀರ್, ಕಾನಿಪ ಸಂಘದ ತಾಲೂಕು ಅಧ್ಯಕ್ಷ ಎಂ.ನಿಂಗಪ್ಪ, ತಾಲೂಕು ದೈಹಿಕ ಶಿಕ್ಷಣ ಅಧೀಕ್ಷಕ ಮುಸ್ತಾಫಾ ಇತರರಿದ್ದರು.