ಮೈಸೂರು: ವಿಶ್ವವಿಖ್ಯಾತ ಅರಮನೆ ಅಂಗಳದಲ್ಲಿ ಹೂವಿನ ಲೋಕವೇ ಅನಾವರಣಗೊಂಡಿದ್ದು, ಪುಷ್ಪಗಳಲ್ಲಿ ಅರಳಿರುವ ವಿವಿಧ ಆಕೃತಿಗಳು ಕಣ್ಮನ ಸೆಳೆಯುತ್ತಿವೆ.
ಮೈಸೂರು ಅರಮನೆ ಮಂಡಳಿ ವತಿಯಿಂದ ಆಯೋಜಿಸಿರುವ 10 ದಿನಗಳ ಫಲಪುಷ್ಪ ಪ್ರದರ್ಶನ-2023ಕ್ಕೆ ಚಾಲನೆ ದೊರೆಯಿತು. ಪ್ರತಿ ವರ್ಷದಂತೆ ಈ ಸಲವೂ ಹೂವಿನ ಮೇಳ ಪುಷ್ಪ ಪ್ರೇಮಿಗಳನ್ನು ಆಕರ್ಷಿಸುತ್ತಿದೆ. ಸಾರ್ವಜನಿಕರು, ಪ್ರವಾಸಿಗರು ಇಲ್ಲಿಗೆ ಭೇಟಿ ನೀಡಬಹುದು.
ಹೂವಿನ ರೂಪಗೊಂಡಿರುವ ಜಿಲ್ಲೆಯ ಸೋಮನಾಥಪುರದ ಚೆನ್ನಕೇಶವ ದೇವಾಲಯದ ಈ ಸಲದ ವಿಶೇಷ. ಯುನೆಸ್ಕೋ ಪಟ್ಟಿಗೆ ಈ ದೇವಾಲಯ ಸೇರ್ಪಡೆಗೊಂಡಿದೆ. ಇದರ ಪ್ರಯುಕ್ತ ಇದರ ಆಕೃತಿ ನಿರ್ಮಿಸಲಾಗಿದೆ. ಕೆಂಪುಗುಲಾಬಿ, ಚೆಂಡು ಹೂವು ಸೇರಿದಂತೆ ವಿವಿಧ ಬಗೆಯ ಗುಲಾಬಿಯಿಂದ ವಿಶೇಷವಾಗಿ ಅಲಂಕಾರ ಮಾಡಲಾಗಿದೆ. 50 ಅಡಿ ಅಗಲ, 20 ಅಡಿ ಉದ್ದ, 28 ಅಡಿ ಎತ್ತರ ಈ ದೇವಾಲಯದ ಎಲ್ಲ ಕಣ್ಣು ಕುಕ್ಕುತ್ತಿದೆ.
ಸಿರಿಧಾನ್ಯದಲ್ಲೂ ವಿವಿಧ ಆಕೃತಿಗಳು ಮೇಳೈಸಿವೆ. ಹಂಪಿಯ ಕಲ್ಲಿನ ರಥ, ವಿರುಪಾಕ್ಷ ಸ್ವಾಮಿ, ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್, ಶ್ರೀಕಂಠದತ್ತ ನರಸಿಂಹರಾಜ ಒಡೆಯರ್, ರಾಣಿ ಕೆಂಪನಂಜಮ್ಮಣ್ಣಿ ಆಕೃತಿ ಧಾನ್ಯದಲ್ಲಿ ಕಳೆಗಟ್ಟಿವೆ.
ದಸರಾ ಗಜಪಡೆಯ ಮಾಜಿ ನಾಯಕ ಅರ್ಜುನ ಆನೆ ಮಾದರಿ ನಿರ್ಮಾಣದ ಮೂಲಕ ಭಾವಪೂರ್ಣ ನಮನ ಸಲ್ಲಿಸಲಾಗಿದೆ. ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಯಸಳೂರು ಬಳಿ ಕಾಡಾನೆ ಸೆರೆ ಕಾರ್ಯಾಚರಣೆಯಲ್ಲಿ ಒಂಟಿ ಸಲಗ ದಾಳಿಗೆ ಅರ್ಜುನ ಆನೆ ಮೃತಪಟ್ಟಿತ್ತು. ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ಬರೋಬ್ಬರಿ 8 ಬಾರಿ ಅಂಬಾರಿ ಹೊತ್ತಿದ್ದ ಈ ಆನೆಗೆ (63 ವರ್ಷ) ಶ್ರದ್ಧಾಂಜಲಿ ಅರ್ಪಿಸಲಾಗಿದೆ.
ವಿವಿಧ ಬಗೆಯ ಆಕೃತಿಗಳು ಸಾರ್ವಜನಿಕರನ್ನು ಕೈಬೀಸಿ ಕರೆಯುತ್ತವೆ. ‘ಕರ್ನಾಟಕ ರಾಜ್ಯ’ ಎಂಬ ಹೆಸರಿಟ್ಟು 50 ವರ್ಷ ಸಂದ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯದ ನಕ್ಷೆ ಇಲ್ಲಿ ವೀಕ್ಷಣೆಗೆ ಲಭ್ಯ. ಶಿವಲಿಂಗ, ಓರೆಯಾಗಿರುವ ಹೂವಿನ ಕುಂಡ ಮಾದರಿ ಚಿತ್ರ, ಹುಲಿ ಮೇಲೆ ಕುಳಿತಿರುವ ಮಲೈ ಮಹದೇಶ್ವರಸ್ವಾಮಿ, ನವಿಲು, ಶಿವಲಿಂಗ ಮಾದರಿ ವಿಶೇಷ ಎನಿಸಿವೆ.
‘ಉಳುವ ಯೋಗಿಯ ನೋಡಲ್ಲಿ’ ಗೀತೆಯಲ್ಲಿ ವರನಟ ಡಾ. ರಾಜ್‌ಕುಮಾರ್ ಎತ್ತುಗಳಿಂದ ಉಳುಮೆ ಮಾಡುತ್ತಿರುವ ಮಾದರಿ, ಟಾಂಗಾ ಗಾಡಿ ಅರಳಿದೆ. ಹೂವಿನ ಅಲಂಕೃತ ಬೈನಾಕ್ಯುಲಾರ್ ಮೂಲಕ ಅರಮನೆ, ಚೆನ್ನಕೇಶವ ದೇಗುಲ ವೀಕ್ಷಿಸಬಹುದು
ಕಲ್ಲಂಗಡಿ ಹಣ್ಣಿನಲ್ಲಿ ವಿವಿಧ ಗಣ್ಯರ ಭಾವಚಿತ್ರಗಳನ್ನು ಕೆತ್ತಲಾಗಿದೆ. ಕಿತ್ತೂರು ರಾಣಿ ಚೆನ್ನಮ್ಮ, ಜಯಚಾಮರಾಜೇಂದ್ರ ಒಡೆಯರ್, ಡಾ.ಬಿ.ಆರ್.ಅಂಬೇಡ್ಕರ್, ಗಾಂಧೀಜಿ, ಕುವೆಂಪು, ದ.ರಾ.ಬೇಂದ್ರೆ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವ ಡಾ.ಎಚ್.ಸಿ.ಮಹದೇವಪ್ಪ, ಸ್ವಾತಂತ್ರೃ ಹೋರಾಟಗಾರರ ಚಿತ್ರಗಳನ್ನು ಕಲ್ಲಂಗಡಿ ಹಣ್ಣಿನ ಮೇಲೆ ಬಿಡಿಸಲಾಗಿದೆ.
ಚಿಟ್ಟೆ, ಹದ್ದಿನ ಹೂವಿನ ಆಕೃತಿ ಎದುರು ಸಾರ್ವಜನಿಕರು ಸೆಲ್ಫಿ ತೆಗೆಸಿಕೊಳ್ಳಲು ಮುಗಿಬಿದ್ದಿದ್ದರು. ಹೃದಯ ಮಾದರಿ ಸೆಲ್ಫಿ ಪಾಯಿಂಟ್, ಚೋಟಾ ಭೀಮ್, ಪೋಕಿಮ್ಯಾನ್, ಸ್ಪ್ಪೈಡರ್ ಮ್ಯಾನ್, ಶಕ್ತಿಮಾನ್, ಡಾಲ್ಫಿನ್, ಅಣಬೆ ಆಕೃತಿಗಳು ಗಮನ ಸೆಳೆದವು. ಹೂವಿನ ಅಲಂಕಾರಗೊಂಡು ಸಂವಿಧಾನದ ಪೀಠಿಕೆ ಮಾದರಿ ಅರಿವು ಮೂಡಿಸಿತು.
ಅರಮನೆಯ ಫಲಪುಷ್ಪ ಪ್ರದರ್ಶನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರು. ಮೊದಲ ಬಾರಿಗೆ ನಾಡದೇವತೆ ಚಾಮುಂಡೇಶ್ವರಿ ದೇವಿಯ ಮೆರವಣಿಗೆ ನಡೆಯಿತು.
ಸಿಎಂ ಆಗಮಿಸುತ್ತಿದ್ದಂತೆ ಆನೆಗಳು ಸೊಂಡಿಲೆತ್ತಿ ನಮಸ್ಕರಿಸಿದವು. ನಂತರ ಸಿಎಂ ಚಾಮುಂಡೇಶ್ವರಿ ತಾಯಿಗೆ ಪುಷ್ಪಾರ್ಚನೆ ಮಾಡಿ, ಮೆರವಣಿಗೆಗೆ ಚಾಲನೆ ನೀಡಿದರು. ಅರಮನೆಯ ರಾಜಲಾಂಛನ ಬಿರುದು, ಬಾವಲಿಗಳು, ವಿವಿಧ ಕಲಾ ಪ್ರಕಾರಗಳೊಂದಿಗೆ ರಥೋತ್ಸವ ನಡೆಯಿತು.
ಶ್ವೇತ ವರಾಹ ಸ್ವಾಮಿ ದೇವಸ್ಥಾನ ಹೊರಟ ರಥೋತ್ಸವಕ್ಕೆ ನಂದಿಕಂಬ, ಮಂಗಳವಾದ್ಯ, ಪೊಲೀಸ್ ವಾದ್ಯಗೋಷ್ಠಿ, ಗಾರುಡಿಬೊಂಬೆ, ರಾಜಪರಂಪರೆ ಪೋಷಾಕುಧಾರಿಗಳು, ಕಹಳೆ, ಛತ್ರಿ ಚಾಮರ, ಭರತನಾಟ್ಯ ಇನ್ನಿತರ ಕಲಾತಂಡಗಳ ಪ್ರದರ್ಶನ ಮೆರುಗು ನೀಡಿತು.
ಫಲಪುಷ್ಪ ವೀಕ್ಷಣೆ ಸಂದರ್ಭದಲ್ಲಿ ಅರಮನೆ ಆನೆಗಳಾದ ಚಂಚಲ ಮತ್ತು ಪ್ರೀತಿ ಗಣ್ಯರಿಗೆ ಹೂಮಳೆ ಸುರಿಸಿದವು. ಸೆಲ್ಫಿ ಪಾಯಿಂಟ್‌ನಲ್ಲಿ ಸಿಎಂ ಫೋಟೊ ತೆಗೆಸಿಕೊಂಡರು. ರಾಜಪರಂಪರೆಯ ಹಳೆಯ ವಿಶೇಷ ಛಾಯಾಚಿತ್ರ ಪ್ರದರ್ಶನ, ದಸರಾ ಪರಂಪರೆ ಸಾರುವ ಸಾಕ್ಷ್ಯಚಿತ್ರವನ್ನು ಸುಮಾರು 10 ನಿಮಿಷ ವೀಕ್ಷಿಸಿದರು. ಅದರಲ್ಲೂ ‘ಮರೆಯೋದುಂಟೆ ಮೈಸೂರು ದೊರೆಯ… ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್..’ ಸಾಕ್ಷ್ಯಚಿತ್ರವನ್ನು ತದೇಕಚಿತ್ತದಿಂದ ವೀಕ್ಷಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಶಾಸಕ ಟಿ.ಎಸ್.ಶ್ರೀವತ್ಸ, ಎಂಎಲ್‌ಸಿ ಡಾ.ಡಿ.ತಿಮ್ಮಯ್ಯ, ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ನಗರ ಪೊಲೀಸ್ ಆಯುಕ್ತ ಬಿ.ರಮೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.