ಶ್ರೀರಂಗಪಟ್ಟಣದ ವೆಲ್ಲೆಸ್ಲಿ ಹಳೆಯ ಸೇತುವೆ ಕೆಳಭಾಗಕ್ಕೆ ತಾಗಿ ಹರಿಯುತ್ತಿರುವ ಕಾವೇರಿ ಪ್ರವಾಹದ ನೀರು. 
ಜಿಲ್ಲೆ

ಶ್ರೀರಂಗಪಟ್ಟಣ ತಾಲೂಕಿನ ಕಾವೇರಿ ನದಿ ಪಾತ್ರದಲ್ಲಿ ಪ್ರವಾಹ

ಶ್ರೀರಂಗಪಟ್ಟಣ: ಕೃಷ್ಣರಾಜ ಸಾಗರ ಜಲಾಶಯದಿಂದ ಹೆಚ್ಚುವರಿ ನೀರನ್ನು ಜೀವನದಿ ಕಾವೇರಿಗೆ ಹರಿಸಿದ ಹಿನ್ನೆಲೆಯಲ್ಲಿ ಸೋಮವಾರ ತಾಲೂಕಿನ ಕಾವೇರಿ ನದಿ ಪಾತ್ರಗಳಲ್ಲಿ ಪ್ರವಾಹ ಸ್ಥಿತಿ ತಲೆದೋರಿದೆ.

ಕಾವೇರಿ ಜಲಾನಯನ ಪ್ರದೇಶ ಮೇಲ್ಭಾಗದಲ್ಲಿ ಹಲವು ದಿನಗಳಿಂದ ಉತ್ತಮ ಮಳೆಯಾಗಿ ಅಧಿಕ ಪ್ರಮಾಣದಲ್ಲಿ ನೀರು ಕನ್ನಂಬಾಡಿ ಅಣೆಕಟ್ಟೆಗೆ ಹರಿದು ಬರುತ್ತಿರುವ ಹಿನ್ನೆಲೆಯಲ್ಲಿ ಡ್ಯಾಂ ಸುರಕ್ಷತೆಗಾಗಿ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಹೆಚ್ಚುವರಿ ನೀರನ್ನು ಕಾವೇರಿ ನದಿಗೆ ಹೊರಬಿಟ್ಟಿದ್ದಾರೆ.

ಪ್ರಸ್ತುತ ಜಲಾಶಯಕ್ಕೆ ಒಳಹರಿವು ಹೆಚ್ಚಿದ್ದು, ಅಣೆಕಟ್ಟೆ ಕೆಳಭಾಗದ ಪ್ರದೇಶಗಳಾದ ಎಡಮುರಿ, ಬಲಮುರಿ, ಕಾರೇಕುರ, ಪಾಲಹಳ್ಳಿ, ರಂಗನತಿಟ್ಟು ಪಕ್ಷಿಧಾಮ, ಸಾಯಿಧಾಮ ಗೌತಮಕ್ಷೇತ್ರ, ರಾಂಪುರ, ಬಂಗಾರದೊಡ್ಡಿ ನಾಲೆ, ಚಂದ್ರವನ, ಪಶ್ಚಿಮವಾಹಿನಿ, ಎಡತಿಟ್ಟು, ಉತ್ತರ ಕಾವೇರಿಯ ಜಿ.ಬಿ.ಹೊಳೆ, ಸ್ನಾನಘಟ್ಟ, ವಾಟರ್‌ಗೇಟ್, ಬಿದ್ದಕೋಟೆ ಗಣಪತಿ, ವೆಲ್ಲೆಸ್ಲಿ ಸೇತುವೆ, ಸಂತೇಮಾಳ ಬಡಾವಣೆ, ಆನಂದರೈಸ್ ಮಿಲ್ ಸ್ನಾನಘಟ್ಟ, ಶ್ರೀ ನಿಮಿಷಾಂಬ ದೇಗುಲ, ಬಿ.ಆರ್.ಕೊಪ್ಪಲು ಗುಂಜಾನರಸಿಂಹಸ್ವಾಮಿ ದೇಗುಲ, ಶ್ರೀಕಾಶಿ ವಿಶ್ವನಾಥ ದೇಗುಲ, ಕರಿಘಟ್ಟದ ಪಾದದ ಲೋಕಪಾವನಿ ಘಟ್ಟ, ದಕ್ಷಿಣ ಕಾವೇರಿಯ ಗಂಜಾಂನ ಚಂದಗಾಲು ರಸ್ತೆ, ಗೋಸಾಯ್ ಘಾಟ್, ತ್ರಿವೇಣಿ ಸಂಗಮ, ಚಂದಗಾಲು, ಮೇಳಾಪುರ, ಮರಳಗಾಲ, ದೊಡ್ಡಪಾಳ್ಯ,ಚಿಕ್ಕಪಾಳ್ಯ, ಹಂಗರಹಳ್ಳಿ, ಮಹದೇವಪುರ, ಮಂಡ್ಯದಕೊಪ್ಪಲು ಬೋರೆದೇವರಗುಡಿ, ರಾಜಪರಮೇಶ್ವರಿ ಅಣೆಕಟ್ಟೆ, ರಾಮಸ್ವಾಮಿ ಗೆಂಡೆಹೊಸಹಳ್ಳಿ ಪಕ್ಷಿಧಾಮ ವ್ಯಾಪ್ತಿಯ ಸ್ಥಳಗಳ ತೀರಗಳಲ್ಲಿ ರಭಸವಾಗಿ ಕಾವೇರಿ ಉಕ್ಕಿ ಹರಿಯುತ್ತಿದ್ದು, ಯಾವುದೇ ಅನಾಹುತ ಉಂಟಾಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಜನರು ನದಿತೀರದ ಪ್ರದೇಶಕ್ಕೆ ತೆರಳದಂತೆ ತಾಲೂಕು ಆಡಳಿತ ನಿರ್ಬಂಧ ಹೇರಿ ಆದೇಶ ಹೊರಡಿಸಿದ್ದು, ಪೊಲೀಸರನ್ನು ನಿರಂತರ ಗಸ್ತು ಹಾಕಲು ನಿಯೋಜಿಸಲಾಗಿದೆ.

ರಂಗನತಿಟ್ಟು ಪಕ್ಷಿಧಾಮ ಸಂಪೂರ್ಣ ಬಂದ್

ಶ್ರೀರಂಗಪಟ್ಟಣ: ರಂಗನತಿಟ್ಟು ಪಕ್ಷಿಧಾಮ ಒಳಭಾಗದ ಕಾವೇರಿ ನದಿಯಲ್ಲಿ 85 ಸಾವಿರ ಕ್ಯೂಸೆಕ್ ಪ್ರಮಾಣದಲ್ಲಿ ನೀರು ಹರಿಯುತ್ತಿರುವ ಹಿನ್ನೆಲೆಯಲ್ಲಿ ಧಾಮದ ಅಧಿಕಾರಿಗಳು ದೋಣಿ ವಿಹಾರ ಸ್ಥಗಿತ, ಪ್ರವಾಸಿಗರು ಮತ್ತು ಸ್ಥಳೀಯ ಜನರ ಪ್ರವೇಶಕ್ಕೆ ನಿರ್ಬಂಧಿಸಿದ್ದಾರೆ.

ಧಾಮದ ಒಳಭಾಗದ ಉದ್ಯಾನ ಹಾಗೂ ಪಾದಚಾರಿ ಮಾರ್ಗವು ಪ್ರವಾಹದ ನೀರಲ್ಲಿ ಸಂಪೂರ್ಣ ಮುಳುಗಿ ಹೋಗಿದ್ದು, ನಿಲ್ದಾಣದಲ್ಲಿ ಕಟ್ಟಿಹಾಕಲಾಗಿರುವ ದೋಣಿಗಳು ಕೊಚ್ಚಿಹೋಗುವಂತೆ ರಭಸವಾಗಿ ನದಿಯ ಪ್ರವಾಹದ ನೀರು ಹರಿಯುತ್ತಿದೆ.

ಪಕ್ಷಿಧಾಮದ ಎಲ್ಲ ದ್ವೀಪಗಳು ಸಂಪೂರ್ಣ ಮುಳುಗಡೆಯಾಗಿದ್ದು, ಸದ್ಯಕ್ಕೆ ವಿದೇಶಿ ಹಕ್ಕಿಗಳು ಹೊರತುಪಡಿಸಿ ಧಾಮದಲ್ಲಿರುವ ಸ್ಥಳೀಯ ಎಲ್ಲ ಪ್ರಭೇದದ ಪಕ್ಷಿಗಳು, ಮೊಸಳೆ, ನೀರುನಾಯಿ ಸೇರಿದಂತೆ ಕಾಡು ಗೂಳಿಗಳು ಸುರಕ್ಷಿತ ಸ್ಥಳಗಳಿಗೆ ಸೇರಿರುವ ಹಿನ್ನೆಲೆಯಲ್ಲಿ ಯಾವುದೇ ಆತಂಕವಿಲ್ಲ. ನದಿಯಲ್ಲಿ ಪ್ರಸ್ತುತ 85 ಸಾವಿರ ಕ್ಯೂಸೆಕ್ ಇರುವ ನೀರಿನ ಪ್ರಮಾಣ 50 ಸಾವಿರ ಕ್ಯೂಸೆಕ್‌ಗೆ ಇಳಿದರೆ ಪ್ರವಾಸಿಗರ ಒಳಪ್ರವೇಶಕ್ಕೆ ಅವಕಾಶ ಕೊಡಲಾಗುವುದು, ಇನ್ನು 10 ಸಾವಿರ ಕ್ಯೂಸೆಕ್ ಒಳಗೆ ನೀರಿನ ಪ್ರಮಾಣ ಇಳಿದರೆ ನದಿಯಲ್ಲಿ ದೋಣಿ ವಿಹಾರವನ್ನು ಪುನಃ ಆರಂಭಿಸಲಾಗುವುದು ಎಂದು ಪಕ್ಷಿಧಾಮದ ಡಿಆರ್‌ಎಫ್‌ಒ ರವಿ ತಿಳಿಸಿದ್ದಾರೆ.

ಇನ್ನು ಪಟ್ಟಣ ಹೊರವಲಯದ ಪ್ರಮುಖ ಶ್ರಾದ್ಧಾ ಕೇಂದ್ರ ಪಶ್ಚಿಮವಾಹಿನಿ ಹಲವು ಕಟ್ಟಡಗಳು ಹಾಗೂ ನದಿ ತೀರದ ಸ್ನಾನಘಟ್ಟಗಳು ಭಾಗಶಃ ಮುಳುಗಿ ಹೋಗಿದ್ದು, ಕಾವೇರಿ ಪ್ರವಾಹದಿಂದ ತುಂಬಿ ಹರಿಯುತ್ತಿದೆ. ಇದರ ನಡುವೆ ಕೆಲ ವೈದಿಕರು ಹಣದಾಸೆಗೆ ಕೆಲ ಸಾರ್ವಜನಿಕರನ್ನು ಕರೆತಂದು ಅಸ್ಥಿ ವಿಸರ್ಜನೆ ಹಾಗೂ ಧಾರ್ಮಿಕ ವಿಧಿ ಕಾರ್ಯಗಳನ್ನು ಕದ್ದು ಮುಚ್ಚಿ ಕೆಲ ಅಸುರಕ್ಷಿತ ಸ್ಥಳಗಳಲ್ಲಿ ನಡೆಸುತ್ತಿದ್ದಾರೆ.

ವೆಲ್ಲೆಸ್ಲಿ ಸೇತುವೆ ತಳತಾಗಿ ಹರಿಯುತ್ತಿರುವ ಕಾವೇರಿ

ಶ್ರೀರಂಗಪಟ್ಟಣದ 221 ವರ್ಷಗಳಷ್ಟು ಪುರಾತನವಾದ ವೆಲ್ಲೆಸ್ಲಿ ಸೇತುವೆ ಸ್ಥಳದಲ್ಲಿ ಕಾವೇರಿಯ ಪ್ರವಾಹ ಬ್ರಿಟಿಷರ ಕಾಲದ ಕಲ್ಲಿನ ಸೇತುವೆಗೆ ತಾಕಿಗೊಂಡು ಹರಿಯುತ್ತಿದ್ದು, ಈ ರಮಣೀಯ ದೃಶ್ಯ ಕಣ್ತುಂಬಿಕೊಳ್ಳಲು ಮೈಸೂರು-ಬೆಂಗಳೂರು ಹೆದ್ದಾರಿಯ ಹೊಸ ಸೇತುವೆ ಮೇಲ್ಭಾಗ ಹಾದು ಹೋಗುವ ವಾಹನ ಸವಾರರು, ಪುರಜನರು ಹಾಗೂ ಕೆಲ ಪ್ರವಾಸಿಗರು ಆಗಮಿಸುತ್ತಿದ್ದು, ಹೆದ್ದಾರಿ ಮೇಲಿಂದ ಸೆಲ್ಫಿ ಫೋಟೋ ಕ್ಲಿಕ್ಕಿಸಿಕೊಳ್ಳುತ್ತಿದ್ದಾರೆ.

ನಿಮಿಷಾಂಬ ದೇಗುಲದ ಸ್ನಾನಘಟ್ಟ ಮುಳುಗಡೆ

ಶ್ರೀರಂಗಪಟ್ಟಣ ಸಮೀಪದ ಗಂಜಾಂನ ನಿಮಿಷಾಂಬ ದೇಗುಲ ಮುಂಭಾಗದ ಕಾವೇರಿ ಸ್ನಾನಘಟ್ಟ ಸಂಪೂರ್ಣ ಮುಳುಗಡೆಯಾಗಿ ದೇಗುಲ ಎಡಭಾಗದ ಅರಳಿಕಟ್ಟೆ ಸಮೀಪಕ್ಕೆ ಬಂದಿದೆ. ನದಿ ತೀರಕ್ಕೆ ಭಕ್ತರು ಮತ್ತು ಸಾರ್ವಜನಿಕರ ಪ್ರವೇಶಕ್ಕೆ ಬ್ಯಾರಿಕೇಡ್ ಅಳವಡಿಸಿ ನಿರ್ಬಂಧ ವಿಧಿಸಲಾಗಿದೆ. ಇದರೊಂದಿಗೆ ಮರಳಗಾಲ, ದೊಡ್ಡಪಾಳ್ಯ, ಚಿಕ್ಕಪಾಳ್ಯ, ಹಂಗರಹಳ್ಳಿ ಹಾಗೂ ಮಹದೇವಪುರ ವ್ಯಾಪ್ತಿಯ ನದಿ ತೀರಗಳಲ್ಲಿನ ಗ್ರಾಮಸ್ಥರ ಕೃಷಿಭೂಮಿ ಮುಳುಗಡೆಯಾಗಿದ್ದು, ಜನ ಜಾನುವಾರುಗಳೊಂದಿಗೆ ನದಿ ಅಂಚಿಗೆ ತೆರಳದಂತೆ ಎಚ್ಚರಿಕೆ ನೀಡಲಾಗಿದೆ.