ಮಡಿಕೇರಿ:
ಕೊಡಗಿನಲ್ಲಿ ಮಳೆಗಾಲದಲ್ಲಿ ಅಬ್ಬರದ ಮಳೆ ಸಾಮಾನ್ಯ. ಇದಕ್ಕೆಲ್ಲಾ ಮಾನಸಿಕವಾಗಿ ಸಿದ್ಧರಾಗಿರುವ ಸ್ಥಳೀಯರು ಮಳೆಗಾಲವನ್ನು ಸವಾಲಾಗಿಯೇ ಸ್ವೀಕರಿಸುತ್ತಾರೆ. ಆದರೆ ಯಾವತ್ತೂ ಮಳೆಗೆ ಹೆದರದ ಕೊಡಗಿನವರನ್ನು 2018ರ ಮುಂಗಾರು ಅಕ್ಷರಶಃ ತತ್ತರಿಸುವಂತೆ ಮಾಡಿತ್ತು. ಮಡಿಕೇರಿ ಮತ್ತು ಸೋಮವಾರಪೇಟೆ ತಾಲೂಕಿನ ಹಲವೆಡೆ ಸಂಭವಿಸಿದ ಭೂಕಸಿತ, ಕುಶಾಲನಗರ ಭಾಗದಲ್ಲಿ ನದಿ ತೀರದ ಬಡಾವಣೆಗಳಲ್ಲಿ ಪ್ರವಾಹದ ಸ್ಥಿತಿ, ನಿರಾಶ್ರಿತರಾದ ಸಾವಿರಕ್ಕೂ ಅಧಿಕ ಕುಟುಂಬಗಳು, 19ಕ್ಕೂ ಹೆಚ್ಚು ಮಂದಿಯ ಪ್ರಾಣಹಾನಿ ದೊಡ್ಡ ಮಟ್ಟದ ಆತಂಕಕ್ಕೆ ಕಾರಣವಾಗಿತ್ತು. ಈ ಸಂದರ್ಭದಲ್ಲಿ ಮನೆ ಕಳೆದುಕೊಂಡು ಸಂತ್ರಸ್ತರಾದವರಿಗೆ ಸರ್ಕಾರ ಈಗಾಗಲೇ ಪುನರ್ವಸತಿ ಕಲ್ಪಿಸಿದೆ.
ನಂತರ 2019ರಲ್ಲೂ ಇದು ಪುನರಾವರ್ತನೆ ಆಯಿತು. ವಿರಾಜಪೇಟೆ ತಾಲೂಕು ತೋರ ಗ್ರಾಮದಲ್ಲಿ ಬೆಟ್ಟ ಕುಸಿದು 10 ಮಂದಿ ಮತ್ತು ಮಡಿಕೇರಿ ತಾಲೂಕು ಕೋರಂಗಾಲದಲ್ಲಿ ಮನೆ ಮೇಲೆ ಬರೆ ಜರಿದು ಐವರು ಸೇರಿ 17 ಮಂದಿ ಮೃತಪಟ್ಟಿದ್ದರು. ಪ್ರವಾಹದಿಂದಾಗಿ 900ಕ್ಕೂ ಅಧಿಕ ಕುಟುಂಬಗಳು ಮನೆ ಕಳೆದುಕೊಂಡು ಬೀದಿಗೆ ಬಂದಿದ್ದವು. 2020ರಲ್ಲೂ ಮತ್ತೆ ಇಂಥದ್ದೇ ಪರಿಸ್ಥಿತಿ ಕಾಣಿಸಿಕೊಂಡಿತ್ತು. ತಲಕಾವೇರಿಯಲ್ಲಿ ಗಜಗಿರಿ ಬೆಟ್ಟ ಕುಸಿದು ಅರ್ಚಕ ಕುಟುಂಬದ ಮೂವರು ಸೇರಿ ಐವರು ಭೂ ಸಮಾಧಿ ಆಗಿದ್ದರು. ಕಾವೇರಿ, ಲಕ್ಷ್ಮಣ ತೀರ್ಥ ಹಾಗೂ ಜಿಲ್ಲೆಯ ಇತರ ನದಿಪಾತ್ರಗಳಲ್ಲಿ ಕಾಣಿಸಿಕೊಂಡ ಪ್ರವಾಹದಿಂದ ಸಾಕಷ್ಟು ಹಾನಿಯೂ ಸಂಭವಿಸಿತ್ತು.
ಆದರೆ 2018ರಲ್ಲಿ ಸರ್ಕಾರ, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ತೋರಿಸಿದ ಕಾಳಜಿ ನಂತರ ವರ್ಷಗಳಲ್ಲಿ ಕಂಡುಬAದಿಲ್ಲ. 2018ರಲ್ಲಿ ಸಂತ್ರಸ್ತರಾದವರ ಪೈಕಿ ಬಹುತೇಕರು ಸುರಕ್ಷಿತ ಸ್ಥಳಗಳಲ್ಲಿ ನೆಲೆ ಕಂಡುಕೊAಡಿದ್ದಾರೆ. ಈ ಭಾಗ್ಯ 2019ರ ನಂತರದ ವಷÀðಗಳಲ್ಲಿ ಮಳೆಯಿಂದ ಬಾಧಿತರಾಗುತ್ತಿರುವವರಿಗೆ ಸಿಕ್ಕಿಲ್ಲ. ನದಿ ತೀರದಲ್ಲಿ ವಾಸ ಮಾಡುವವರಿಗೆ ಶಾಶ್ವತ ಪುನರ್ವಸತಿಯ ಭರವಸೆ ಕೊಟ್ಟಿದ್ದ ಸರ್ಕಾರ ನಂತರ ಅದನ್ನು ಮರೆತುಬಿಟ್ಟಿದೆ. ಈಗಲೂ ಮಳೆಗಾಲ ಶುರುವಾಯಿತೆಂದರೆ ಇವರೆಲ್ಲಾ ಬೆಚ್ಚಿ ಬೀಳುತ್ತಾರೆ. ಅಲ್ಲಲ್ಲಿ ತೆರೆಯುವ ಕಾಳಜಿ ಕೇಂದ್ರಗಳಿಗೆ ಸಾಗಹಾಕುವುದು ಬಿಟ್ಟರೆ ಅಧಿಕಾರಿಗಳು ಬೇರೆ ಏನನ್ನೂ ಮಾಡುತ್ತಿಲ್ಲ. ವಿಚಾರಿಸಿದರೆ ಏನಾದರೊಂದು ಸಬೂಬು ಹೇಳಿ ತಪ್ಪಿಸಿಕೊಳ್ಳುತ್ತಿದ್ದಾರೆ. ಈಗ ಮತ್ತೊಂದು ಮಳೆಗಾಲ ಬಂದಿದೆ. ಸಮಸ್ಯೆ ಮಾತ್ರ ಹಾಗೆಯೇ ಮುಂದುವರಿದಿದೆ. ಈ ಬಗ್ಗೆ ವಿಜಯವಾಣಿ ಓದುಗರು ಲೌಡ್‌ಸ್ಪೀಕರ್‌ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊAಡಿದ್ದಾರೆ.
ಜಿಲ್ಲೆಯಲ್ಲಿ ಮತ್ತೊಂದು ಮಳೆಗಾಲ ಆರಂಭವಾಗಿದೆ. ಆದರೆ 2019ರ ನಂತರದ ಮಳೆಹಾನಿ ಸಂತ್ರಸ್ತರು ಇನ್ನು ಕೂಡ ಶಾಶ್ವತ ಪರಿಹಾರದಿಂದ ವಂಚಿತರಾಗಿದ್ದಾರೆ. ಬದಲಿ ನಿವೇಶನ, ಮನೆಯ ಭರವಸೆಗಳು ಈಡೇರಲೇ ಇಲ್ಲ, ಜನರಿಗೆ ಆಡಳಿತ ವ್ಯವಸ್ಥೆಯ ಮೇಲೆ ನಂಬಿಕೆ ಹೋಗಿದೆ, ಇನ್ನಾದರೂ ಮಲಗಿರುವ ಆಡಳಿತ ವ್ಯವಸ್ಥೆ ಎಚ್ಚೆತ್ತು ಮನೆ ಕಳೆದುಕೊಂಡವರಿಗೆ ಮನೆ ನಿರ್ಮಾಣ ಮಾಡಿಕೊಡಲಿ.
ಗುಣಶ್ರೀ ಪಿ., ಉಪನ್ಯಾಸಕಿ, ಪ್ರಥಮ ದರ್ಜೆ ಕಾಲೇಜು, ಕೊಡ್ಲಿಪೇಟೆ
5 ವರ್ಷ ಕಳೆದರೂ ಮಳೆಹಾನಿ ಸಂತ್ರಸ್ತರಿಗೆ ನೀಡಿದ ಭರವಸೆಗಳು ಈಡೇರದೇ ಇರುವುದು ದುರದೃಷ್ಟಕರ. ಆಡಳಿತ ವರ್ಗದ ಇಚ್ಚಾಶಕ್ತಿಯ ಕೊರತೆ ಇದರಲ್ಲಿ ಎದ್ದು ಕಾಣುತ್ತಿದೆ. ಶಾಶ್ವತ ಪರಿಹಾರ ನೀಡುವ ನಿಟ್ಟಿನಲ್ಲಿ ಪ್ರಯತ್ನಿಸಬೇಕು. ಆಡಳಿತ ವರ್ಗ ತುರ್ತಾಗಿ ಇದಕ್ಕೆ ಪರಿಹಾರವನ್ನು ಕಾರ್ಯರೂಪಕ್ಕೆ ತರಬೇಕು.
ಜಹೀರ್ ಅಹಮ್ಮದ್, ಉಪನ್ಯಾಸಕ, ವಿಘ್ನೇಶ್ವರ ಬಾಲಕಿಯರ ಪದವಿಪೂರ್ವ ಕಾಲೇಜು, ಶನಿವಾರಸಂತೆ
ಮಳೆಹಾನಿ ನಿರಾಶ್ರಿತರಿಗೆ ಸರಿಯಾದ ರೀತಿಯಲ್ಲಿ ಮನೆ ಹಂಚಿಕೆ ಆಗಿಲ್ಲ. ಇನ್ನೂ ಕೆಲವು ಜನರಿಗೆ ಬಾಕಿ ಇದೆ. ಅಧಿಕಾರಿಗಳು ತ್ವರಿತ ಗತಿಯಲ್ಲಿ ಈ ಸಮಸ್ಯೆಯನ್ನು ಬಗೆಹರಿಸಬೇಕು. ಈಗಾಗಲೇ ಮಳೆ ಆರಂಭವಾಗಿದ್ದು ಅನೇಕ ಕುಟುಂಬಗಳು ಸೂರಿಲ್ಲದೆ ಪರಿತಪಿಸುತ್ತಿವೆ. ಫಲಾನುಭವಿಗಳಿಗೆ ಕೂಡಲೇ ಮನೆ ಹಂಚಿಕೆ ಆಗಲಿ
ಟಿ. ಎನ್. ಗೋವಿಂದಪ್ಪ, ಸಂಚಾಲಕ, ಕರ್ನಾಟಕ ದಲಿತ ಸಂಘರ್ಷ ಸಮಿತಿ
ಸರ್ಕಾರ ಬದಲಾದರೂ ಕೂಡ ಈ ಸಮಸ್ಯೆ ಬಗೆಹರಿಯುವಂತೆ ಕಾಣುತ್ತಿಲ್ಲ. ಬಿಟ್ಟಿ ಭಾಗ್ಯಗಳನ್ನು ಕೊಟ್ಟು ಜನರನ್ನು ಸೋಮಾರಿಗಳನ್ನಾಗಿ ಮಾಡುವ ಬದಲು ಮನೆ, ಮಠ, ಸೂರು ಕಳೆದುಕೊಂಡವರಿಗೆ ಒಂದು ಸೂರಿನ ವ್ಯವಸ್ಥೆ ಮಾಡಿಕೊಟ್ಟಿದ್ದರೆ ನಿರಾಶ್ರಿತರು ನೆಮ್ಮದಿಯ ಜೀವನ ಸಾಗಿಸುತ್ತಿದ್ದರು. ಇನ್ನು ಮಂದೆಯಾದರೂ ಜಿಲ್ಲೆಯ ಜನಪ್ರತಿನಿಧಿಗಳು, ಅಧಿಕಾರಿಗಳು ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಲಿ.
ಧನೋಜ್ ಪೊಕ್ಕೊಳಂಡ್ರ, ನರಿಯಂದಡ ಗ್ರಾಮಸ್ಥ, ಚೆಯ್ಯಂಡಾಣೆ
ಹಿಂದಿನ ಸರ್ಕಾರ ನಿವೇಶನ ನೀಡುವ ಭರವಸೆಯನ್ನು ನೀಡಿದ ಮೇರೆಗೆ ಕಳೆದ 5 ವರ್ಷಗಳಿಂದ ಪ್ಲಾಸ್ಟಿಕ್ ಶೆಡ್‌ನಲ್ಲೇ ಜೀವನ ನಡೆಸುತ್ತಿದ್ದೇವೆ. ಈ ಹಿಂದಿನ ಜನಪ್ರತಿನಿಧಿಗಳು ನಮ್ಮನ್ನು ಕಡೆಗಣಿಸಿದ್ದರಿಂದ ಅವರು ಚುನಾವಣೆಯಲ್ಲಿ ಸೋಲುವಂತಾಯಿತು. ಮುಖ್ಯ ಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಶಾಸಕರು ಸಮಸ್ಯೆ ಬಗೆಹರಿಸುವ ವಿಶ್ವಾಸ ಇದೆ. ಇವರು ಅಧಿಕಾರ ಸ್ವೀಕರಿಸಿ ಒಂದು ವರ್ಷ ಕಳೆದರೂ ನಿರಾಶ್ರಿತರ ವಿಚಾರದಲ್ಲಿ ಇನ್ನು ವಿಳಂಬ ಮಾಡಬಾರದು.
ಎಂ.ಎ. ಯಮುನಾ ಸಂತ್ರಸ್ತೆ, ಮಾಜಿ ಅಧ್ಯಕ್ಷೆ, ಗ್ರಾ.ಪಂ. ಸಿದ್ದಾಪುರ
ಸಂತ್ರಸ್ತರ ಸಂಕಟವೇ ಚುನಾವಣೆ ಸಂದರ್ಭದಲ್ಲಿ ಬ್ರಹ್ಮಾಸ್ತ್ರವಾಗಿದ್ದು, ಮಳೆಗಾಲದಲ್ಲಿ ಪ್ರಕೃತಿ ವಿಕೋಪ ಸಂಭವಿಸಿದಾಗ ಹಾಗೂ ಚುನಾವಣೆ ಸಂದರ್ಭದಲ್ಲಿ ದರ್ಶನ ನೀಡುವ ಜನಪ್ರತಿನಿಧಿಗಳು ನಂತರ ಸಂತ್ರಸ್ತರನ್ನು ಕಡೆಗಣಿಸುವರು. ಮತ ಬ್ಯಾಂಕ್ ಸೃಷ್ಟಿಗಾಗಿ ಸಮಸ್ಯೆಯನ್ನು ಸಮಸ್ಯೆಯಾಗಿಯೇ ಉಳಿಸಿಕೊಳ್ಳುವ ಇರಾದೆ ಜನಪ್ರತಿನಿಧಿಗಳದ್ದು
ಕೆ.ಬಿ. ಸುರೇಶ್, ಸಂತ್ರಸ್ತ, ಕರಡಿಗೋಡು ಗ್ರಾಮ
ಸಿದ್ದಾಪುರ ಗ್ರಾಪಂ ವ್ಯಾಪ್ತಿಯಲ್ಲಿ ಸಾಕಷ್ಟು ಖಾಸಗಿ ಜಾಗಗಳು ಮಾರಾಟವಾಗುತ್ತಿವೆ. ಮಾರಾಟಕ್ಕೆ ಇಟ್ಟ ಜಾಗಗಳನ್ನು ಸರ್ಕಾರವೇ ಖರೀದಿಸಬಹುದು. ಸಂತ್ರಸ್ತರಿಗೆ ಬಡಾವಣೆ ನಿರ್ಮಿಸಿಕೊಟ್ಟು ಸಮಸ್ಯೆ ಬಗೆಹರಿಸಬಹುದು.
ಪೂವಮ್ಮ, ಮನೆ ಕಳೆದುಕೊಂಡ ಸಂತ್ರಸ್ತೆ, ಸಿದ್ದಾಪುರ
ಈಗಾಗಲೇ ನದಿ ತೀರದ ಪ್ರವಾಹ ಸಂತ್ರಸ್ತರಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಮಾಲ್ದಾರೆ ಸರ್ವೇ ನಂಬರ್ 72/15ರ ಸುಮಾರು 10.50 ಎಕರೆ ಖಾಸಗಿ ಜಮೀನು ಖರೀದಿಸುವ ಸಂಬAಧ ಪ್ರಸ್ತಾಪನೆಯನ್ನು ಸರ್ಕಾರಕ್ಕೆ ಕಳುಹಿಸಿ ಕೊಡಲಾಗಿದೆ. ಹಣ ಬಿಡುಗಡೆಗೊಂಡ ನಂತರ ಈ ಜಮೀನನ್ನು ಸೈಟುಗಳಾಗಿ ಪರಿವರ್ತಿಸಿ ಹಕ್ಕುಪತ್ರದೊಂದಿಗೆ ಹಂಚಲಾಗುವುದು. ರಾಜೀವ್ ಗಾಂಧಿ ವಸತಿ ನಿಗಮದಿಂದ ಮನೆ ನಿರ್ಮಾಣಕ್ಕೆ ಆರ್ಥಿಕ ನೆರವು ನೀಡಿದರೆ ಪ್ರತಿಯೊಬ್ಬರನ್ನೂ ಸ್ಥಳಾಂತರಿಸಲಾಗುವುದು. ನಿಯಮ ಬಾಹಿರವಾಗಿ ನದಿ ತೀರದಲ್ಲಿ ಮನೆ ನಿರ್ಮಾಣ ಮಾಡಿದವರಿಗೆ ನೋಟಿಸ್ ಜಾರಿ ಮಾಡಲಾಗುವುದು.
ರಾಮಚಂದ್ರ, ತಹಸೀಲ್ದಾರ್, ವಿರಾಜಪೇಟೆ
2019ರ ಮಳೆಗಾಲದ ನಂತರ ಹಲವು ಪ್ರದೇಶಗಳಲ್ಲಿ ಮನೆ ಹಾಗೂ ಆಸ್ತಿ ಪಾಸ್ತಿ ಅಪಾರ ಪ್ರಮಾಣದಲ್ಲಿ ನಷ್ಟವಾಗಿದೆ. ಆ ಸಂದರ್ಭದಲ್ಲಿ ಸರ್ಕಾರ ಕೊಟ್ಟ ಭರವಸೆ ಕೇವಲ ಭರವಸೆಯಾಗಿ ಉಳಿದಿದೆ. ಯಾವುದೇ ಫಲಾನುಭವಿಗಳಿಗೂ ಸರ್ಕಾರಿದಿಂದ ಸೂಕ್ತವಾದಂಥ ನಿವೇಶನಗಳಾಗಲಿ ಆಸ್ತಿ-ಪಾಸ್ತಿಯಲ್ಲಿ ಆದಂತಹ ನಷ್ಟಗಳಿಗಾಗಲಿ ಯಾವುದೇ ರೀತಿಯ ಪರಿಹಾರ ಇದುವರೆಗೂ ದೊರೆತಿಲ್ಲ. ಈತನಕ ಬಂದAಥ ಸರ್ಕಾರ ಕೇವಲ ಜನರು ಕಷ್ಟದಲ್ಲಿದ್ದಾಗ ಆಶ್ವಾಸನೆಯನ್ನು ಕೊಡುತ್ತಿದೆಯೇ ಹೊರತು ಯಾವುದೆ ರೀತಿ ಅವರ ಕಷ್ಟಗಳಿಗೆ ಸ್ಪಂದಿಸುವ ಕೆಲಸ ಮಾಡುವಂತೆ ಕಾಣುತ್ತಿಲ್ಲ.
ನಾಗರಾಜು ಹೆಚ್.ವಿ., ಅರ್ಥಶಾಸ್ತ್ರ ಉಪನ್ಯಾಸಕ, ಬಿಟ್ಟಂಗಾಲ ಗ್ರಾಮ
2018 ರಲ್ಲಿ ಕೊಡಗಿನಲ್ಲಿ ಪ್ರಕೃತಿ ವಿಕೋಪ ಸಂಭವಿಸಿದ್ದು ಅನೇಕ ಕಡೆ ಭೂಕುಸಿತವಾಗಿತ್ತು. ಮಲ್ಲಳ್ಳಿ ಗ್ರಾಮದಲ್ಲೂ ಭೂಕುಸಿತ ಸಂಭವಿಸಿ ರೈತರು ನಷ್ಟ ಅನುಭವಿಸಿದ್ದರು. ಆದರೆ ಇದುವರೆಗೆ ಪರಿಹಾರ ಸಿಕ್ಕಿಲ್ಲ. ಅರ್ಜಿ ನೀಡಿದರೂ ಕಂದಾಯ ಅಧಿಕಾರಿಗಳು ಸ್ಥಳಕ್ಕೆ ಬಂದು ನಷ್ಟದ ವರದಿಯನ್ನು ಸಲ್ಲಿಸಿಲ್ಲ. ಮಳೆಗಾಲದಲ್ಲಿ ಪ್ರತಿ ವರ್ಷ ಕೃಷಿ ಫಸಲು ಹಾನಿಯಾಗುತ್ತದೆ. ದಾಖಲಾತಿ ಸರಿಯಿಲ್ಲ ಎಂಬ ಕಾರಣಕ್ಕೆ ಪರಿಹಾರ ಸಿಗುತ್ತಿಲ್ಲ.
ವೆಂಕಟೇಶ್, ಕೃಷಿಕ, ಮಲ್ಲಳ್ಳಿ ಗ್ರಾಮ. ಸೋಮವಾರಪೇಟೆ.