ಎಚ್.ಡಿ.ಕೋಟೆ: ಕೇರಳದ ವಯನಾಡು, ಕಲ್ಪೆಟ್ಟ ಜಿಲ್ಲೆ ಹಾಗೂ ರಾಜ್ಯದ ಕೊಡಗಿನಲ್ಲಿ ಭಾರಿ ಮಳೆ ಆಗುತ್ತಿರುವುದರಿಂದ ಕಬಿನಿ ಜಲಾಶಯಕ್ಕೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು ನದಿ ಪಾತ್ರದ ಜನರಲ್ಲಿ ಪ್ರವಾಹ ಭೀತಿಯ ಆತಂಕ ಎದುರಾಗಿದೆ.
ವಯನಾಡು ಹಾಗೂ ಕಲ್ಪೆಟ್ಟ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ 170 ಮಿ.ಮೀ.ಗೂ ಹೆಚ್ಚು ಮಳೆ ಆಗುತ್ತಿದೆ. ಜತೆಗೆ ಕೇರಳ ಮತ್ತು ಕೊಡಗು ಜಿಲ್ಲೆಯ ಗಡಿ ಭಾಗದ ಪಾಪನಾಶಿನಿ ಹೊಳೆ ಮೈದುಂಬಿ ಹರಿಯುತ್ತಿದ್ದು, ಕಬಿನಿ ಜಲಾಶಯಕ್ಕೆ 30 ಸಾವಿರ ಕ್ಯೂಸೆಕ್‌ಗಿಂತ ಹೆಚ್ಚು ಒಳಹರಿವು ಇದೆ. ಜಲಾಶಯದ ಸುರಕ್ಷತೆ ದೃಷ್ಟಿಯಿಂದ 35 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗಿದೆ. ಈಗಾಗಲೇ ಜಲಾಶಯ ಮುಂಭಾಗದ ಸೇತುವೆ ಮುಳುಗಡೆ ಆಗಿ ಬೀಚನಹಳ್ಳಿ-ಬಿದರಹಳ್ಳಿ ಸಂಪರ್ಕ ಕಲ್ಪಿಸುವ ರಸ್ತೆ ಕಡಿತಗೊಂಡು ಇಪ್ಪತ್ತಕ್ಕೂ ಹೆಚ್ಚು ಗ್ರಾಮಗಳು ಸರಗೂರು ಮಾರ್ಗವಾಗಿ ಸಂಚರಿಸಬೇಕಾದ ಪರಿಸ್ಥಿತಿ ಇದೆ.
ಜಲಾಶಯದಿಂದ 40 ಸಾವಿರ ಕ್ಯೂಸೆಕ್ ನೀರು ನದಿಗೆ ಬಿಟ್ಟರೆ ತಾಲೂಕಿನ ಆಗತ್ತೂರು ಹಾಗೂ ಕೆ.ಬೆಳ್ತೂರು ಸೇತುವೆ ಮುಳುಗಡೆ ಆಗುತ್ತದೆ. 45 ಸಾವಿರ ಕ್ಯೂಸೆಕ್ ಬಿಟ್ಟರೆ ಹೊಮ್ಮರಗಳ್ಳಿ ಸೇತುವೆ ಮುಳುಗಡೆ ಆಗಿ, ನೂರಾರು ಗ್ರಾಮಗಳಿಗೆ ಸಂಪರ್ಕ ಕಡಿತ ಗೊಂಡು ಸಾರ್ವಜನಿಕರು ಪರದಾಟ ನಡೆಸುತ್ತಾರೆ.
2019ರಲ್ಲಿ ಜಲಾಶಯಕ್ಕೆ ಒಂದು ಲಕ್ಷಕ್ಕೂ ಹೆಚ್ಚು ಕ್ಯೂಸೆಕ್ ನೀರು ಹರಿದು ಬಂದು ಅಷ್ಟೇ ಪ್ರಮಾಣದ ನೀರನ್ನು ನದಿಗೆ ಬಿಟ್ಟಿದ್ದರಿಂದ ತಾಲೂಕಿನಲ್ಲಿ ಪ್ರವಾಹ ಉಂಟಾಗಿ ದೊಡ್ಡ ತುಂಬಸೋಗೆ ಸೇತುವೆ ಮುಳುಗಡೆ ಆಗಿತ್ತು. ಜತೆಗೆ ಅನೇಕ ಗ್ರಾಮಗಳು ಪ್ರವಾಹಕ್ಕೆ ಸಿಲುಕಿ ಗ್ರಾಮ ಗ್ರಾಮಗಳ ನಡುವೆ ಸಂಪರ್ಕ ಕಡಿತಗೊಂಡಿತ್ತು.
ಆ ಸಂದರ್ಭ ಜಲಾಶಯದ ಮುಂಭಾಗದಲ್ಲಿರುವ ಬಿದರಹಳ್ಳಿ ವೃತ್ತದ ಗ್ರಾಮದ ಸುಮಾರು ನಲವತ್ತು ಕುಟುಂಬಗಳ ಮನೆಗಳು ನೀರಿನಲ್ಲಿ ಮುಳುಗಡೆ ಆಗಿ ಅಪಾರ ಪ್ರಮಾಣದ ಆಸ್ತಿ ಪಾಸ್ತಿ ನಷ್ಟ ಉಂಟಾಗಿತ್ತು. ಅದೇ ರೀತಿ ಕಬಿನಿ ಹಿನ್ನೀರಿನ ಡಿ.ಬಿ ಕುಪ್ಪೆ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳು ಹಾಗೂ ಹಾಡಿಗಳು ನೀರಿನಲ್ಲಿ ಮುಳುಗಿ ಜನ ಜೀವನ ಅಸ್ತವ್ಯಸ್ತವಾಗಿತ್ತು. ಜಿಲ್ಲಾ ಮತ್ತು ತಾಲೂಕು ಆಡಳಿತ ನಿರಾಶ್ರಿತರ ನೆರವಿಗೆ ಬಂದು ನೆಮ್ಮದಿ ಕೇಂದ್ರಗಳನ್ನು ತೆರೆದು ಆಶ್ರಯ ಕಲ್ಪಿಸಿದ್ದರು.