ಜಮಖಂಡಿ ತಾಲೂಕಿನ ಮುತ್ತೂರ ನಡುಗಡ್ಡೆಯಲ್ಲಿನ ಮನೆಗಳು ಜಲಾವೃತಗೊಂಡಿರುವುದು. 
ಜಿಲ್ಲೆ

ನಡುಗಡ್ಡೆ ಪ್ರದೇಶಗಳಿಗೆ ಜಲಾವೃತ ಭೀತಿ

ಜಮಖಂಡಿ: ಮಹಾರಾಷ್ಟ್ರದ ಕೃಷ್ಣಾ ಕಣಿವೆಯಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಗೆ ಜೀವನದಿ ಕೃಷ್ಣೆ ವ್ಯಾಪಕ ಪ್ರಮಾಣದಲ್ಲಿ ತುಂಬಿ ಹರಿಯುತ್ತಿದೆ. ಮಹಾಪೂರ ನಡುಗಡ್ಡೆ ಪ್ರದೇಶದ ಜನರಲ್ಲಿ ಆತಂಕ ಮೂಡಿಸಿದೆ. ತಾಲೂಕಿನ ಮುತ್ತೂರ ಗಡ್ಡೆಯಲ್ಲಿನ ಅಪ್ಪಯ್ಯನ ದೇವರಗುಡಿ, ಐದಕ್ಕೂ ಅಧಿಕ ಮನೆಗಳು ಬುಧವಾರ ಜಲಾವೃತಗೊಂಡಿವೆ.

ತಾಲೂಕಿನ ಹಿಪ್ಪರಗಿ ಬ್ಯಾರೇಜ್‌ಗೆ ಬುಧವಾರ 1.30 ಲಕ್ಷ ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಮುತ್ತೂರ ನಡುಗಡ್ಡೆಯಲ್ಲಿನ ಜಾನುವಾರು ಶೆಡ್‌ಗಳು, ರೈತರ ಮನೆಗಳು ಜಲಾವೃತಗೊಂಡಿವೆ. ಕೃಷ್ಣಾ ನದಿಯಲ್ಲಿ ಎರಡೂವರೆ ಲಕ್ಷಕ್ಕೂ ಅಧಿಕ ಕ್ಯೂಸೆಕ್ ನೀರು ಹರಿಯುತ್ತಿದ್ದಂತೆ ನದಿ ಪಾತ್ರದ ಬಹುತೇಕ ಜನವಸತಿ ಪ್ರದೇಶಗಳು ಮುಳುಗಡೆಯಾಗಲಿವೆ.

ಮಹಾರಾಷ್ಟ್ರ ಮತ್ತು ಕರ್ನಾಟಕ ಜಲಾಶಯಗಳ ಅಧಿಕಾರಿಗಳು ಸಮನ್ವಯ ಸಾಧಿಸಿ ಆಲಮಟ್ಟಿ ಜಲಾಶಯದಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ನದಿಗೆ ಬಿಡುತ್ತಿರುವುದರಿಂದ ಪ್ರವಾಹ ಸಾಧ್ಯತೆ ಇಲ್ಲ ಎಂದು ತಾಲೂಕಾಡಳಿತ ತಿಳಿಸಿದೆ.

ದ್ವೀಪಗಳಾಗುವ ಪ್ರದೇಶಗಳು

ಕೃಷ್ಣೆಯಲ್ಲಿ ಅಂದಾಜು 2.5 ರಿಂದ 3.5 ಲಕ್ಷಕ್ಕೂ ಅಧಿಕ ನೀರು ಹರಿದು ಬಂದರೆ ಮುತ್ತೂರು ನಡುಗಡ್ಡೆ, ಆಲಗೂರ ಗೌಡರ ಗಡ್ಡೆ, ನರಸಗೊಂಡ ವಸ್ತಿ, ತುಬಚಿ ಕಾಸರ ನಡುಗಡ್ಡೆಗಳು ದ್ವೀಪಗಳಾಗಿ ಮಾರ್ಪಡಲಿವೆ.

110 ಎಕರೆ ಪ್ರದೇಶ ನಡುಗಡ್ಡೆ: ಮುತ್ತೂರ ನಡುಗಡ್ಡೆಯ 110 ಎಕರೆ ಪ್ರದೇಶದಲ್ಲಿ 38 ಕುಟುಂಬಗಳ 200ಕ್ಕೂ ಅಧಿಕ ಜನರು, 223 ಜಾನುವಾರುಗಳಿವೆ. ಪ್ರತಿವರ್ಷ ನೆರೆ ಬಂದಾಗ ಅಧಿಕಾರಿಗಳು ಬಂದು ಕರಿತಾರ‌್ರಿ.. ನಮಗ ಜೀವನ ಕಟ್ಟಿಕೊಳ್ಳಾಕ ವ್ಯವಸ್ಥೆ, ಪರಿಹಾರ ನೆನಪ ತೆಗೆಯುವುದಿಲ್ಲ ಎಂದು ನಿವಾಸಿಗಳು ವಿಜಯವಾಣಿ ಎದುರು ತಮ್ಮ ಅಳಲು ತೋಡಿಕೊಂಡರು.

ಎದ್ದೋಗ್ರಿ ಅಂದ್ರ ಎಲ್ಲಿಗೋಗೊದು?

ಮಾಪೂರ ಬರತೈತಿ, ಎದ್ದೋಗ್ರಿ ಅಂದ್ರ ಎಲ್ಲಿಗೋಗೊದು? ನಮ್ಮ ಜಮೀನುಗಳಿಗೆ ಪರಿಹಾರ ಕೊಟ್ಟು ಠಿಕಾಣಿ ತೋರಿಸ್ರಿ, ಎದ್ದೋಗಲು ಸಿದ್ಧ ಅದೀವ್ರಿ...

ಕೃಷ್ಣಾ ತೀರದ ಮುತ್ತೂರ ನಡುಗಡ್ಡೆಯ ನಿವಾಸಿಗಳ ಆಕ್ರೋಶದ ಮಾತುಗಳಿವು. ಮಳೆಗಾಲದಲ್ಲಿ ಕೃಷ್ಣಾ ನದಿ ಉಕ್ಕೇರಿದರೆ ಮುತ್ತೂರ ಗಡ್ಡೆಯಲ್ಲಿ ಜನಜೀವನ ಅಸ್ತವ್ಯಸ್ತಗೊಳ್ಳುವುದು ಸರ್ವೇ ಸಾಮಾನ್ಯವಾಗಿದೆ.

ಶಾಶ್ವತ ಸ್ಥಳಾಂತರಕ್ಕೆ ಹಿನ್ನಡೆ

ಶಾಶ್ವತ ನೆಲೆಗೆ ಗುರುತಿಸಿರುವ ಪ್ರದೇಶದಲ್ಲಿ ಮೂಲ ಸೌಕರ್ಯ ಇಲ್ಲ. ರೈತರ ಜಮೀನುಗಳಿಗೆ ಪರಿಹಾರ ನೀಡಿಲ್ಲ. ಮೂಲ ನೆಲೆ ತೊರೆಯಲು ಜನತೆಗೆ ಮನಸ್ಸು ಇಲ್ಲದಿರುವುದು ಪ್ರವಾಹ ಪೀಡಿತ ಹಳ್ಳಿಗಳ ಶಾಶ್ವತ ಸ್ಥಳಾಂತರಕ್ಕೆ ಹಿನ್ನಡೆ ಆಗಲು ಕಾರಣ ಎನ್ನಲಾಗಿದೆ.