ಜಿಲ್ಲೆ

ಊರಕೇರಿ ಭಾಗದಲ್ಲಿ ಪ್ರವಾಹ ಪರಿಸ್ಥಿತಿ - ದೋಣಿ ಮೂಲಕ ಜನರ ಸ್ಥಳಾಂತರ

ಕುಮಟಾ: ತಾಲೂಕಿನಾದ್ಯಂತ ಶುಕ್ರವಾರ ವಿಪರೀತ ಗಾಳಿಯೊಂದಿಗೆ ಮಳೆಯಾಗಿದ್ದು ವಾಲಗಳ್ಳಿ ಪಂಚಾಯಿತಿ ವ್ಯಾಪ್ತಿಯ ಊರಕೇರಿ ಭಾಗದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಕೋನಳ್ಳಿ ಹಾಗೂ ಊರಕೇರಿಯಲ್ಲಿ ಕಾಳಜಿ ಕೇಂದ್ರ ತೆರೆಯಲಾಗಿದೆ. ಕಳೆದ 24ಗಂಟೆಯಲ್ಲಿ 113.3ಮಿಮೀ ಮಳೆಯಾಗಿದೆ.

ಮಳೆಯಿಂದಾಗಿ ಚಂದಾವರ-ಬಡಗಣಿ ಹೊಳೆ ತುಂಬಿ ಹರಿಯತೊಡಗಿದೆ. ಇದರಿಂದಾಗಿ ಕೋನಳ್ಳಿಯಿಂದ ಕೆಳಕ್ಕೆ ಊರಕೇರಿ, ಗುಡ್ನಕಟ್ಟು, ಕೆಳಗಿನಕೇರಿ ಭಾಗದಲ್ಲಿ ಹೊಳೆಯ ನೀರು ಮನೆಗಳಿಗೆ ನುಗ್ಗಲಾರಂಭಿಸಿದೆ. ತಕ್ಷಣ ಕಾರ್ಯಪ್ರವೃತ್ತವಾದ ಗ್ರಾಮ ಪಂಚಾಯಿತಿ ಹಾಗೂ ತಾಲೂಕಾಡಳಿತ ಪ್ರವಾಹಪೀಡಿತ ಪ್ರದೇಶದ ಜನರನ್ನು ದೋಣಿಗಳ ಮೂಲಕ ಸ್ಥಳಾಂತರಿಸಿದೆ.

ಬಡಗಣಿ ನದಿಯಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿರುವುದರಿಂದ ಕೂಜಳ್ಳಿ ಹಾಗೂ ವಾಲಗಳ್ಳಿ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ. ಕೋನಳ್ಳಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತೆರೆದ ಕಾಳಜಿ ಕೇಂದ್ರದಲ್ಲಿ ಕೋನಳ್ಳಿ ಗ್ರಾಮದ ಹಿರೇಕಟ್ಟು ಮಜಿರೆಯ ಜನರನ್ನು ಸ್ಥಳಾಂತರಿಸಲಾಗಿದೆ. ಇಲ್ಲಿ 10 ಕುಟುಂಬಗಳ 23 ಜನ ಆಶ್ರಯ ಪಡೆದಿದ್ದಾರೆ.

ವಾಲಗಳ್ಳಿ ಪಂಚಾಯಿತಿಯ ಕಡವು ಹಿರಿಯ ಪ್ರಾಥಮಿಕ ಶಾಲೆಯ ಕಾಳಜಿ ಕೇಂದ್ರದಲ್ಲಿ ಕೆಳಗಿನ ಕೇರಿ ಹಾಗೂ ಗುಮ್ಮನಗುಡಿ ಮಜಿರೆಯ ಜನರನ್ನು ಸ್ಥಳಾಂತರಿಸಲಾಗಿದೆ. ಇಲ್ಲಿ 12 ಕುಟುಂಬಗಳ 32 ಜನ ಆಶ್ರಯ ಪಡೆದಿದ್ದಾರೆ. ಪ್ರವಾಹ ಸಂತ್ರಸ್ತರಿಗೆ ಕಾಳಜಿ ಕೇಂದ್ರದಲ್ಲಿ ಊಟೋಪಚಾರ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಹಸೀಲ್ದಾರ್ ಶ್ರೀಕೃಷ್ಣ ಕಾಮಕರ ತಿಳಿಸಿದ್ದಾರೆ.

ಉಳಿದಂತೆ ವ್ಯಾಪಕವಾಗಿ ಸುರಿಯುತ್ತಿರುವ ಗಾಳಿ ಮಳೆಯಿಂದಾಗಿ ವಿದ್ಯುತ್ ಕಣ್ಣಾಮುಚ್ಚಾಲೆಯಾಡುತ್ತಿದೆ. ವಾತಾವರಣದಲ್ಲಿ ಚಳಿಯ ಪ್ರಮಾಣವೂ ಹೆಚ್ಚಾಗಿದ್ದು ನಿರಂತರ ಮಳೆ ಕೃಷಿ ಕಾರ್ಯಗಳಿಗೂ ಅಡ್ಡಿಯಾಗಿದೆ. ಅಘನಾಶಿನಿ ಹಾಗೂ ಚಂಡಿಕಾ ನದಿಗಳೂ ತುಂಬಿ ಹರಿಯತೊಡಗಿದ್ದು, ಇದೇರೀತಿ ಮಳೆ ಮುಂದುವರಿದರೆ ಪ್ರವಾಹದ ಆತಂಕ ಎದುರಾಗಲಿದೆ.