ರಾಯಬಾಗ ತಾಲೂಕಿನ ಜಮಖಂಡಿ-ಮಿರಜ್ ರಾಜ್ಯ ಹೆದ್ದಾರಿ ಮೇಲಿನ ಕುಡಚಿ ಸೇತುವೆ ಮುಳುಗಡೆಯಾಗಿರುವುದನ್ನು ಸಚಿವ ಸತೀಶ ಜಾರಕಿಹೊಳಿ ಗುರುವಾರ ಪರಿಶೀಲಿಸಿದರು. ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಎಸ್ಪಿ ಡಾ.ಭೀಮಾಶಂಕರ ಗುಳೇದ, ಜಿಪಂ ಸಿಇಒ ರಾಹುಲ್ ಶಿಂಧೆ, ದಿನೇಶಕುಮಾರ ಮೀನಾ, ಸುಭಾಷ ಸಂಪಗಾಂವಿ, ಕೆ.ಎಸ್. ಕುಲಕರ್ಣಿ, ಲಕ್ಷ್ಮಣರಾವ್ ಚಿಂಗಳೆ ಇತರರಿದ್ದರು. 
ಜಿಲ್ಲೆ

ಪ್ರವಾಹ ನಿರ್ವಹಣೆಗೆ ಸಕಲ ಸಿದ್ಧತೆ

ಶಂಕರ ಗೆಜ್ಜಿ

ಬೆಳಗಾವಿ: ಮಹಾರಾಷ್ಟ್ರ ಹಾಗೂ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಗುರುವಾರ ರಾಯಬಾಗ ತಾಲೂಕಿನ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

ಜಮಖಂಡಿ-ಮಿರಜ್ ರಾಜ್ಯ ಹೆದ್ದಾರಿ ಮೇಲಿನ ಕುಡಚಿ ಸೇತುವೆ ಮುಳುಗಡೆಯಾಗಿದ್ದು, ನೀರಿನ ಮಟ್ಟದ ಏರಿಳಿತದ ಕುರಿತು ಮಾಹಿತಿ ಪಡೆದರು. ಬಳಿಕ ಹಳೇ ದಿಗ್ಗೇವಾಡಿಯಲ್ಲಿ ಪ್ರವಾಹ ಪರಿಸ್ಥಿತಿ ವೀಕ್ಷಿಸಿದರು. ಈ ವೇಳೆ ಕುಡಚಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರವಾಹದಿಂದ ತೊಂದರೆಗೊಳಗಾಗುವ ಪ್ರದೇಶಗಳಲ್ಲಿ ಈಗಾಗಲೇ ಅಗತ್ಯ ಮುಂಜಾಗ್ರತೆ ಕೈಗೊಳ್ಳಲಾಗಿದೆ. ಪ್ರವಾಹಕ್ಕೆ ಒಳಗಾಗಬಹುದಾದ ಗ್ರಾಮಗಳನ್ನು ಗುರುತಿಸಲಾಗಿದ್ದು, ಸ್ಥಳಾಂತರಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.

ಸದ್ಯಕ್ಕೆ ಮಹಾರಾಷ್ಟ್ರದಲ್ಲಿ ಮಳೆ ಜಾಸ್ತಿಯಾಗುತ್ತಿದ್ದು, ಮೂರು ಲಕ್ಷ ಕ್ಯೂಸೆಕ್ ನೀರು ಬಿಟ್ಟಾಗ ಪ್ರವಾಹ ಪರಿಸ್ಥಿತಿ ಉದ್ಭವಿಸಿ ತೊಂದರೆಯಾಗಲಿದೆ. ಆದ್ದರಿಂದ ಈ ಬಗ್ಗೆ ನಿರಂತರವಾಗಿ ನಿಗಾ ವಹಿಸಲಾಗಿದೆ ಎಂದರು. ಸಂಭವನೀಯ ಪ್ರವಾಹ ನಿರ್ವಹಣೆಗೆ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ. ಮಳೆ ಹೆಚ್ಚಾಗುತ್ತಿರುವುದರಿಂದ ರಕ್ಷಣಾ ತಂಡ, ಕಾಳಜಿ ಕೇಂದ್ರ ಸೇರಿ ಅಗತ್ಯ ಮುಂಜಾಗ್ರತೆ ಕೈಗೊಳ್ಳಲಾಗಿದೆ. ಅಗತ್ಯ ಪ್ರದೇಶಗಳಲ್ಲಿ ಕಾಳಜಿ ಕೇಂದ್ರಗಳ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಜನರು ಬಂದರೆ ಯಾವುದೇ ತೊಂದರೆ ಇಲ್ಲ. ಕೆಲವು ಜನರು ಕಾಳಜಿ ಕೇಂದ್ರ ಅಥವಾ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಳ್ಳಲು ಹಿಂದೇಟು ಹಾಕುತ್ತಿದ್ದು, ಅಧಿಕಾರಿಗಳು ಅವರ ಮನವೊಲಿಸಲಿದ್ದಾರೆ ಎಂದರು.

ಅತಿವೃಷ್ಟಿಯಿಂದ ಮನೆ ಕಳೆದುಕೊಂಡ ಕುಟುಂಬಗಳಿಗೆ ಮನೆ ನಿರ್ಮಾಣಕ್ಕೆ ರಾಜ್ಯ ಸರ್ಕಾರದಿಂದ 3 ಲಕ್ಷ ರೂ. ನೀಡಲು ಚಿಂತನೆ ನಡೆಸಲಾಗುತ್ತಿದೆ. ಇದರೊಂದಿಗೆ ಕೇಂದ್ರ ಸರ್ಕಾರದ ನೆರವು ಒದಗಿಸುವ ಜತೆಗೆ ಇತರ ಯೋಜನೆಗಳ ಪ್ರಯೋಜನ ಒದಗಿಸಲಾಗುವುದು. 5 ಲಕ್ಷ ರೂ. ಘೋಷಣೆ ಮಾಡಿದ್ದಾಗ ಎಲ್ಲರಿಗೂ ಪರಿಹಾರ ತಲುಪಿಸುವುದು ಸಾಧ್ಯವಾಗಿಲ್ಲ. ಆದ್ದರಿಂದ ನೆರವು ಮೊತ್ತ ಕಡಿಮೆಯಾದರೆ ಎಲ್ಲರಿಗೂ ಪರಿಹಾರ ತಲುಪಿಸಬಹುದು ಎಂಬುದು ಸರ್ಕಾರದ ಉದ್ದೇಶವಾಗಿದೆ ಎಂದರು.

ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಮಾತನಾಡಿ, ಜಿಲ್ಲೆಯಲ್ಲಿ ಸದ್ಯಕ್ಕೆ 35 ಬೋಟ್ ಲಭ್ಯವಿದ್ದು, ಹೆಚ್ಚು ಬೋಟ್‌ಗಳು ಅವಶ್ಯವಿದ್ದಲ್ಲಿ ಕಾರವಾರದಿಂದ ತರಿಸಲಾಗುವುದು. ಸದ್ಯಕ್ಕೆ ಆತಂಕಪಡುವ ಪರಿಸ್ಥಿತಿ ಇಲ್ಲ ಎಂದರು. ಮಹಾರಾಷ್ಟ್ರದಲ್ಲಿ 3 ದಿನ ರೆಡ್ ಅಲರ್ಟ್ ಇರುತ್ತದೆ. ನೀರು ಬಿಡುಗಡೆ ಕುರಿತು ಅಲ್ಲಿನ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಪರಸ್ಪರ ಮಾಹಿತಿ ವಿನಿಮಯ ಮಾಡಿಕೊಳ್ಳಲಾಗುತ್ತಿದೆ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ, ಜಿಪಂ ಸಿಇಒ ರಾಹುಲ್ ಶಿಂಧೆ, ಪ್ರೊಬೇಷನರಿ ಐಎಎಸ್ ಅಧಿಕಾರಿ ದಿನೇಶಕುಮಾರ ಮೀನಾ, ಚಿಕ್ಕೋಡಿ ಉಪವಿಭಾಗಾಧಿಕಾರಿ ಸುಭಾಷ ಸಂಪಗಾಂವಿ, ರಾಯಬಾಗ ತಹಸೀಲ್ದಾರ್ ಕೆ.ಎಸ್ ಕುಲಕರ್ಣಿ, ಬುಡಾ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ ಇತರರಿದ್ದರು.