ಜಿಲ್ಲೆ

ತೇಲುವ ಅಕ್ಕಿ ಪ್ಲಾಸ್ಟಿಕ್ ಅಲ್ಲ, ಸಾರವರ್ಧಕ

ರಮೇಶ್​ ಕುಮಾರ್​​ ಬಿ ಎಡಮೋಳೆ

ರಾಮನಗರ: ಬಿಸಿಯೂಟಕ್ಕೆ ಬಳಕೆ ಮಾಡುವ ಅಕ್ಕಿಯಲ್ಲಿ ತೇಲುತ್ತಿದ್ದ ವಸ್ತು ಪ್ಲಾಸ್ಟಿಕ್ ಅಕ್ಕಿಯಲ್ಲ, ಅದು ಸಾರವರ್ಧಕ ಅಕ್ಕಿಯಾಗಿದ್ದು, ಶಿಕ್ಷಕರು ಯಾವುದೇ ಆತಂಕವಿಲ್ಲದೆ ಮಕ್ಕಳಿಗೆ ನೀಡಬಹುದು ಎಂದು ಅಕ್ಷರ ದಾಸೋಹ ಯೋಜನೆಯ ಶಿಕ್ಷಣಾಧಿಕಾರಿ ಪ್ರಸನ್ನ ಸ್ಪಷ್ಟನೆ ನೀಡಿದ್ದಾರೆ.

ಎರಡು ದಿನಗಳ ಹಿಂದೆ ತಾಲೂಕಿನ ಪಾದರಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಬಿಸಿಯೂಟಕ್ಕೆ ಅಕ್ಕಿಯನ್ನು ತೊಳೆಯಲು ಹೋದಾಗ ಶೇ.10 ಅಕ್ಕಿ ತೇಲುತ್ತಿತ್ತು. ಇದನ್ನು ಕಂಡ ಶಿಕ್ಷಕರು ಮತ್ತು ಬಿಸಿಯೂಟ ತಯಾರಕರು ಆತಂಕಗೊಂಡಿದ್ದರು. ಅಲ್ಲದೆ ಇದು ಪ್ಲಾಸ್ಟಿಕ್ ಅಕ್ಕಿ ಇರಬಹುದು ಎನ್ನುವ ಅನುಮಾನ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದ್ದ ಅಧಿಕಾರಿಗಳು ಪ್ಲಾಸ್ಟಿಕ್ ಅಕ್ಕಿ ಎನ್ನಲಾದ ವಸ್ತುಗಳನ್ನು ಪರೀಕ್ಷೆಗೆ ಪ್ರಯೋಗಾಲಯಕ್ಕೆ ಕಳುಹಿಸಿಕೊಟ್ಟಿದ್ದರು. ಇದರ ಪರೀಕ್ಷಾ ವರದಿ ಸಹ ಬಂದಿದ್ದು, ಇದು ಸಾರವರ್ಧಕ ಅಕ್ಕಿ ಎಂದು ಸ್ಪಷ್ಟನೆ ನೀಡಿದೆ.

ಕೇಂದ್ರದಿಂದಲೂ ಸ್ಪಷ್ಟನೆ: ಈ ಸಂಬಂಧ ಈಗಾಗಲೇ ಕೇಂದ್ರ ಸರ್ಕಾರವೂ ಸ್ಪಷ್ಟನೆ ನೀಡಿದೆ. ಮಧ್ಯಾಹ್ನದ ಬಿಸಿಯೂಟ ಯೋಜನೆಗೆ ಬಳಕೆ ಮಾಡುವ ಅಕ್ಕಿಯಲ್ಲಿ ಶೇ.10 ಪ್ರಮಾಣದಲ್ಲಿ ಸಾರವರ್ಧಕ ಅಕ್ಕಿಯನ್ನು ಮಿಶ್ರಣ ಮಾಡಲಾಗುತ್ತಿದೆ. ಈ ಮೂಲಕ ಸೂಕ್ಷ್ಮ ಪೋಷಕಾಂಶಗಳ ಕೊರತೆಯಿಂದ ಬಳಲುತ್ತಿರುವ ಮಕ್ಕಳಿಗೆ ನೀಡಲಾಗುತ್ತದೆ. ಈ ಅಕ್ಕಿ ಬಳಕೆ ಮಾಡುವು ದರಿಂದ ಯಾವುದೇ ತೊಂದರೆ ಇಲ್ಲ ಎಂದು ತಿಳಿಸಿದೆ.

ಏನಿದು ಸಾರವರ್ಧಕ ಅಕ್ಕಿ?: ಸಾರವರ್ಧಕ ಅಕ್ಕಿಯಲ್ಲಿ ಕಬ್ಬಿಣ, ಜಿಂಕ್, ಪೋಲಿಕ್ ಆಸಿಡ್, ವಿಟಮಿನ್ ಬಿ12, ವಿಟಮಿನ್ ಎ ಪೋಷಕಾಂಶಗಳನ್ನು ಭಾರತೀಯ ಆಹಾರ ನಿಗಮದಿಂದಲೇ ಮಿಶ್ರಣ ಮಾಡಿ ಬಿಸಿಯೂಟ ಯೋಜನೆಗೆ ಪೂರೈಕೆ ಮಾಡಲಾಗುತ್ತಿದೆ.

ಪಾದರಹಳ್ಳಿ ಸರ್ಕಾರಿ ಶಾಲೆಯಲ್ಲಿ ದೊರೆತದ್ದು ಸಾರವರ್ಧಕ ಅಕ್ಕಿಯಾಗಿದ್ದು, ಭಾರತೀಯ ಆಹಾರ ನಿಗಮವೇ ಇದನ್ನು ಪೂರೈಕೆ ಮಾಡುತ್ತಿದೆ. ಯಾವುದೇ ಆತಂಕವಿಲ್ಲದೆ ಶಿಕ್ಷಕರು ಮಕ್ಕಳಿಗೆ ಉಣಬಡಿಸಬಹುದಾಗಿದೆ. | ಪ್ರಸನ್ನ ಶಿಕ್ಷಣಾಧಿಕಾರಿ, ಅಕ್ಷರದಾಸೋಹ, ರಾಮನಗರ