ಜಿಲ್ಲೆ

ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ರೈತರಿಗೆ ಅನ್ಯಾಯ: ರಾಜ್ಯಸರ್ಕಾರದ ವಿರುದ್ಧ ಪಲ್ಟಿ ಚಳವಳಿ

ಕೆ.ಎನ್.ರಾಘವೇಂದ್ರ

ಮಂಡ್ಯ: ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ರೈತರನ್ನ ಪಲ್ಟಿ ಹೊಡೆಸುತ್ತಿದೆ ಎಂದು ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಶುಕ್ರವಾರ ಪಲ್ಟಿ ಹೊಡೆದು ವಿಭಿನ್ನವಾಗಿ ಪ್ರತಿಭಟನೆ ನಡೆಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪಲ್ಟಿ ಹೊಡೆದ ಬಿಜೆಪಿ ಕಾರ್ಯಕರ್ತ ಶಿವಕುಮಾರ ಆರಾಧ್ಯ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಕರ್ನಾಟಕಕ್ಕೆ ನಿರಂತರ ಅನ್ಯಾಯ ಆಗುತ್ತಿದ್ದರೂ ನ್ಯಾಯ ಪಡೆಯಲು ಯಾವುದೇ ಕ್ರಮ ವಹಿಸುತ್ತಿಲ್ಲ ಎಂದು ದೂರಿದರು.

ರೈತರ ಜೀವನಾಡಿ ಕೃಷ್ಣರಾಜಸಾಗರದಲ್ಲಿ ನೀರಿನ ಲಭ್ಯತೆ,ಕುಡಿಯುವ ನೀರು ಮತ್ತು ಬೆಳೆದು ನಿಂತಿರುವ ಬೆಳೆ ರಕ್ಷಣೆಗೆ ಬೇಕಾಗಿರುವ ನೀರು ಕುರಿತು ರಾಜ್ಯ ಸರ್ಕಾರಕ್ಕೆ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಮನವರಿಕೆ ಮಾಡಿಕೊಡಲು ಮುಂದಾಗಬೇಕಾಗಿದೆ. ಅಂತೆಯೇ ಕಾವೇರಿ ನದಿ ನೀರಿನ ವಿಚಾರದಲ್ಲಿ ಕನ್ನಡಿಗರು ಮತ್ತು ರೈತರ ಹಿತ ಕಾಪಾಡಲು ಸರ್ಕಾರಿ ನೌಕರರು ಕಾವೇರಿ ಹೋರಾಟಕ್ಕೆ ಧುಮುಕಿ ಬೆಂಬಲಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಸಾತನೂರು ಯೋಗೇಶ್, ಹೊಸಹಳ್ಳಿ ಶಿವು, ಮಾದರಾಜೇಅರಸು, ಆನಂದ, ಕಿರಣ್ ಇತರರಿದ್ದರು.