ಮಂಗಳೂರು: ಕರೊನಾ ಸೋಂಕು ಭೀತಿ ಹಿನ್ನೆಲೆಯಲ್ಲಿ ಕುವೈತ್ ಸರ್ಕಾರ ಭಾರತ ಸಹಿತ ಏಳು ರಾಷ್ಟ್ರಗಳ ನಡುವೆ ವಿಮಾನ ಯಾನ ರದ್ದುಪಡಿಸಿರುವುದರಿಂದ ಕುವೈತ್ ಜತೆ ನಿಕಟ ಸಂಬಂಧ ಹೊಂದಿರುವ ಕರಾವಳಿಯ ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಭಾಗದ ಆರ್ಥಿಕತೆ ಮೇಲೂ ಹೊಡೆತದ ಆತಂಕ ಎದುರಾಗಿದೆ.
ಕುವೈತ್‌ನ ತೈಲ, ಅನಿಲ ಹಾಗೂ ಇಂಧನ ವಲಯದಲ್ಲಿ ಕರಾವಳಿ ಅನೇಕ ಜನರು ವ್ಯವಹಾರ ನಡೆಸುತ್ತಿದ್ದು, ಟೆಂಡರ್ ಪ್ರಕ್ರಿಯೆಯಲ್ಲೂ ಭಾಗವಹಿಸುತ್ತಾರೆ. ದಿಢೀರ್ ವಿಮಾನ ರದ್ದಾಗಿರುವ ಕಾರಣ ವ್ಯವಹಾರಗಳು ರದ್ದು ಅಥವಾ ಮುಂದೂಡಲ್ಪಡುತ್ತವೆ ಎಂದು ಅನಿವಾಸಿ ಭಾರತೀಯರೊಬ್ಬರು ಆತಂಕ ವ್ಯಕ್ತಪಡಿಸಿದ್ದಾರೆ.
ಅಲ್ಲದೆ ಕುವೈತ್‌ನಲ್ಲಿ ಉದ್ಯೋಗಕ್ಕೆ ರಜಾ ಪಡೆದು ಊರಿಗೆ ಬಂದವವರೂ ಆತಂಕಕ್ಕೊಳಗಾಗಿದ್ದಾರೆ. ಒಮ್ಮೆ ವೀಸಾ ನವೀಕರಣ ಅವಧಿ ಮುಗಿದರೆ ಅವರ ಕಂಪನಿ ಮತ್ತೆ ಅವರಿಗೆ ಹೊಸ ವೀಸಾ ಕಳುಹಿಸಿಕೊಡಬೇಕು. ಅವರಲ್ಲಿ ಹೊಸ ವೀಸಾ ಕೋಟಾ ಇರಬೇಕು. ಕೆಲವರು ತಮ್ಮ ಕೆಲಸವನ್ನೇ ಕಳೆದುಕೊಳ್ಳುವ ಪರಿಸ್ಥಿತಿಯೂ ಇದೆ. ಕುವೈತ್‌ನಿಂದ ಊರಿಗೆ ಆಗಮಿಸುವವರಿಗೂ ಸಮಸ್ಯೆಯಾಗಿದೆ.
ಮಂಗಳೂರು-ಕುವೈತ್ ನಡುವೆ ಏರ್ ಇಂಡಿಯಾ ಎಕ್ಸ್‌ಪ್ರೆಸ್ ನೇರ ಸಂಪರ್ಕವಿದ್ದು, ಏರ್ ಇಂಡಿಯಾ, ಇಂಡಿಗೊ, ಜಜಿರಾ, ಕುವೈತ್ ಏರ್‌ವೇಸ್ ಸಹಿತ ವಿವಿಧ ಸಂಪರ್ಕ ವಿಮಾನಗಳು ಸಂಚರಿಸುತ್ತಿದ್ದವು.
ಮಾಸಾಂತ್ಯದವರೆಗೆ ಪ್ರವಾಸಿ ಹಡಗುಗಳಿಗೆ ನಿರ್ಬಂಧ
ಕರೊನಾ ಆತಂಕ ಹಿನ್ನೆಲೆಯಲ್ಲಿ ನವಮಂಗಳೂರು ಬಂದರು ಸಹಿತ ಭಾರತದ ಎಲ್ಲ ಬಂದರುಗಳಿಗೆ ಮಾರ್ಚ್ 31 ತನಕ ವಿದೇಶಿ ಪ್ರವಾಸಿ ಹಡಗುಗಳಿಗೆ ಪ್ರವೇಶ ನಿರಾಕರಿಸಲಾಗಿದೆ.
ಕೇಂದ್ರ ಸರ್ಕಾರ ಶುಕ್ರವಾರ ಈ ಬಗ್ಗೆ ಆದೇಶ ಹೊರಡಿಸಿದೆ. ಸರ್ಕಾರದ ನಿರ್ದೇಶನ ಪ್ರಕಾರ ಶನಿವಾರ ಮುಂಜಾನೆ ಆರು ಗಂಟೆಗೆ ಮಂಗಳೂರು ನವಮಂಗಳೂರು ಬಂದರು ತಲುಪಬೇಕಾಗಿದ್ದ ಎಂಎಸ್‌ಸಿ ಲಿರಿಕಾ ಪ್ರವಾಸಿ ಹಡಗಿಗೆ ಕೊನೆಯ ಕ್ಷಣದಲ್ಲಿ ಬಂದರು ಪ್ರವೇಶ ನಿರಾಕರಿಸಲಾಗಿತ್ತು. ಯುರೋಪ್, ಕೊಲ್ಲಿ ರಾಷ್ಟ್ರಗಳ ಮಾರ್ಗದಲ್ಲಿ ಆಗಮಿಸುತ್ತಿದ್ದ ಈ ಹಡಗು 1560 ಪ್ರಯಾಣಿಕರು ಸಂಚರಿಸುವ ಸಾಮರ್ಥ್ಯ ಹೊಂದಿದೆ.
ಸಾವಿರಕಂಬ ಬಸದಿ ವಿದೇಶಿಗರ ಭೇಟಿ ಮುಂದೂಡಿಕೆ
ಮೂಡುಬಿದಿರೆ: ಇತಿಹಾಸ ಪ್ರಸಿದ್ಧ ಸಾವಿರ ಕಂಬ ಬಸದಿ ಸಹಿತ ವಿವಿಧ ತಾಣಗಳನ್ನು ವೀಕ್ಷಿಸಲು ಆಗಮಿಸುತ್ತಿದ್ದ 200ಕ್ಕೂ ಅಧಿಕ ಮಂದಿ ವಿದೇಶಿ ಪ್ರವಾಸಿಗರ ಆಗಮನವನ್ನು ಮುಂದೂಡಲಾಗಿದೆ ಎಂದು ಮೂಡುಬಿದಿರೆ ಶ್ರೀ ಜೈನಮಠದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ ತಿಳಿಸಿದ್ದಾರೆ.
ಕರೊನಾ ಶೀಘ್ರ ಶಮನಗೊಳ್ಳಲಿ ಎಂದು ಗುರುಬಸದಿಯಲ್ಲಿ ಪ್ರಾರ್ಥನೆ ಸಲ್ಲಿಸಾಗಿದೆ. ಸಿಬ್ಬಂದಿಗೆ ಮುಂಜಾಗ್ರತಾ ಮಾಹಿತಿ ನೀಡಲಾಗಿದ್ದು, ಮುಖಪಟ್ಟಿ ಒದಗಿಸಲಾಗಿದೆ. ಮುನ್ನೆಚ್ಚರಿಕೆ ಸೂಚನೆಯನ್ನು ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಬಸದಿಯಲ್ಲಿ ಅಳವಡಿಸಲಾಗಿದೆ ಎಂದು ತಿಳಿಸಿದ್ದಾರೆ.