ಅನ್ಸಾರ್ ಇನೋಳಿ ಉಳ್ಳಾಲ
ಕಳೆದ ಒಂದೂವರೆ ವರ್ಷದಿಂದ ಜನಪ್ರತಿನಿಧಿಗಳ ಆಡಳಿತ ವ್ಯವಸ್ಥೆ ಇಲ್ಲದೆ ಅನಾಥವಾಗಿರುವ ಸೋಮೇಶ್ವರ ಪುರಸಭೆಯಲ್ಲಿ ಪ್ರಸಕ್ತ ಆಡಳಿತಾಧಿಕಾರಿಗಳ ಪ್ರಯತ್ನದ ಫಲವಾಗಿ ಹೋರ್ಡಿಂಗ್ ಹಾಗೂ ಕೆಲವೊಂದು ಶುಲ್ಕ ಪಾವತಿಗೆ ಆನ್‌ಲೈನ್ ವ್ಯವಸ್ಥೆ ಜಾರಿಗೆ ಬಂದಿದೆ. ಈ ವ್ಯವಸ್ಥೆ ಜಿಲ್ಲೆಯಲ್ಲೇ ಪ್ರಥಮ ಎನ್ನುವ ಹೆಗ್ಗಳಿಕೆಗೂ ಪಾತ್ರವಾಗಿದೆ.
ಸೋಮೇಶ್ವರ ಗ್ರಾಮ ಪಂಚಾಯಿತಿಯಾಗಿದ್ದ ಸಂದರ್ಭ ವಾರ್ಷಿಕ ಆದಾಯ ಸುಮಾರು ರೂ.30 ಲಕ್ಷದಷ್ಟಿದ್ದರೆ, ಪ್ರಸ್ತುತ ತೆರಿಗೆ ಏರಿಕೆಯಿಂದಾಗಿ ಈ ಮೊತ್ತ ರೂ. 65 ಲಕ್ಷಕ್ಕೇರಿದೆ. ಇನ್ನಷ್ಟು ಆದಾಯ ಸಂಗ್ರಹಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಿರುವ ಅಧಿಕಾರಿ ವರ್ಗ ಹೋರ್ಡಿಂಗ್ ಹಾಗೂ ಫ್ಲೆಕ್ಸ್‌ಗಳ ಅಳವಡಿಕೆಗೆ ಶುಲ್ಕ ವಿಧಿಸಲು ಮುಂದಾಗಿದ್ದು, ವಸೂಲಾತಿಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಆನ್‌ಲೈನ್ ಪದ್ಧತಿ ಜಾರಿಗೆ ತಂದಿದೆ. ಇದರಿಂದ ವಾರ್ಷಿಕ ಆದಾಯದಲ್ಲಿ ರೂ. 50 ಸಾವಿರ ಹೆಚ್ಚಳದ ನಿರೀಕ್ಷೆಯಿದೆ. ಈ ಹಿಂದೆ ಫ್ಲೆಕ್ಸ್ ಹಾಗೂ ಹೋರ್ಡಿಂಗ್ಸ್‌ಗಳ ಅಳವಡಿಕೆಗೆ ಯಾವುದೇ ಶುಲ್ಕ ವಿಧಿಸುತ್ತಿರಲಿಲ್ಲ.
ವಾರಾಚರಣೆ ವೇಳೆ ಜಾರಿ: ಪುರಸಭೆಯಿಂದ ಡಿ.20ರಿಂದ 25ರವರೆಗೆ ಉತ್ತಮ ಆಡಳಿತ ಪದ್ದತಿ ಹೆಸರಲ್ಲಿ ಐದು ದಿನಗಳ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಇದರ ಅಂಗವಾಗಿ ಹೋರ್ಡಿಂಗ್ಸ್, ಫ್ಲೆಕ್ಸ್‌ಗೆ ಆನ್‌ಲೈನ್ ಶುಲ್ಕ ಪಾವತಿ ವ್ಯವಸ್ಥೆ ರೂಪುಗೊಂಡಿದೆ. ಕಾರ್ಯಕ್ರಮದ ಅಂಗವಾಗಿ ಬಾಲಕೃಷ್ಣ ಮಂದಿರ ಮತ್ತು ಸಾರಸ್ವತ ಕಾಲನಿಯಲ್ಲಿ ಎರಡು ದಿನಗಳ ಅಭಿಯಾನ ಹಮ್ಮಿಕೊಂಡು ನೀರಿನ ತೆರಿಗೆ, ಆಸ್ತಿ ಮಾಲೀಕತ್ವ ವರ್ಗಾವಣೆ, ಜನನ-ಮರಣ ಪತ್ರ, ಮಾಹಿತಿ ಹಕ್ಕು, ಇ-ಆಸ್ತಿ, ವ್ಯಾಪಾರ ಪರವಾನಗಿ, ಡೇ ನಲ್ಮ್ ಸಾಲ ವಿತರಣೆ, ಸ್ವಸಹಾಯ ಸಂಘ ರಚನೆ, ಬೀದಿಬದಿ ವ್ಯಾಪಾರಿಗಳ ಅರ್ಜಿ, ಸಾಲ ವಿತರಣೆ, ಕರ ವಸೂಲಿ ಮಾಡಲಾಗಿದೆ. ಕಚೇರಿಯಲ್ಲಿ ಹಲವು ಸಮಯಗಳಿಂದ ಬಾಕಿಯಿದ್ದ ಕಡತಗಳನ್ನೂ ಸ್ಥಳದಲ್ಲೇ ವಿಲೇ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಆನ್‌ಲೈನ್‌ನಲ್ಲೇ ಖಾತಾ ನೀಡಲು ಸಿದ್ಧತೆ ನಡೆಸಲಾಗಿದೆ.
ಶೀಘ್ರ ಚುನಾವಣೆ ನಿರೀಕ್ಷೆ!: ಅಧಿಕಾರಿಗಳ ಅಭಿವೃದ್ಧಿಯ ಉತ್ಸಾಹ ಎಷ್ಟಿದ್ದರೂ ಪುರಸಭೆಯಲ್ಲಿ ಚುನಾಯಿತ ಪ್ರತಿನಿಧಿಗಳ ಆಡಳಿತ ವ್ಯವಸ್ಥೆಯಿಲ್ಲದೆ ಒಂದೂವರೆ ವರ್ಷ ಕಳೆದಿದೆ. ಅಷ್ಟು ಮಾತ್ರವಲ್ಲದೆ ಅಧಿಕಾರಿಗಳು, ಸಿಬಂದಿ ಕೊರತೆಯೂ ಇದ್ದು, ಜನರಿಗೆ ಸಮಸ್ಯೆಯಾಗಿ ಕಾಡುತ್ತಿದೆ. ಪ್ರಸ್ತುತ ಚುನಾವಣೆಗೆ ಸಂಬಂಧಿಸಿದ ಬಹುತೇಕ ಪ್ರಕ್ರಿಯೆ ಮುಗಿದಿದ್ದು, ಮುಂದಿನ ಎರಡು ತಿಂಗಳೊಳಗೆ ಸೋಮೇಶ್ವರ ಪುರಸಭೆಗೆ ಪ್ರಥಮ ಚುನಾವಣೆ ನಡೆಯುವ ನಿರೀಕ್ಷೆಯಿದೆ.
ಇತ್ತೀಚೆಗೆ ನಡೆದ ವಾರದ ಉತ್ತಮ ಆಡಳಿತ ಎನ್ನುವ ಕಾರ್ಯಕ್ರಮದಲ್ಲಿ ಹೋರ್ಡಿಂಗ್ಸ್, ಫ್ಲೆಕ್ಸ್‌ಗಳ ಶುಲ್ಕ ಪಾವತಿಗೆ ಆನ್‌ಲೈನ್ ವ್ಯವಸ್ಥೆ ಜಾರಿಗೆ ತರಲಾಗಿದ್ದು, ಇದರಿಂದ ಪುರಸಭೆಗೆ ಹೆಚ್ಚುವರಿ ಆದಾಯ ಜತೆಗೆ ಶುಲ್ಕ ವಸೂಲಾತಿಯಲ್ಲಿ ಪಾರದರ್ಶಕತೆಯೂ ಇರಲಿದೆ. ಆನ್‌ಲೈನ್‌ನಲ್ಲೇ ಖಾತಾ ವ್ಯವಸ್ಥೆಯನ್ನೂ ಶೀಘ್ರದಲ್ಲೇ ಜಾರಿಗೆ ತರಲಾಗುವುದು. ವಾಣಿ ವಿ.ಆಳ್ವ, ಮುಖ್ಯಾಧಿಕಾರಿ, ಸೋಮೇಶ್ವರ ಪುರಸಭೆ