ಜಿಲ್ಲೆ

ಕೊಡಗು ಜಿಲ್ಲೆಯಲ್ಲಿ ಬಿರುಸಿನ ಮತದಾನ

ಆದರ್ಶ್. ಎಂ.ಕೆ.

ಮಡಿಕೇರಿ: ಕರ್ನಾಟಕ ವಿಧಾನ ಪರಿಷತ್‌ನ ನೈರುತ್ಯ ಶಿಕ್ಷಕರ ಮತ್ತು ಪದವೀಧರರ ಕ್ಷೇತ್ರದ ಚುನಾವಣೆಯ ಮತದಾನವು ಕೊಡಗು ಜಿಲ್ಲೆಯಾದ್ಯಂತ ಸೋಮವಾರ ಬಿರುಸಿನಿಂದ ನಡೆಯಿತು.


ಬೆಳಗ್ಗೆ ೧೦ ಗಂಟೆ ವೇಳೆಗೆ ನೈರುತ್ಯ ಶಿಕ್ಷಕರ ಕ್ಷೇತ್ರದಲ್ಲಿ ಮತದಾನವು ಶೇ.೨೨.೬೯ ರಷ್ಟು, ನೈರುತ್ಯ ಪದವೀಧರರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಶೇ.೨೦.೦೮ ರಷ್ಟು ಮತದಾನವಾಗಿತ್ತು. ಮಧ್ಯಾಹ್ನ ೧೨ ಗಂಟೆ ವೇಳೆ ನೈರುತ್ಯ ಶಿಕ್ಷಕರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮತದಾನವು ಶೇ.೪೭.೨೮ ರಷ್ಟು, ನೈರುತ್ಯ ಪದವೀಧರರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಶೇ.೪೨.೮೫ ರಷ್ಟು ಮತದಾನವಾಗಿತ್ತು.


ಮಧ್ಯಾಹ್ನ ೨ ಗಂಟೆ ವೇಳೆಗೆ ನೈರುತ್ಯ ಶಿಕ್ಷಕರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಶೇ.೬೬.೪೧ ರಷ್ಟು, ನೈರುತ್ಯ ಪದವೀಧರರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಶೇ.೬೨.೪೨ ರಷ್ಟು ಮತದಾನ ಆಗಿತ್ತು. ಸಂಜೆ ೬ ಗಂಟೆಗೆ ಶೇ.೮೬.೮೮ ರಷ್ಟು ಮತದಾನವಾಯಿತು.


ಜಿಲ್ಲಾಧಿಕಾರಿ ವೆಂಕಟ್ ರಾಜಾ, ಜಿಲ್ಲಾ ಪಂಚಾಯಿತಿ ಸಿಇಒ ವರ್ಣಿತ್ ನೇಗಿ, ಉಪ ವಿಭಾಗಾಧಿಕಾರಿ ವಿನಾಯಕ ನರ್ವಾಡೆ, ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಎನ್.ವೀಣಾ ಅವರು ನಗರಸಭೆಯ ಕೌನ್ಸಿಲ್ ಸಭಾಂಗಣದ ಮತಗಟ್ಟೆಯಲ್ಲಿ ನೈರುತ್ಯ ಪದವೀಧರರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮತಹಕ್ಕು ಚಲಾಯಿಸಿದರು.


ಬಳಿಕ ಮಾತನಾಡಿದ ಜಿಲ್ಲಾಧಿಕಾರಿ ವೆಂಕಟ್ ರಾಜಾ, ಕೊಡಗು ಜಿಲ್ಲೆಯ ಮಡಿಕೇರಿ, ವಿರಾಜಪೇಟೆ, ಪೊನ್ನಂಪೇಟೆ, ಕುಶಾಲನಗರ ಮತ್ತು ಸೋಮವಾರಪೇಟೆಯಲ್ಲಿ ನೈರುತ್ಯ ಶಿಕ್ಷಕರ ಮತ್ತು ಪದವೀಧರರ ಕ್ಷೇತ್ರ ಸಂಬಂಧ ಬಿರುಸಿನ ಮತದಾನ ನಡೆದಿದೆ ಎಂದು ಹೇಳಿದರು.


ನೈರುತ್ಯ ಶಿಕ್ಷಕರ ಮತ್ತು ಪದವೀಧರರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮತದಾರರು ಉತ್ಸಾಹದಿಂದ ಮತದಾನ ಹಬ್ಬದಲ್ಲಿ ಪಾಲ್ಗೊಂಡಿದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.