ಜಿಲ್ಲೆ

ಸುಬ್ರಹ್ಮಣ್ಯದಲ್ಲಿ ದಿಢೀರ್​ ಪ್ರವಾಹ

Avinash R

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ಪರಿಸರದಲ್ಲಿ ಭಾನುವಾರ ಮಧ್ಯಾಹ್ನ ಗುಡುಗು ಮಿಂಚು ಸಹಿತ ಭಾರಿ ಮಳೆ ಸುರಿಯಿತು. ಕೇವಲ ಅರ್ಧ ತಾಸು ಸುರಿದ ಮಳೆಗೆ ಸುಬ್ರಹ್ಮಣ್ಯದ ದರ್ಪಣ ತೀರ್ಥ ನದಿ ತುಂಬಿ ಹರಿಯಿತು.

ಮಧ್ಯಾಹ್ನ 2.15ಕ್ಕೆ ಭಾರಿ ಸಿಡಿಲು ಮತ್ತು ಮಿಂಚು ಆರಂಭವಾಯಿತು. 3 ಗಂಟೆಯಿಂದ ಸುಮಾರು ಅರ್ಧ ತಾಸು ಭಾರಿ ಮಳೆ ಸುರಿಯಿತು. 10ರಿಂದ 15 ನಿಮಿಷ ಪ್ರವಾಹ ಆದಿಸುಬ್ರಹ್ಮಣ್ಯ ದೇವಸ್ಥಾನದ ಹೊರಾಂಗಣ ಪ್ರವೇಶಿಸಿತು. ದೇವಳದ ಷಣ್ಮುಖ ಪ್ರಸಾದ ಭೋಜನಶಾಲೆ ಮತ್ತು ಭದ್ರತಾ ಸಿಬ್ಬಂದಿ ಹೊರಾಂಗಣ ಸ್ವಚ್ಛಗೊಳಿಸಿದರು. ದೇವಳದ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ ಮಾರ್ಗದರ್ಶನ ನೀಡಿದರು.

ಕುಮಾರಧಾರಾದಲ್ಲಿ ಏರಿಕೆಯಿಲ್ಲ

ಮಳೆಗೆ ಕುಮಾರಧಾರಾ ನದಿಯಲ್ಲಿ ನೀರಿನಮಟ್ಟ ಏರಿಕೆಯಾಗಿಲ್ಲ. ದರ್ಪಣ ತೀರ್ಥದಲ್ಲಿ ಮಾತ್ರ ದಿಢೀರ್​ ನೀರು ಏರಿತು. ಈ ರೀತಿಯ ದಿಢೀರ್​ ಮಳೆ ಪ್ರತಿವರ್ಷ ಸಿಂಹ ಮಾಸ(ಸೋಣ) ತಿಂಗಳಲ್ಲಿ ಬರುತ್ತದೆ. ಆದರೆ ಈ ವರ್ಷ ಸಿಂಹ ಮಾಸ(ಬೊಂತೆಲ್​)ನಲ್ಲಿ ಪ್ರವಾಹ ಬಂದಿದೆ. ಈ ಸಮಯ ದರ್ಪಣತೀರ್ಥದಲ್ಲಿ ಮಾತ್ರ ಅಧಿಕ ನೀರು ಬರುತ್ತದೆ. ಪ್ರವಾಹದಲ್ಲಿ ಬೃಹತ್​ ಮರದ ದಿಮ್ಮಿಗಳು ಕೊಚ್ಚಿ ಬಂದವು. ಆದಿಸುಬ್ರಹ್ಮಣ್ಯದ ಕೆಲವು ಅಂಗಡಿ ಮುಂಗಟ್ಟುಗಳಿಗೂ ನೀರು ನುಗ್ಗಿತ್ತು.