ಜಿಲ್ಲೆ

ಗೃಹಲಕ್ಷ್ಮಿ ಯೋಜನೆ ಲಾನುಭವಿಗಳಿಗೆ 25,248 ಕೋಟಿ ರೂ.

ಗೋಪಾಲಕೃಷ್ಣ ಪಾದೂರ್

ಉಡುಪಿ: ಸಮೃದ್ಧ ಕರ್ನಾಟಕ ನಿಮಾರ್ಣ ಮಾಡುವುದು ಸರ್ಕಾರದ ಪ್ರಮುಖ ಉದ್ದೇಶವಾಗಿದ್ದು, ಸರ್ವರಿಗೂ ಸಾಮಾಜಿಕ ಹಾಗೂ ಆರ್ಥಿಕ ಸ್ವಾತಂತ್ರ್ಯ ನೀಡುವ ನಿಟ್ಟಿನಲ್ಲಿ ಜಾರಿಗೊಳಿಸಲಾದ ಗೃಹಲಕ್ಷಿ$್ಮ ಯೋಜನೆಗೆ ಒಂದು ವರ್ಷ ಪೂರ್ಣಗೊಂಡಿದೆ. ಈವರೆಗೆ 1. 23 ಕೋಟಿ ಯಜಮಾನಿ ಮಹಿಳೆಯರ ಖಾತೆಗೆ ಒಟ್ಟು 25,248 ಕೋಟಿ ರೂ. ವರ್ಗಾಯಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್​ ತಿಳಿಸಿದರು.

ಶುಕ್ರವಾರ ಜಿಲ್ಲಾಡಳಿತ ವತಿಯಿಂದ ಅಜ್ಜರಕಾಡಿನ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ, ಅವರು ಸಂದೇಶ ನೀಡಿದರು.

ಪ್ರತಿ ಕುಟುಂಬಕ್ಕೆ 2000 ರೂ.ನಂತೆ ತಿಂಗಳಿಗೆ 2,280 ಕೋಟಿ ರೂ.ಗಳ ಹಣ ವರ್ಗಾವಣೆ ಮಾಡಲಾಗಿದ್ದು, ಶೇ. 96.25 ಪ್ರಗತಿ ಸಾಧಿಸಲಾಗಿದೆ. ಇತರ ಗ್ಯಾರಂಟಿ ಯೋಜನೆಗಳಿಂದ ಕೂಡ ಜಿಲ್ಲೆಯ ಜನರಿಗೆ ಸಾಕಷ್ಟು ಪ್ರಯೋಜನವಾಗುತ್ತಿದೆ. ರಾಜ್ಯದ ಆರ್ಥಿಕ ಪ್ರಗತಿಗೆ ಬಲತುಂಬಿವೆ. ಇತ್ತೀಚೆಗೆ ಕೇಂದ್ರ ಸರ್ಕಾರದ ಸಾಂಖ್ಯಿಕ ಮತ್ತು ಯೋಜನಾ ಅನುಷ್ಠಾನ ಇಲಾಖೆ ಬಿಡುಗಡೆ ಮಾಡಿರುವ ಆರ್ಥಿಕ ಪ್ರಗತಿ ವರದಿಯಲ್ಲಿ ಕರ್ನಾಟಕ ರಾಜ್ಯದ ಜಿ.ಡಿ.ಪಿ ದರ ಶೇಕಡ 10.2 ರಷ್ಟು ದಾಖಲಾಗಿರುವುದಕ್ಕೆ ಗ್ಯಾರಂಟಿಗಳ ಕೊಡುಗೆ ಗಣನೀಯವಾಗಿದೆ. ಪ್ರತಿಯೊಬ್ಬ ಫಲಾನುಭವಿಗಳ ಕುಟುಂಬಕ್ಕೆ ಸರಾಸರಿ ತಿಂಗಳಿಗೆ 4000 ದಿಂದ 5000 ರೂ.ವರೆಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಆರ್ಥಿಕ ನೆರವು ಲಭಿಸಿದೆ ಎಂದು ಮಾಹಿತಿ ನೀಡಿದರು.

ಪ್ರವಾಸೋದ್ಯಮಕ್ಕೆ 1349 ಕೋಟಿ ರೂ.

ಕರ್ನಾಟಕ ಪ್ರವಾಸೋದ್ಯಮ ನೀತಿ 2024-29 ಕ್ಕೆ ಅನುಮೋದನೆ ನೀಡಲಾಗಿದ್ದು, ವೈವಿಧ್ಯಮಯ ಹಾಗೂ ಶ್ರೇಷ್ಠ ಗುಣಮಟ್ಟದ ಪ್ರವಾಸೋದ್ಯಮ ಉತ್ಪನ್ನಗಳು ಹಾಗೂ ಸೇವೆ ಮೂಲಕ ಪ್ರವಾಸಿಗರಿಗೆ ವಿಶ್ವ ದರ್ಜೆಯ ಸೌಲಭ್ಯ ಒದಗಿಸಿ ಕರ್ನಾಟಕವನ್ನು ಜಾಗತಿಕವಾಗಿ ಹಾಗೂ ದೇಶದ ಆಕರ್ಷಣೀಯ ಪ್ರವಾಸಿ ತಾಣವನ್ನು ಉತ್ತೇಜಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ಇದಕ್ಕಾಗಿ 1,349 ಕೋಟಿ ರೂ. ಗಳ ಅನುದಾನವನ್ನು ಬಿಡುಗಡೆ ಮಾಡಲಾಗಿದೆ ಎಂದರು.

ನದಿ ದಂಡೆ ಸಂರಕ್ಷಣಾ ಕಾಮಗಾರಿಗೆ 6.15 ಕೋಟಿ

ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳ ಸಂರಕ್ಷಣೆಗಾಗಿ ಸುಮಾರು 6. 15 ಕೋಟಿ ರೂ. ಮೊತ್ತದಲ್ಲಿ 151 ಕಿ.ಮೀ ಉದ್ದದ ನದಿ ದಂಡೆ ಸಂರಕ್ಷಣಾ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಪ್ರಸಕ್ತ ಸಾಲಿನಲ್ಲಿ ಪಶ್ಚಿಮ ವಾಹಿನಿ ಯೋಜನೆಯಡಿ 1. 88 ಕೋಟಿ ರೂ. ಮೊತ್ತದಲ್ಲಿ ಕಿಂಡಿ ಆಣೆಕಟ್ಟು ಕಾಮಗಾರಿ ಕೈಗೊಳ್ಳಲಾಗುತ್ತಿದ್ದು, ಇದರಿಂದ 33 ಹೆಕ್ಟೇರ್​ ಕೃಷಿ ಭೂಮಿಗಳಿಗೆ ನೀರಾವರಿ ಸೌಲಭ್ಯ ಸಿಗಲಿದೆ. ಪ್ರಸಕ್ತ ಸಾಲಿನ ಮುಂಗಾರು ಮಳೆ 4,486 ಮಿ.ಮೀ ದಾಖಲಾಗಿದ್ದು, ವಾಡಿಕೆ ಮಳೆಗಿಂತ ಶೇ. 12 ರಷ್ಟು ಹೆಚ್ಚುವರಿಯಾಗಿದೆ. ಈ ಮಳೆಯಿಂದಾಗಿ 1,288 ವಾಸ್ತವ್ಯ ಮನೆಹಾನಿ, 665.10 ಹೆಕ್ಟೇರ್​ ಕೃಷಿ ಹಾಗೂ 200.48 ಹೆಕ್ಟೇರ್​ ತೋಟಗಾರಿಕೆ ಬೆಳೆಗಳ ಹಾನಿಯಾಗಿದೆ. ಸಂತ್ರಸ್ತರಿಗೆ ಇದುವರೆಗೆ 3.09 ಕೋಟಿ ರೂ. ಪರಿಹಾರವನ್ನು ಪಾವತಿಸಲಾಗಿದೆ ಎಂದರು.

ಭೂ ಕುಸಿತ ಅಧ್ಯಯನ

ಉಡುಪಿ ಜಿಲ್ಲೆಯಲ್ಲಿನ ಭೂಕುಸಿತ ಪ್ರದೇಶಗಳ ಬಗ್ಗೆ ಪರಿಶೀಲನೆ ನಡೆಸಿ, ಭೂಕುಸಿತ ತಡೆಗಟ್ಟುವ ಬಗ್ಗೆ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸುವ ಕುರಿತು ಈಗಾಗಲೇ ಬೆಂಗಳೂರಿನ ಜಿಯೋಲಾಜಿಕಲ್​ ಸರ್ವೆ ಆಫ್​ ಇಂಡಿಯಾ ಕಚೇರಿಯ ತಾಂತ್ರಿಕ ಸಿಬ್ಬಂದಿ ಸರ್ವೇ ಮಾಡಿ, ವರದಿಯೊಂದಿಗೆ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿದ್ದಾರೆ. ಈ ಬಗ್ಗೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದರು.

ಉಡುಪಿ ಕ್ಷೇತ್ರದ ಶಾಸಕ ಯಶ್ಪಾಲ್​ ಸುವರ್ಣ, ಕಾಪು ಶಾಸಕ ಗುರ್ಮೆ ಸುರೇಶ್​ ಶೆಟ್ಟಿ, ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ, ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಡಾ.ಕೆ.ಅರುಣ್​, ಅಪರ ಜಿಲ್ಲಾಧಿಕಾರಿ ಮಮತಾ ದೇವಿ, ಜಿಲ್ಲಾ ಪಂಚಾಯಿತಿ ಸಿಇಒ ಪ್ರತಿಕ್​ ಬಾಯಲ್​, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ್​ ಹೇರೂರು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಮೊದಲಾದವರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಪೊಲೀಸ್​ ಇಲಾಖೆ, ಶಾಲಾ&-ಕಾಲೇಜು ವಿದ್ಯಾರ್ಥಿಗಳಿಂದ ಪಥ ಸಂಚಲನ ನಡೆಯಿತು. ಜಿಲ್ಲಾ ಉಸ್ತುವಾರಿ ಸಚಿವೆ ಗೌರವ ವಂದನೆ ಸ್ವೀಕರಿಸಿದರು. 43 ಮಂದಿ ಸಾಧಕರು ಮತ್ತು 7 ಸಂ&ಸಂಸ್ಥೆಗಳಿಗೆ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಾರ್ಯಕ್ರಮಕ್ಕೂ ಮುನ್ನ ಬೋರ್ಡ್​ ಹೈಸ್ಕೂಲ್​ ನಿಂದ ಅಜ್ಜರಕಾಡು ಮೈದಾನವರೆಗೆ ತಾಯಿ ಭುವನೇಶ್ವರಿ ದೇವಿ ಮೆರವಣಿಗೆ ನಡೆಯಿತು.