ಮಂಡ್ಯ: ನಗರದ ಹೊರವಲಯದಲ್ಲಿ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಮೆರಗು ನೀಡಲು ಮನೆ ಮನೆಗಳ ಮೇಲೆ ಕನ್ನಡ ಬಾವುಟ ಹಾರಿಸುವ ಪ್ರಯತ್ನ ನಡೆಯುತ್ತಿದೆ. ಇದಕ್ಕೆ ಡಿ.6ರಂದು ಸಂಜೆ 4.30ಕ್ಕೆ ನಗರದ ಸ್ವರ್ಣಸಂದ್ರ ಬಡಾವಣೆಯ ಶನೇಶ್ಚರಸ್ವಾಮಿ ದೇವಸ್ಥಾನದ ಸಮೀಪ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಚಾಲನೆ ನೀಡಲಿದ್ದಾರೆ. ಶಾಸಕ ರವಿಕುಮಾರ್ ಗಣಿಗ ಅಧ್ಯಕ್ಷತೆ ವಹಿಸಲಿದ್ದಾರೆ.
ಅಕ್ಷರಜಾತ್ರೆ ಹಿನ್ನೆಲೆಯಲ್ಲಿ ನಗರವನ್ನು ಮಧುವಣಗಿತ್ತಿಯಂತೆ ಸಿಂಗರಿಸುವ ಪ್ರಕ್ರಿಯೆಗೆ ಅದಾಗಲೇ ಚಾಲನೆ ನೀಡಲಾಗಿದೆ. ಇದಲ್ಲದೆ ನಗರದಲ್ಲಿ ಶಾಸಕ ರವಿಕುಮಾರ್ ಗಣಿಗ ನೇತೃತ್ವದಲ್ಲಿ ಸುಮಾರು 20 ಸಾವಿರ ಮನೆಯ ಮೇಲೆ ಕನ್ನಡ ಬಾವುಟ ಹಾರಿಸಲಾಗುತ್ತಿದೆ. ಹತ್ತು ದಿನದೊಳಗೆ ಎಲ್ಲ ಮನೆ ಮೇಲೆ ಬಾವುಟ ಹಾರಿಸುವ ಗುರಿ ಹೊಂದಲಾಗಿದೆ. ಅಂತೆಯೇ ಈ ತಿಂಗಳೆಲ್ಲ ಕನ್ನಡ ಬಾವುಟ ರಾರಾಜಿಸಲಿವೆ.
ವಸತಿ ವ್ಯವಸ್ಥೆಗೆ ಸಿದ್ಧತೆ: ಡಿ.20, 21 ಮತ್ತು 22ರಂದು ಜರುಗಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಕ್ಕರೆ ನಗರಿ ಮಂಡ್ಯದಲ್ಲಿ ಸಿದ್ಧತೆಗಳು ಭರದಿಂದ ಸಾಗುತ್ತಿವೆ. ಆತಿಥ್ಯಕ್ಕೆ ಹೆಸರಾಗಿರುವ ಮಂಡ್ಯ ದೇಶ, ವಿದೇಶಗಳಿಂದ ಹಾಗೂ ರಾಜ್ಯದ ನಾನಾ ಭಾಗಗಳಿಂದ ಆಗಮಿಸುವ ಗಣ್ಯರು, ನೋಂದಾಯಿತ ಪ್ರತಿನಿಧಿಗಳು ಹಾಗೂ ಸಾಹಿತ್ಯಾಸಕ್ತರ ಆತಿಥ್ಯಕ್ಕೆ ಎಲ್ಲ ರೀತಿಯಲ್ಲೂ ತಯಾರಾಗುತ್ತಿದೆ. ಮೂರು ದಿನಗಳ ಕಾಲ ನಡೆಯಲಿರುವ ನುಡಿಜಾತ್ರೆಗೆ ಆಗಮಿಸುವವರ ವಾಸ್ತವ್ಯಕ್ಕೆ ಮಂಡ್ಯ, ಮದ್ದೂರು ಮತ್ತು ಶ್ರೀರಂಗಪಟ್ಟಣದಲ್ಲಿ ವಸತಿ ವ್ಯವಸ್ಥೆ ಮಾಡಲಾಗುತ್ತಿದೆ. ಈ ಸಂಬಂಧ ಈಗಾಗಲೇ ಹೋಟೆಲ್, ಲಾಡ್ಜ್, ವಸತಿ ನಿಲಯಗಳು, ಕಲ್ಯಾಣ ಮಂಟಪಗಳು ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಬಳಸಿಕೊಳ್ಳಲಾಗುತ್ತಿದೆ.
ಅಂದಾಜು 10 ರಿಂದ 15 ಸಾವಿರದಷ್ಟು ಗಣ್ಯರು, ಜನಪ್ರತಿನಿಧಿಗಳು, ಮಾಧ್ಯಮ ಮಿತ್ರರು ಹಾಗು ಕನ್ನಡ ಪ್ರೇಮಿಗಳು ನುಡಿ ಹಬ್ಬಕ್ಕೆ ಆಗಮಿಸುವ ನಿರೀಕ್ಷೆಯಿದ್ದು, ಇವರ ವಾಸ್ತವಕ್ಕಾಗಿ ಹೋಟೆಲ್, ಲಾಡ್ಜ್ ಮತ್ತು ಕಲ್ಯಾಣಮಂಟಪಗಳನ್ನು ಮುಂಗಡವಾಗಿ ಕಾಯ್ದಿರಿಸಲಾಗಿದೆ. ಉತ್ತಮ ರೀತಿಯ ಶೌಚಗೃಹದ ಜತೆಗೆ ನೀರಿನ ಸಮಸ್ಯೆ ಉಂಟಾಗದ ರೀತಿಯಲ್ಲಿ ಕ್ರಮವಹಿಸಲು ಜಿಲ್ಲಾಡಳಿತ ಈಗಾಗಲೇ ಕಾರ್ಯಪ್ರವೃತ್ತವಾಗಿದೆ. ಮಂಡ್ಯ, ಮದ್ದೂರು ಮತ್ತು ಶ್ರೀರಂಗಪಟ್ಟಣದಲ್ಲಿ 30 ಕಲ್ಯಾಣ ಮಂಟಪ, 16 ಸಮುದಾಯ ಭವನ, 37 ವಸತಿ ನಿಲಯದಲ್ಲಿ ವಾಸ್ತವ್ಯದ ವ್ಯವಸ್ಥೆ ಮಾಡಲಾಗುತ್ತಿದೆ. ಇದರ ಜತೆಗೆ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲೂ ವಾಸ್ತವ್ಯಕ್ಕೆ ವ್ಯವಸ್ಥೆ ಕಲ್ಪಿಸಲಾಗುತ್ತಿದ್ದು, ಮಂಡ್ಯದ ಪಿಇಎಸ್ ಶಿಕ್ಷಣ ಸಂಸ್ಥೆ, ಕೊಮ್ಮೇರಹಳ್ಳಿಯಲ್ಲಿನ ವಿಶ್ವಮಾನವ ಶಿಕ್ಷಣ ಸಂಸ್ಥೆ ಹಾಗೂ ಯಲಿಯೂರಿನಲ್ಲಿನ ಅನಿಕೇತನ ಶಿಕ್ಷಣ ಸಂಸ್ಥೆಯಲ್ಲಿ ವಸತಿ ವ್ಯವಸ್ಥೆ ಮಾಡಲಾಗಿದೆ.
ಎ, ಬಿ ಮತ್ತು ಸಿ ಶ್ರೇಣಿಯಲ್ಲಿ ವಸತಿ ವ್ಯವಸ್ಥೆ ಮಾಡಲಾಗಿದ್ದು, ಎಲ್ಲಿಯೂ ಯಾರಿಗೂ ತೊಂದರೆಯಾಗದಂತೆ ನೋಡಿಕೊಳ್ಳಲು ಅಧಿಕಾರಿಗಳು ಮತ್ತು ಸಿಬ್ಬಂದಿ ತಂಡ ಅಣಿಯಾಗಿದೆ. ನೋಂದಾಯಿತ ಪ್ರತಿನಿಧಿಗಳಿಗೆ ಸಮ್ಮೇಳನ ನಡೆಯುವ ಸ್ಥಳದಲ್ಲಿ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ. ವಾಸ್ತವ್ಯ ಸ್ಥಳದಿಂದ ಸಮ್ಮೇಳನದ ಸ್ಥಳಕ್ಕೆ ತೆರಳಲು ಉಚಿತ ಬಸ್ ವ್ಯವಸ್ಥೆ ಮಾಡಲಾಗುತ್ತಿದೆ. ಕರ್ತವ್ಯ ನಿಯೋಜಿತವಾಗಿ ಅನ್ಯ ಜಿಲ್ಲೆಗಳಿಂದ ಆಗಮಿಸುವ ಸಿಬ್ಬಂದಿ, ಅಧಿಕಾರಿ, ಪೊಲೀಸರೆಲ್ಲರಿಗೂ ಉಳಿದುಕೊಳ್ಳಲು ಸೂಕ್ತ ರೀತಿಯಲ್ಲಿ ವಸತಿ ವ್ಯವಸ್ಥೆ ಕಲ್ಪಿಸಲು ಜಿಲ್ಲಾಡಳಿತ ಸಜ್ಜಾಗಿದೆ. ಎಲ್ಲಿಯೂ ಆಹಾರ, ವಸತಿ, ಶೌಚಾಲಯದ ವ್ಯವಸ್ಥೆಯಲ್ಲಿ ಚ್ಯುತಿ ಬಾರದ ರೀತಿಯಲ್ಲಿ ಕ್ರಮಕೈಗೊಳ್ಳಲು ಮುಂದಾಗಿದೆ.
ಸಮ್ಮೇಳನಕ್ಕೆ ಆಗಮಿಸುವವರ ಆರೋಗ್ಯದ ಹಿತದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ಹೆಲ್ತ್ಡೆಸ್ಕ್ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದನ್ನು ಸಹ ಸ್ಥಾಪಿಸಲಾಗುತ್ತಿದ್ದು, ನುಡಿಹಬ್ಬಕ್ಕೆ ಆಗಮಿಸುವವರ ಆತಿಥ್ಯದಲ್ಲಿ ಎಲ್ಲೂ ಲೋಪವಾಗದ ರೀತಿಯಲ್ಲಿ ಅತಿಥಿಗಳನ್ನು ಸತ್ಕರಿಸಲು ಜಿಲ್ಲಾಡಳಿತ, ಕನ್ನಡ ಸಾಹಿತ್ಯ ಪರಿಷತ್ ಕ್ರಮಗಳನ್ನು ಕೈಗೊಳ್ಳುತ್ತಿದೆ.