ಮಡಿಕೇರಿ:
ಭವಿಷ್ಯದಲ್ಲಿ ಕರ್ನಾಟಕದಲ್ಲಿ 10 ಲಕ್ಷ ಉದ್ಯಮಿಗಳನ್ನು ಹುಟ್ಟು ಹಾಕುವ ಗುರಿಯನ್ನು ಕರ್ನಾಟಕ ರಾಜ್ಯ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಇಟ್ಟುಕೊಂಡಿದೆ ಎಂದು ಸಂಸ್ಥೆಯ ನೂತನ ಅಧ್ಯಕ್ಷೆ ಉಮಾ ರೆಡ್ಡಿ ತಿಳಿಸಿದ್ದಾರೆ.
ಈ ನಿಟ್ಟಿನಲ್ಲಿ ಜಿಲ್ಲಾ ಮಟ್ಟದಲ್ಲಿ ಪೂರ್ವಭಾವಿ ಚರ್ಚೆಗಳನ್ನು ನಡೆಸಲಾಗುತ್ತಿದೆ. ವಿದ್ಯಾರ್ಥಿಗಳಿಗಾಗಿ ಬ್ಯುಸ್‌ನೆಸ್ ಪ್ಲಾö್ಯನ್ ಸ್ಪರ್ಧೆ ನಡೆಸಲಾಗುತ್ತಿದೆ. ಆರಂಭದಲ್ಲಿ ಆನ್‌ಲೈನ್ ಮೂಲಕ ನಡೆಯಲಿರುವ ಈ ಸ್ಪರ್ಧೆ 9 ತಿಂಗಳ ಕಾಲ ಮುಂದುವರಿಯಲಿದೆ. ವಿಜೇತರಿಗೆ 10 ಲಕ್ಷ ರೂ. ಬಹುಮಾನ ಕೊಡಲಾಗುವುದು.
ತಾಲೂಕು ಮಟ್ಟದ ಕಾಲೇಜುಗಳಿಗೂ ಈ ಸ್ಪರ್ಧೆಯನ್ನು ವಿಸ್ತರಿಸಲಾಗುವುದು. ವಿದ್ಯಾರ್ಥಿ ಹಂತದಲ್ಲೇ ಕೌಶÀಲ್ಯ ವೃದ್ಧಿಗೆ ಆದ್ಯತೆ ಕೊಡಲಾಗುವುದು. ಉದ್ಯೋಗಕ್ಕಾಗಿ ಬೆಂಗಳೂರು ಕಡೆ ನೋಡದೇ ಸ್ಥಳೀಯವಾಗಿಯೇ ಉದ್ಯೋಗವಕಾಶ ಸೃಷ್ಟಿಗೆ ಆದ್ಯತೆ ಕೊಡಲಾಗುವುದು ಎಂದು ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಮಹಿಳಾ ಉದ್ಯಮಿಗಳಿಗೂ ಪ್ರೋತ್ಸಾಹ ನೀಡಲಾಗುತ್ತಿದೆ. ನ.19ಕ್ಕೆ ಮಹಿಳಾ ಉದ್ಯಮಿಗಳ ದಿನ ಆಚರಿಸಲಾಗುತ್ತಿದೆ. ಉತ್ಪಾದನೆ ಮತ್ತು ವ್ಯಾಪಾರ ಕ್ಷೇತ್ರದಲ್ಲಿ ಮಹಿಳಾ ಉದ್ಯಮಿಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಜಿಲ್ಲಾ ಮಟ್ಟ ಮತ್ತು ವಲಯವಾರು ಪ್ರಶಸ್ತಿಗಳನ್ನು ನೀಡಲಾಗುವುದು.
1916ರಲ್ಲಿ ಸರ್ ಎಂ. ವಿಶ್ವೇಶ್ವರಯ್ಯ ಅವರಿಂದ ಸ್ಥಾಪನೆಯಾದ ಕರ್ನಾಟಕ ರಾಜ್ಯ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಸರ್ಕಾರ ಮತ್ತು ಉದ್ಯಮಿಗಳ ಮಧ್ಯೆ ಸೇತುವೆಯಾಗಿ ಕೆಲಸ ಮಾಡುತ್ತಿದೆ. ಉದ್ಯಮದ ಬೇಡಿಕೆಗಳನ್ನು ಸರ್ಕಾರಕ್ಕೆ ತಲುಪಿಸುವ ಮೂಲಕ ಉದ್ಯಮಿಗಳ ಪರವಾಗಿ ಕೆಲಸ ಮಾಡುತ್ತಿದೆ. 5 ಸಾವಿರ ಸದಸ್ಯರು ಈ ಸಂಸ್ಥೆಯಲ್ಲಿ ಇದ್ದಾರೆ. ನಮ್ಮ ಗುರಿ ಸಾಧಿಸಲು ಒಂದು ತಂಡವಾಗಿ ಕೆಲಸ ಮಾಡಲಾಗುತ್ತಿದೆ. ಬಾಲಿ ಚೇಂಬರ್ ಆಫ್ ಕಾಮರ್ಸ್ ಜತೆ ಚರ್ಚೆ ಈಗಾಗಲೇ ಆನ್ ಲೈನ್‌ನಲ್ಲಿ ಸಭೆ ನಡೆಸಲಾಗಿದೆ.
ಪ್ರವಾಸೋದ್ಯಮ ಮತ್ತು ಸಾಂಸ್ಕೃತಿಕ ಸಹಕಾರ ಬಗ್ಗೆ ಚರ್ಚೆ ನಡೆಸಲಾಗಿದ್ದು, ಈ ಸಭೆ ಫಲಪ್ರದವಾಗಿದೆ.
ಸಣ್ಣ ಕೈಗಾರಿಕೆಗಳಿಗೆ ಸರ್ಕಾರ ಹೆಚ್ಚಿನ ಪ್ರೋತ್ಸಾಹ ಕೊಡಬೇಕಿದೆ. ಉದ್ಯಮಿಗಳು ತಾಂತ್ರಿಕತೆ ಮೈಗೂಢಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಸಂಸ್ಥೆ ಸಹಕಾರ ನೀಡಲಿದೆ. ಈಗ ಎಲ್ಲಾ ಉತ್ಪನ್ನ ಮತ್ತು ಜಾಗತಿಕ ಮಾರುಕಟ್ಟೆಯೇ ಗುರಿ ಆಗಿದ್ದು ಈ ಗುರಿ ಇದು ತಲುಪಲು ಮೂಲಭೂತ ಸೌಕರ್ಯ ಉತ್ತಮಗೊಳ್ಳಬೇಕು ಎಂದರು. ಇದೇ ಸಂದರ್ಭ ವಿಷನ್ ಸ್ಟೇಟ್‌ಮೆಂಟ್ 2025-26 ಕೈಪಿಡಿ ಬಿಡುಗಡೆ ಮಾಡಲಾಯಿತು.
ಸಂಸ್ಥೆಯ ಹಿರಿಯ ಉಪಾಧ್ಯಕ್ಷ ಸಾಯಿರಾಂ ಪ್ರಸಾದ್, ಕೊಡಗು ಪ್ರತಿನಿಧಿ ಗಿರೀಶ್ ಗಣಪತಿ ಸುದ್ದಿಗೋಷ್ಠಿಯಲ್ಲಿ ಇದ್ದರು.