ಮಂಡ್ಯ: ಪ್ರತಿ ಟನ್ ಕಬ್ಬಿಗೆ 4,500 ರೂ ನೀಡುವುದರ ಜತೆಗೆ ರಂಗರಾಜನ್ ವರದಿ ಪ್ರಕಾರ ಉಪ ಉತ್ಪನ್ನಗಳ ಮೇಲಿನ ಲಾಭಾಂಶದಲ್ಲಿ ಕಬ್ಬು ಬೆಳೆಗಾರರಿಗೆ ಶೇ.70ರಷ್ಟು ಲಾಭಾಂಶವನ್ನು ನೀಡಬೇಕು ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ ಒತ್ತಾಯಿಸಿದರು.
ಕೇಂದ್ರ ಸರ್ಕಾರ ಪ್ರಸಕ್ತ ಸಾಲಿನ ಕಬ್ಬಿಗೆ ಶೇ.10.25 ಇಳುವರಿ ಮಾನದಂಡ ಮಾಡಿಕೊಂಡು ಅವೈಜ್ಞಾನಿಕವಾಗಿ ಟನ್‌ಗೆ 3150 ರೂ. ನಿಗದಿ ಮಾಡಿದೆ. ಈ ಅನ್ಯಾಯದ ಬೆಲೆ ನೀತಿಯ ಕಾರಣದಿಂದ ಕಬ್ಬು ಬೆಳೆಯುವುದನ್ನೇ ಕೈಬಿಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಎಫ್‌ಆರ್‌ಪಿ ಬೆಲೆ ನಿಗದಿಗೆ ಶೇ.8.5 ಇಳುವರಿ ಮಾನದಂಡವಾಗಿಟ್ಟುಕೊಳ್ಳಬೇಕು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ಮೈಸೂರು ಮಹಾರಾಜರ ದೂರದೃಷ್ಠಿಯಿಂದಾಗಿ ನಮ್ಮ ನಾಡಿನಲ್ಲಿ ಹಲವಾರು ಜಲಾಶಯಗಳ ನಿರ್ಮಾಣವಾಗಿದೆ. ಸರ್ಕಾರ ನಡೆಸುವವರು ಅವುಗಳನ್ನು ಜೋಪಾನ ಮಾಡುವುದರ ಜತೆಗೆ ಸರಿಯಾದ ರೀತಿ ನಿರ್ವಹಣೆ ಮಾಡಬೇಕು. ಅದು ಬಿಟ್ಟು ಕೆಆರ್‌ಎಸ್ ನಲ್ಲಿ ಡಿಸ್ನಿಲ್ಯಾಂಡ್ ಮಾಡಲು ಹೊರಟಿರುವುದು ಸರಿಯಲ್ಲ. ಇದರಿಂದ ಜಲಾಶಯಕ್ಕೆ ಅಪಾಯ ಉಂಟಾಗುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ಡಿಸ್ನಿಲ್ಯಾಂಡ್ ಯೋಜನೆಗಳು ಕೆಆರ್‌ಎಸ್‌ನಲ್ಲಿ ಮಾತ್ರವಲ್ಲ. ಯಾವುದೇ ಜಲಾಶಯದ ವ್ಯಾಪ್ತಿಯಲ್ಲೂ ಬೇಡ, ಪ್ರವಾಸೋಧ್ಯಮ ಅಭಿವೃದ್ಧಿಗೆ ಬೇರೆ ಕಡೆಯಲ್ಲಿ ಅಭಿವೃದ್ಧಿಪಡಿಸಿ ಎಂದು ಸಲಹೆ ನೀಡಿದರು.
ಮನ್‌ಮುಲ್ ರೈತರಿಂದ ಖರೀದಿಸುವ ಹಾಲಿಗೆ 1.75 ರೂ ಕಡಿತ ಮಾಡಿರುವ ಆದೇಶವನ್ನು ಕೂಡಲೇ ಹಿಂಪಡೆಯಬೇಕು. ಅಂತೆಯೇ ಒಕ್ಕೂಟದಲ್ಲಿ ಹಿಂದೆ ನಡೆದಿರುವ 72 ಕೋಟಿ ರೂ ದುರುಪಯೋಗಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ಆದೇಶದಂತೆ ವಸೂಲಿ ಮಾಡಬೇಕು. ನೀರು ಹಾಲು ಹಗರಣವನ್ನು ತನಿಖೆಗೆ ವಹಿಸಿದ್ದ ಸಿಒಡಿಯಿಂದ ಯಾವುದೇ ಸತ್ಯಾಂಶ ಹೊರಬೀಳುವ ಸಾಧ್ಯತೆ ಇಲ್ಲದೆ ಇರುವ ಕಾರಣ ಸಿಬಿಐಗೆ ವಹಿಸಬೇಕು ಎಂದು ಒತ್ತಾಯಿಸಿದರು.
31ರಂದು ಡಿಸಿ ಕಚೇರಿ ಎದುರು ಪ್ರತಿಭಟನೆ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ರೈತ ವಿರೋಧಿ ನೀತಿ ಖಂಡಿಸಿ ಹಾಗೂ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಜು.31ರಂದು ಜಿಲ್ಲಾಧಿಕಾರಿ ಕಚೇರಿ ಕಚೇರಿ ಮುಂದೆ ಪ್ರತಿಭಟನಾ ಸಭೆ ಹಮ್ಮಿಕೊಳ್ಳಲಾಗಿದೆ. ಅಂತೆಯೇ ಕೊಬ್ಬರಿ ಬೆಲೆ ತೀರಾ ಕಡಿಮೆಯಾಗಿದ್ದು, ಇದರಿಂದಾಗಿ ತೆಂಗು ಬೆಳೆಗಾರರು ಸಂಕಷ್ಟ ಅನುಭವಿಸುವಂತಾಗಿದೆ. ಕೇಂದ್ರ ಸರ್ಕಾರ ಕೊಬ್ಬರಿ ಬೆಲೆಯನ್ನು ಹೆಚ್ಚಳ ಮಾಡಬೇಕು ಎಂದು ಆಗ್ರಹಿಸಿ ಅ.2ರಂದು ತಿಪಟೂರಿನಿಂದ ಬೆಂಗಳೂರಿಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಿಂಗಪ್ಪಾಜಿ, ಖಜಾಂಚಿ ರವಿಕುಮಾರ್, ಪ್ರಭು, ಮಂಜು, ಪ್ರಕಾಶ, ಬಾಲಕೃಷ್ಣ, ವಿಜಯಕುಮಾರ್, ರಾಣಿ ಇದ್ದರು.