ಯಳಂದೂರು: ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ ಹಲವರ ತ್ಯಾಗ, ಬಲಿದಾನಗಳ ನಂತರ ನಮಗೆ ಸ್ವಾತಂತ್ರೃ ಲಭಿಸಿದೆ. ಸ್ವಾತಂತ್ರೃ ನಂತರ ಭಾರತ ಪ್ರಗತಿಯಲ್ಲಿ ಪಂಚವಾರ್ಷಿಕ ಯೋಜನೆಗಳು ಮಹತ್ವದ ಪಾತ್ರ ವಹಿಸಿದೆ ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ತಿಳಿಸಿದರು.
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮೈದಾನದಲ್ಲಿ ಶುಕ್ರವಾರ ತಾಲೂಕು ಆಡಳಿತದ ವತಿಯಿಂದ ಹಮ್ಮಿಕೊಂಡಿದ್ದ 79 ನೇ ಸ್ವಾತಂತ್ರೃ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಮುಂದುವರೆಯುತ್ತಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ಅಗ್ರಸ್ಥಾನದಲ್ಲಿದೆ. ಜತೆಗೆ ಶತ್ರು ರಾಷ್ಟ್ರಗಳ ಕಾಟವೂ ಹೆಚ್ಚಿದೆ. ಇದನ್ನು ನಿಯಂತ್ರಿಸಲು ನಮ್ಮ ದೇಶ ಶಕ್ತವಾಗಿದೆ. ಜಾತಿ, ಧರ್ಮ ಮರೆತು ದೇಶದ ಪ್ರಗತಿಗೆ ಪ್ರತಿಯೊಬ್ಬರೂ ದೇಶಾಭಿಮಾನ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಶಾಸಕನಾಗಿ ನಾನು ಕೊಳ್ಳೇಗಾಲ ಕ್ಷೇತ್ರದಲ್ಲಿ ಗೆದ್ದ ನಂತರ ಅನೇಕ ಜನಪರ ಕೆಲಸಗಳು ನಡೆದಿವೆ. ಸಮುದಾಯ ಭವನಗಳನ್ನು ಪೂರ್ಣಗೊಳಿಸಲು 25 ಕೋಟಿ ರೂ. ವಿಶೇಷ ಅನುದಾನ ನೀಡಿದ್ದೇನೆ. ನೀರಾವರಿ ಕ್ಷೇತ್ರದ ನೀರಾವರಿ ಯೋಜನೆಗಳಿಗೆ ಅನುದಾನ ಲಭಿಸಿದೆ. ಯಳಂದೂರು ಪಟ್ಟಣದಲ್ಲಿ 35 ಕೋಟಿ ರೂ. ವೆಚ್ಚದ ಆಸ್ಪತ್ರೆ ಕಾಮಗಾರಿ ಆರಂಭಗೊಂಡಿದೆ. ಕೊಳ್ಳೇಗಾಲದಲ್ಲಿ ಮತ್ತೊಂದು ಜಿಲ್ಲಾ ಮಟ್ಟದ ಆಸ್ಪತ್ರೆಗೆ ಸ್ಥಳ ಗುರುತಿಸಲಾಗಿದ್ದು ಆದಷ್ಟು ಬೇಗ ಈ ಕಾಮಗಾರಿಯೂ ಆರಂಭಗೊಳ್ಳಲಿದೆ. ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಬಿಳಿಗಿರಿರಂಗನಬೆಟ್ಟ, ವೈ.ಕೆ.ಮೋಳೆ ರಸ್ತೆ ಕಾಮಗಾರಿಗಳು ಈಗಾಗಲೇ ಆರಂಭಗೊಂಡಿವೆ. ಈಗ ಶಾಸಕರಿಗೆ 50 ಕೋಟಿ ರೂ. ವಿಶೇಷ ಅನುದಾನ ಮತ್ತೆ ಲಭಿಸಿದೆ. ಮತ್ತಷ್ಟು ಅಭಿವೃದ್ಧಿ ಕಾಮಗಾರಿಗಳು ಕ್ಷೇತ್ರದಲ್ಲಿ ನಡೆಯಲಿದೆ ಎಂದು ಮಾಹಿತಿ ನೀಡಿದರು.
ತಹಸೀಲ್ದಾರ್ ಎಸ್.ಎಲ್.ನಯನಾ ಧ್ವಜಾರೋಹಣ ನೆರವೇರಿಸಿದರು. ವಿವಿಧ ಶಾಲಾ ವಿದ್ಯಾರ್ಥಿಗಳು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮಗಳು, ದೇಶಭಕ್ತಿ ಗೀತೆಗಳ ನೃತ್ಯ, ಪೊಲೀಸ್ ಇಲಾಖೆ ಮತ್ತು ಶಾಲಾ ಮಕ್ಕಳು ನಡೆಸಿಕೊಟ್ಟ ಪರೇಡ್ ಗಮನ ಸೆಳೆಯಿತು.
ಪಫಂ ಅಧ್ಯಕ್ಷೆ ಬಿ. ಲಕ್ಷ್ಮೀಮಲ್ಲು, ಮಹೇಶ್, ವೈ.ಜಿ.ರಂಗನಾಥ, ಸುಶೀಲಾ ಪ್ರಕಾಶ್, ಸವಿತಾ ಬಸವರಾಜು, ಪ್ರಭಾವತಿ ರಾಜಶೇಖರ, ಬಿ.ರವಿ, ಮಂಜು, ಮಹದೇವನಾಯಕ ಲಿಂಗರಾಜಮೂರ್ತಿ, ಶ್ರೀಕಂಠಸ್ವಾಮಿ, ಮುಖ್ಯಾಧಿಕಾರಿ ಎಂ.ಪಿ.ಮಹೇಶ್‌ಕುಮಾರ್, ಬಿಇಒ ಮಾರಯ್ಯ, ನಂಜುಂಡಯ್ಯ, ಯರಿಯೂರು ನಾಗೇಂದ್ರ, ರಜಸ್ವ ನಿರೀಕ್ಷಕ ಯದುಗಿರಿ, ಅಮ್ಮನಪುರ ಮಹೇಶ್ ಇತರರು ಇದ್ದರು.
ವಿವಿಧೆಡೆ ಸಂಭ್ರಮದ ಸ್ವತಂತ್ರ ದಿನಾಚರಣೆ: ತಾಲೂಕಿನ ಎಲ್ಲ ಗ್ರಾಮ ಪಂಚಾಯಿತಿ ಕಚೇರಿಗಳು, ಸರ್ಕಾರಿ, ಖಾಸಗಿ ಶಾಲಾ ಕಾಲೇಜುಗಳು, ಪಟ್ಟಣದ ಸರ್ಕಾರಿ ಕಚೇರಿಗಳು, ಪೊಲೀಸ್ ಠಾಣೆ, ವಿದ್ಯಾರ್ಥಿನಿಲಯಗಳು ಸೇರಿದಂತೆ ವಿವಿಧೆಡೆ ಶುಕ್ರವಾರ 79 ನೇ ಸ್ವತಂತ್ರ ದಿನಾಚರಣೆಯನ್ನು ಸಂಭ್ರಮ ಸಡಗರಗಳಿಂದ ಆಚರಣೆ ಮಾಡಲಾಯಿತು. ಶಾಲಾ ಮಕ್ಕಳು ತ್ರಿವರ್ಣ ಧ್ವಜದ ಹಿಡಿದು ದೇಶ ಭಕ್ತಿಗೀತೆಗಳಿಗೆ ನೃತ್ಯ ಮಾಡಿದರು.