ಜಿಲ್ಲೆ

ಐವರು ಖತರ್ನಾಕ್ ಕಳ್ಳರ ಬಂಧನ: ಜಿಲ್ಲಾ ಪೊಲೀಸರ ಭರ್ಜರಿ ಬೇಟೆ

ಕೆ.ಎನ್.ರಾಘವೇಂದ್ರ

ಮಂಡ್ಯ: ಮೂರು ಪ್ರತ್ಯೇಕ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪೊಲೀಸರು ಐವರು ಖತರ್ನಾಕ್ ಕಳ್ಳರ ಬಂಧಿಸಿ ಕಾರು ಸೇರಿದಂತೆ ಲಕ್ಷಾಂತರ ರೂ ವಶಪಡಿಸಿಕೊಂಡಿದ್ದಾರೆ.

ನಗರದ ಪೊಲೀಸ್ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಮದ್ದೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಎರಡು ಪ್ರಕರಣ ಹಾಗೂ ಕೆಸ್ತೂರು ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಒಂದು ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆ ಸೇರಿದಂತೆ ಐವರನ್ನು ಬಂಧಿಸಲಾಗಿದೆ ಎಂದರು.

ಮದ್ದೂರು ಪೊಲೀಸ್ ವ್ಯಾಪ್ತಿಯ ಗೆಜ್ಜಲಗೆರೆ ಕೈಗಾರಿಕಾ ಪ್ರದೇಶದಲ್ಲಿ ಅ.15ರಂದು ರಾತ್ರಿ 12.07 ಗಂಟೆ ಸುಮಾರಿಗೆ ಪೆಟ್ರೋಲ್ ಬಂಕ್‌ಗೆ ಸಿಫ್ಟ್ ಕಾರಿನಲ್ಲಿ ಬಂದ ನಾಲ್ವರು, ಮೊದಲು ಪೆಟ್ರೋಲ್ ಹಾಕಿಸಿಕೊಂಡಿದ್ದಾರೆ. ಬಳಿಕ ಕತ್ತಿ ತೋರಿಸಿ ಬೆದರಿಸಿ ಪ್ಯಾಂಟಿನ ಜೇಬಿನಲ್ಲಿದ್ದ 25 ಸಾವಿರ ರೂ ನಗದು ದರೋಡೆ ಮಾಡಿಕೊಂಡು ಹೋಗಿದ್ದರು. ಈ ಸಂಬಂಧ ಪ್ರಕರಣ ದಾಖಲಾಗಿತ್ತು. ಸಿಸಿ ಕ್ಯಾಮೆರಾ ದೃಶ ಸೇರಿದಂತೆ ತಂತ್ರಜ್ಞಾನ ಬಳಸಿಕೊಂಡು ಅ.22ರಂದು ಆರೋಪಿಗಳಾದ ಮದ್ದೂರು ತಾಲೂಕು ವಡ್ಡರದೊಡ್ಡಿ ಗ್ರಾಮದ ಪ್ರಮೋದ್(23), ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕು ಲಾಳಘಟ್ಟದ ಅಭಿ(22), ದಾವಣಗೆರೆ ಜಿಲ್ಲೆ ಎಲವಟ್ಟಿ ಗ್ರಾಮದ ರಕ್ಷಿತ್‌ಕುಮಾರ್(20) ಎಂಬುವರನ್ನು ಬಂಧಿಸಲಾಗಿದೆ. ಚನ್ನಪಟ್ಟಣ ತಾಲೂಕು ಸುಣ್ಣದಘಟ್ಟ ಗ್ರಾಮದ ವಿಜಯ್(23) ನಾಪತ್ತೆಯಾಗಿದ್ದು, ಈತನ ಬಂಧನಕ್ಕೆ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಹೇಳಿದರು.

ಆರೋಪಿಗಳಿಂದ ಕೃತ್ಯಕ್ಕೆ ಬಳಸಲಾಗಿದ್ದ ಸಿಫ್ಟ್ ಕಾರು ಮತ್ತು ದರೋಡೆ ಮಾಡಿದ ಹಣದಲ್ಲಿ ಉಳಿಕೆ 2,600 ರೂ ವಶಪಡಿಸಿಕೊಳ್ಳಲಾಗಿದೆ. ಈ ನಾಲ್ವರು ಹಿಂದೆ ಹಲವು ಪ್ರಕರಣದಲ್ಲಿ ಭಾಗಿಯಾಗಿದ್ದು, ಜೈಲಿನಲ್ಲಿದ್ದಾಗ ಎಲ್ಲರೂ ತಂಡ ಕಟ್ಟಿಕೊಂಡಿದ್ದರು. ತನಿಖಾ ತಂಡದಲ್ಲಿದ್ದ ಮದ್ದೂರು ಠಾಣೆಯ ಪಿಐ ಎಂ.ಶಿವಕುಮಾರ್, ಮದ್ದೂರು ಗ್ರಾಮಾಂತರ ವೃತ್ತ ಸಿಪಿಐ ವೆಂಕಟೇಗೌಡ, ಪಿಎಸ್‌ಐಗಳಾದ ಮಂಜುನಾಥ್, ರವಿ, ಸಿಬ್ಬಂದಿ ಚಿರಂಜೀವಿ ಪೂಜಾರ್, ಪ್ರಸನ್ನ, ವಿಷ್ಣುವರ್ಧನ, ಓಂಕಾರಪ್ಪ, ಶರತ್, ರವಿಕಿರಣ್, ಲೋಕೇಶ್, ರಜಿತ್ ಅವರನ್ನು ಅಭಿನಂದಿಸಲಾಗುವುದು ಎಂದರು.

ಇನ್ನೊಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಮದ್ದೂರು ಟೌನ್‌ನ ಹೊಳೆಬೀದಿಯಲ್ಲಿ 2023 ಡಿ.22ರಂದು ಮನೆಯಲ್ಲಿ ಕಳ್ಳತನ ಮಾಡಲಾಗಿತ್ತು. ಈ ಸಂಬಂಧ ರಾಮನಗರ ಜಿಲ್ಲೆ ಕನಕಪುರ ತಾಲೂಕು ಮೇಳೆಕೋಟೆ ಗ್ರಾಮದ, ಹಾಲಿ ನೆಲಮಂಗಲ ತಾಲೂಕು ಆಲೂರು ಗ್ರಾಮದ ಹನುಮಂತರಾಜು(46) ಎಂಬಾತನನ್ನು ಬಂಧಿಸಲಾಗಿದೆ. ಅಂತೆಯೇ ಈತನ ವಿರುದ್ಧ ಎರಡು ಪ್ರಕರಣ ದಾಖಲಾಗಿತ್ತು. ಬಂಧನದ ಬಳಿಕ 11,04 ಲಕ್ಷ ರೂ ಮೌಲ್ಯದ 142 ಗ್ರಾಂ ತೂಕದ ಚಿನ್ನಾಭರಣ ಹಾಗೂ 1,300 ಗ್ರಾಂ ತೂಕದ ಬೆಳ್ಳಿ ಸಾಮಗ್ರಿ ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದರು.

ಮಹಿಳೆ ಬಂಧನ: ಮದ್ದೂರು ತಾಲೂಕು ಆತಗೂರು ಹೋಬಳಿ ವಡ್ಡರದೊಡ್ಡಿ ಗ್ರಾಮದಲ್ಲಿ ಅ.22ರಂದು ಮನೆಯಲ್ಲಿಟ್ಟಿದ್ದ ಚಿನ್ನಾಭರಣ ಕಳವು ಮಾಡಿದ್ದ ಪ್ರಕರಣ ನಡೆದಿತ್ತು. ಈ ಸಂಬಂಧ ತನಿಖೆ ನಡೆಸಿ ವಡ್ಡರದೊಡ್ಡಿ ಗ್ರಾಮದ 42 ವರ್ಷದ ಮಹಿಳೆಯನ್ನು ಬಂಧಿಸಿ 3,65 ಲಕ್ಷ ರೂ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಅಪರ ಪೊಲೀಸ್ ವರಿಷ್ಠಾಧಿಕಾರಿ-1 ಸಿ.ಇ.ತಿಮ್ಮಯ್ಯ, ಅಪರ ಪೊಲೀಸ್ ವರಿಷ್ಠಾಧಿಕಾರಿ-2 ಎಸ್.ಇ.ಗಂಗಾಧರಸ್ವಾಮಿ, ಸಿಇಎನ್ ಠಾಣೆ ಡಿಎಸ್ಪಿ ಜಿ.ಆರ್.ಶಿವಮೂರ್ತಿ ಇದ್ದರು.