ಜಿಲ್ಲೆ

ಜಿಲ್ಲೆಯಲ್ಲಿ ಭರ್ಜರಿ ವರ್ಷಧಾರೆ : ರೊಪ್ಪಕ್ಕೆ ಮಳೆ ನೀರು ನುಗ್ಗಿ 5 ಕುರಿ ಸಾವು

Tumakuru

ತುಮಕೂರು: ಜಿಲ್ಲೆಯಲ್ಲೆಡೆ ಭರ್ಜರಿ ಮಳೆ ಮುಂದುವರಿದಿದೆ, ಮಂಗಳವಾರ ರಾತ್ರಿ ಹಾಗೂ ಬುಧವಾರ ಬಹುತೇಕ ಭಾಗದಲ್ಲಿ ಭರ್ಜರಿ ಮಳೆ ಸುರಿದಿದ್ದು ಹಳ್ಳಗಳು ತುಂಬಿ ಹರಿದಿವೆ.

ಕೊರಟಗೆರೆ ತಾಲೂಕು ಬುರುಗನಹಳ್ಳಿ ಸಮೀಪದ ಸುವರ್ಣಮುಖಿ ನದಿ ಹರಿಯಲು ಆರಂಭಿಸಿರುವುದು ವಿಶೇಷ. ಇನ್ನುಳಿದಂತೆ ಮಧುಗಿರಿ, ಗುಬ್ಬಿ, ಶಿರಾ, ಚಿಕ್ಕನಾಯಕನಹಳ್ಳಿ, ತುಮಕೂರು ತಾಲೂಕುಗಳಲ್ಲಿ ಉತ್ತಮ ಮಳೆಯಾಗಿದೆ. ಹಲವು ಕಡೆಗಳಲ್ಲಿ ರಾಗಿ, ಭತ್ತ, ಜೋಳ, ತರಕಾರಿ ಸೇರಿ ಬೆಳೆಗಳು ಜಲಾವೃತವಾಗಿವೆ. ಗುಬ್ಬಿ ತಾಲೂಕು ಜನರೇಗೌಡನಪಾಳ್ಯ, ಮಡೇನಹಳ್ಳಿ, ಕಡೇಪಾಳ್ಯ ಸೇರಿ ಹಲವು ಗ್ರಾಮಗಳಲ್ಲಿ ರೈತರ ಹೊಲ ಗದ್ದೆಗಳು ಮಳೆ ನೀರಿನಿಂದ ಜಲಾವೃತವಾಗಿವೆ.

ಗುಬ್ಬಿ ತಾಲೂಕು ಕೋಡಿಹಳ್ಳಿ ಲಕ್ಷ್ಮೀನಾರಾಯಣ ಅವರ ಕುರಿ ರೊಪ್ಪಕ್ಕೆ ಮಳೆ ನೀರು ನುಗ್ಗಿ 5 ಕುರಿಗಳು ಸಾವನ್ನಪ್ಪಿದ್ದು, ಸ್ಥಳಕ್ಕೆ ತೆರಳಿದ ತಹಸೀಲ್ದಾರ್ ಡಾ.ಪ್ರದೀಪ್‌ಕುಮಾರ್‌ಹೀರೇಮಠ್ ರೈತನಿಗೆ ಸಾಂತ್ವನ ಹೇಳಿದ್ದಾರೆ. ಗೌರಿಪುರ, ಹರಿವೇಸಂದ್ರ ಗ್ರಾಮದ ಕೆಲ ಮನೆಗಳಿಗೆ ಮಳೆ ನೀರು ನುಗ್ಗಿದ್ದು ಸಮಸ್ಯೆಯಾಗಿದೆ.

ಪಾವಗಡ ತಾಲೂಕು ಚನ್ನಕೇಶವಪುರ 60 ಮಿಮೀ, ಮಧುಗಿರಿ ತಾಲೂಕು ಸಜ್ಜೆ ಹೊಸಳ್ಳಿ 42ಮಿಮೀ, ತುಮಕೂರು ತಾಲೂಕು ಹೊನ್ನುಡಿಕೆ 57ಮಿಮೀ, ಅಮ್ಮನಘಟ್ಟ 60ಮಿಮೀ, ಹೇಮದೊರೆ ಅತೀ ಹೆಚ್ಚು 88ಮಿಮೀ, ತುಂಬಾಡಿ 48ಮಿಮೀ, ಕೊರಟಹೆರೆ ತಾಲೂಕು ದೊಡ್ಡ ಸಾಗ್ಗರೆ 52ಮಿಮೀ, ಎಂಎನ್ ಕೋಟೆ 59ಮಿಮೀ, ಅಳಿಲುಘಟ್ಟ 56ಮಿಮೀ, ಅಗ್ರಹಾರ71ಮಿಮೀ, ಊಹಿಲುದೊರೆ 63ಮಿಮೀ, ಹರಳೂರು 80ಮಿಮೀ, ಹಂದಿಕುಂಟೆ ಗ್ರಾಪಂ ಮಳೆಮಾಪನ ಕೇಂದ್ರದಲ್ಲಿ 57ಮಿಮೀ ಮಳೆ ದಾಖಲಾಗಿದೆ.

ತುಮಕೂರು ನಗರದಲ್ಲಿ ಬುಧವಾರ ರಾತ್ರಿ 7.30ಕ್ಕೆ ಆರಂಭವಾದ ಮಳೆ ಒಂದೇ ಸಮನೆ ಸುರಿಯಲಾರಂಭಿಸಿತು. ಮಳೆಯ ಆರ್ಭಟಕ್ಕೆ ಬೀದಿ ಬದಿಯ ವ್ಯಾಪಾರಿಗಳು, ವಾಹನ ಸವಾರರು ಪರದಾಡಿದರು. ರಾತ್ರಿ ಇಡೀ ಅಲ್ಲಲ್ಲಿ ಮಳೆ ಮುಂದುವರಿಯುತ್ತಲೇ ಇತ್ತು.

ಸಾಲುಗಟ್ಟಿನಿಂತ ವಾಹನಗಳು: ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪ್ರಗತಿಯಲ್ಲಿದ್ದು ಭಾರೀ ಮಳೆಯ ಪರಿಣಾಮ ಹಾಲುಗೊಣ ಸಮೀಪ ಲಾರಿ ರಸ್ತೆಯಲ್ಲೇ ಬುಧವಾರ ರಾತ್ರಿ ಹೂತುಕೊಂಡಿತ್ತು. ನಿರಂತರ ಮಳೆಯ ಕಾರಣಕ್ಕೆ ನೂರಾರು ವಾಹನಗಳು ಸಾಲುಗಟ್ಟಿ ನಿಂತವು. ರಸ್ತೆ ಕಾಮಗಾರಿ ವಿಳಂಬದ ಕಾರಣಕ್ಕೆ ನಾನಾ ಸಮಸ್ಯೆ ಎದುರಾಗುತ್ತಿದೆ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದರು.