ಕೊಟ್ಟೂರು: ಪಟ್ಟಣದ ಐದು ಕಡೆ ಸ್ಥಾಪಿತವಾಗಿದ್ದ ಪೀರಲ ದೇವರುಗಳನ್ನು ಬುಧವಾರ ಸಂಜೆ ಧಾರ್ಮಿಕ ವಿಧಿವಿಧಾನದ ಅನ್ವಯ ಪೂಜೆ ಸಲ್ಲಿಸಿ ಮೆರವಣ ನಡೆಸಿ ವಿಸರ್ಜಿಸಲಾಯಿತು.
ಇಲ್ಲಿನ ಉಜ್ಜಿನಿ ಸರ್ಕಲ್, ಜವಳಿ ಸರ್ಕಲ್, ತೇರುಗಡ್ಡೆ ಹತ್ತಿರ, ಕೊಟ್ಟೂರೇಶ್ವರ ದೇವಸ್ಥಾನ, ಕೆಳಗೇರಿಯಲ್ಲಿ ಪೀರಲ ದೇವರನ್ನು ಕೂಡಿಸಲಾಗಿತ್ತು. ಮಂಗಳವಾರ ರಾತ್ರಿ ಕತಲ್ ರಾತ್ರಿ ಹಿನ್ನೆಲೆಯಲ್ಲಿ ಹಸೇನ್ ಹುಸೇನ್, ಮಹಮ್ಮದ್ ಪೈಂಗರ್ ಜೀವನ ಚರಿತ್ರೆ ಮತ್ತು ಪವಾಡ ಕುರಿತ ಹಾಡುಗಳನ್ನು ಜಾಹೀರ್ ಹಾಡಿ ಜನರನ್ನು ರಂಜಿಸಿದರು. ಬೆಳಗಿನ ಜಾವ ಭಕ್ತರು ಅಗ್ನಿಕುಂಡ ಪ್ರವೇಶಿಸಿ ಹರಕೆ ತೀರಿಸಿದರು.
ಬುಧವಾರ ಸಂಜೆ ಐದು ಪೀರಲ ದೇವರು ಕೊಟ್ಟೂರೇಶ್ವರ ಸ್ವಾಮಿ ದೇವಾಲಯದ ಮುಂದೆ ಸಂಗಮವಾದಾಗ ದೇವಾಲಯದ ಅರ್ಚಕರು ತೆಂಗಿನಕಾಯಿ ಹೊಡೆದು ಭಾವೈಕ್ಯ ಸಾರಿದರು. ನಂತರ ಐದು ಪೀರಲ ದೇವರು ಊರ ಹೊರಗೆ ಹೋಗಿ ವಿಸರ್ಜನೆಗೊಂಡವು. ಮೆರವಣಿಗೆಯಲ್ಲಿ ಭಕ್ತರು ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು. ಸಿಪಿಐ ವೆಂಕಟಸ್ವಾಮಿ, ಪಿಎಸ್‌ಐ ಗೀತಾಂಜಲಿ ಶಿಂಧೆ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿ ಭದ್ರತೆ ಒದಗಿಸಿದ್ದರು.