ಜಿಲ್ಲೆ

ಬೆಂಗ್ಳೂರಲ್ಲಿ 5 ಜಯದೇವ ಸೆಟಲೈಟ್ ಕೇಂದ್ರಗಳ ಸ್ಥಾಪನೆಗೆ ಚಿಂತನೆ: - ನೂತನ ನಿರ್ದೇಶಕ ಡಾ. ಬಿ. ದಿನೇಶ್ ಮಾಹಿತಿ

ಪಂಕಜ ಕೆ.ಎಂ.

ಬೆಂಗಳೂರು: ಹೃದ್ರೋಗಕ್ಕೆ ಅಗತ್ಯವಿರುವ ತುರ್ತು ಚಿಕಿತ್ಸೆ ಒದಗಿಸಲು, ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಐದೂ ಪಾಲಿಕೆಗಳ ವ್ಯಾಪ್ತಿಯಲ್ಲಿ ಜಯದೇವ ಸೆಟಲೈಟ್ ಸೆಂಟರ್ ಪ್ರಾರಂಭಿಸುವ ಚಿಂತನೆ ಹೊಂದಿದ್ದು, ಈ ಕುರಿತು ರಾಜ್ಯ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು ಎಂದು ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನೂತನ ನಿರ್ದೇಶಕ ಡಾ.ಬಿ. ದಿನೇಶ್ ತಿಳಿಸಿದರು.

ಗುರುವಾರ ಸಂಸ್ಥೆಯ ಅಧ್ಯಕ್ಷರಾಗಿ ಬುಧವಾರ ಅಧಿಕಾರ ಸ್ವೀಕರಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಒಂದು ಮುಕ್ಕಾಲು ಕೋಟಿ ಜನಸಂಖ್ಯೆ ಹೊಂದಿರುವ ಬೆಂಗಳೂರಿನಲ್ಲಿ ಈಗಿರುವ ಆಸ್ಪತ್ರೆಗಳಿಂದ ರೋಗಿಗಳ ನಿರ್ವಹಣೆ ಕಷ್ಟಸಾಧ್ಯ. ಅಲ್ಲದೆ ಕೋವಿಡ್ ನಂತರದಲ್ಲಿ ಹೃದಯಾಘಾತದ ಆತಂಕ ಹೆಚ್ಚಾಗಿ ಆಸ್ಪತ್ರೆಗೆ ಭೇಟಿ ನೀಡುವವರ ಸಂಖ್ಯೆಯೂ ಅಧಿಕವಾಗಿದೆ. ನಗರದ ವಿವಿಧ ಮೂಲೆಗಳಿಂದ ರೋಗಿಗಳು ಆಸ್ಪತ್ರೆ ತಲುಪುವ ವೇಳೆ ಜೀವಕ್ಕೆ ತೊಂದರೆ ಆಗುವ ಸಾಧ್ಯತೆಗಳು ಇವೆ. ಹಾಗಾಗಿ ಜಿಬಿಎ ಅಡಿ ಬರುವ ಐದು ಪಾಲಿಕೆ ವ್ಯಾಪ್ತಿಯಲ್ಲಿ ಇಎಸ್‌ಐ ಹಾಗೂ ಮಲ್ಲೇಶ್ವರ ಆಸ್ಪತ್ರೆ ಮಾದರಿಯಲ್ಲಿ ಜಯದೇವ ಸೆಟಲೈಟ್ ಸೆಂಟರ್ ತೆರೆಯುವ ಅಗತ್ಯವಿದೆ ಎಂದರು.

ಈ ಸೆಟಲೈಟ್ ಸೆಂಟರ್‌ಗಳಿಂದ ಹೃದ್ರೋಗಿಗಳಿಗೆ ನಿಗದಿತ ಅವಧಿಯೊಳಗೆ (ಗೋಲ್ಡನ್ ಅವರ್) ಚಿಕಿತ್ಸೆ ಒದಗಿಸಲು ಸಾಧ್ಯವಾಗುತ್ತದೆ. ಜತೆಗೆ ಜಯನಗರದ ಜಯದೇವ ಆಸ್ಪತ್ರೆ ಮೇಲಿನ ಒತ್ತಡವೂ ಕಡಿಮೆ ಆಗಲಿದ್ದು, ರೋಗಿಗಳ ನಿರ್ವಹಣೆ ಸುಲಭವಾಗಲಿದೆ. ಈ ಐದು ಸೆಟಲೈಟ್ ಸೆಂಟರ್‌ಗಳು ತಲಾ ನೂರು ಹಾಸಿಗೆಗಳನ್ನು ಒಳಗೊಂಡರೆ, ಹೊರ ರೋಗಿಗಳ ವಿಭಾಗ ಹಾಗೂ ಒಳರೋಗಿಗಳ ವಿಭಾಗದಲ್ಲಿ ಚಿಕಿತ್ಸೆ ನೀಡಬಹುದಾಗಿದೆ. ಪ್ರಸ್ತುತ ಪಾಲಿಕೆ ವ್ಯಾಪ್ತಿಯಲ್ಲಿ ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸದ ಕೆಲ ಆಸ್ಪತ್ರೆಗಳಿದ್ದು, ಅವುಗಳನ್ನು ಸಂಸ್ಥೆಗೆ ಹಸ್ತಾಂತರಿಸಿದರೆ ಹೃದ್ರೋಗ ಚಿಕಿತ್ಸಾ ಕೇಂದ್ರಗಳಾಗಿ ಪರಿವರ್ತಿಸಿ ಸೇವೆ ಒದಗಿಸಲಾಗುವುದು. ಈ ಕುರಿತು ವೈದ್ಯಕೀಯ ಶಿಕ್ಷಣ ಇಲಾಖೆ ಸಚಿವರೊಂದಿಗೆ ಚರ್ಚಿಸುವುದಾಗಿ ಹೇಳಿದರು.

ವಸತಿ ಸೌಲಭ್ಯ:

ಸಂಸ್ಥೆಯಲ್ಲಿ ಚಿಕಿತ್ಸೆಗೆ ದಾಖಲಾಗುವ ರೋಗಿಯ ಜತೆಗೆ ಸಹಾಯಕರೊಬ್ಬರಿಗೆ ಇರಲು ಅವಕಾಶವಿದ್ದು, ಹೆಚ್ಚುವರಿ ಸಹಾಯಕರಿಗೆ ಸಂಸ್ಥೆಯಲ್ಲಿ 80 ಮಂದಿ ಆಶ್ರಯ ಪಡೆಯಬಹುದಾದ ಎರಡು ಡಾರ್ಮೆಟರಿ ನಿರ್ಮಿಸಲಾಗಿದೆ. ಆದರೆ, ಒಳರೋಗಿಗಳು ಅಧಿಕ ಸಂಖ್ಯೆಯಲ್ಲಿ ಇರುವುದರಿಂದ, ಎಲ್ಲ ಹೆಚ್ಚುವರಿ ಸಹಾಯಕರಿಗೆ ಸೌಲಭ್ಯ ಕಲ್ಪಿಸಲು ಸಾಧ್ಯವಾಗುತ್ತಿಲ್ಲ. ಸಂಸ್ಥೆಯ ಇನ್ಫೋಸಿಸ್ ಕಟ್ಟಡದ ಬಳಿ ಇರುವ ಸ್ಥಳಾವಕಾಶದಲ್ಲಿ ಸಹಾಯಕರಿಗಾಗಿ ಬಹುಮಹಡಿ ಕಟ್ಟಡ ನಿರ್ಮಿಸಲು ಯೋಚಿಸಲಾಗಿದೆ ಎಂದರು.

ಸಿಬ್ಬಂದಿ ಕೊರತೆ:

ಸಂಸ್ಥೆಯ ಬೆಂಗಳೂರು ಆಸ್ಪತ್ರೆಗೆ ಭೇಟಿ ನೀಡುವ ಹೊರರೋಗಿಗಳ ಸಂಖ್ಯೆ 2 ಸಾವಿರದ ಗಡಿ ಸಮೀಪಿಸಿದೆ. ಒಳರೋಗಿಗಳ ಸಂಖ್ಯೆಯೂ ಹೆಚ್ಚುತ್ತಿದೆ. ಹಾಲಿ ಇರುವ ಸಿಬ್ಬಂದಿ ರೋಗಿಗಳನ್ನು ನಿರ್ವಹಿಸುತ್ತಿದ್ದು, ಶೇ. 15 ಸಿಬ್ಬಂದಿ ಕೊರತೆಯಿದ್ದು, ಸಂಬಂಧಪಟ್ಟವರೊಂದಿಗೆ ಚರ್ಚಿಸಿ ಕ್ರಮ ವಹಿಸಲಾಗುವುದು. ಹೃದಯಾಘಾತ ಪ್ರಕರಣಗಳಿಗೆ ತುರ್ತು ಚಿಕಿತ್ಸೆ ಒದಗಿಸಲು ಹಾಗೂ ಹೃದಯ ಸಮಸ್ಯೆ ಪತ್ತೆಗೆ ಸಂಬಂಧಿಸಿದಂತೆ ಮೆಟ್ರೊ ನಿಲ್ದಾಣ, ಬಸ್ ನಿಲ್ದಾಣಗಳಲ್ಲಿಯೂ ಹೃದಯ ತಪಾಸಣೆ ಕೇಂದ್ರಗಳನ್ನು ಪ್ರಾರಂಭಿಸುವ ಚಿಂತನೆಯಿದೆ ಎಂದು ತಿಳಿಸಿದರು.

ರೊಬೋಟಿಕ್ ತಂತ್ರಜ್ಞಾನ ಅಳವಡಿಕೆ

ವೈದ್ಯಕೀಯ ಕ್ಷೇತ್ರದಲ್ಲಿ ಪರಿಚಯವಾಗುತ್ತಿರುವ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು, ಬಡ ಹಾಗೂ ಮಧ್ಯಮವರ್ಗದವರಿಗೆ ಕೈಗೆಟಕುವ ದರದಲ್ಲಿ ಚಿಕಿತ್ಸೆ ಒದಗಿಸುವ ಯೋಜನೆ ಇದೆ. ಇದಕ್ಕಾಗಿ ಸಂಸ್ಥೆಯಲ್ಲಿ ಶಸಚಿಕಿತ್ಸೆ ನಡೆಸಲು ರೋಬಾಟಿಕ್ ತಂತ್ರಜ್ಞಾನ ಅಳವಡಿಸಿಕೊಳ್ಳಲು ಕ್ರಮವಹಿಸಲಾಗಿದೆ. ಈ ಸಂಬಂಧ ತಜ್ಞರಿಗೆ ಅಗತ್ಯ ತರಬೇತಿ ಒದಗಿಸಿ, ಕಾರ್ಯರೂಪಕ್ಕೆ ತರಲಾಗುವುದು. ಈ ಬಗ್ಗೆ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಡಾ. ಬಿ. ದಿನೇಶ್ ತಿಳಿಸಿದರು.

ಜಯದೇವ ಆಸ್ಪತ್ರೆಗೆ ನೂತನ ನಿರ್ದೇಶಕ

ಜಯದೇವ ಆಸ್ಪತ್ರೆಯ ನೂತನ ನಿರ್ದೇಶಕ ಡಾ. ಬಿ.ದಿನೇಶ್ ಅವರು ಮೈಸೂರಿನ ಜಯದೇವ ಆಸ್ಪತ್ರೆಯಲ್ಲಿ ಇಂಟರ್‌ವೆನ್‌ಷನಲ್ ಕಾರ್ಡಿಯಾಲಜಿಸ್ಟ್ ಮತ್ತು ಕಾರ್ಡಿಯಾಲಜಿ ವಿಭಾಗದ ಪ್ರೊೆಸರ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಮೈಸೂರಿನ ಟಿ.ನರಸೀಪುರ ತಾಲೂಕಿನ ದೊಡ್ಡೆಬಾಗಿಲು ಗ್ರಾಮದ ಕೃಷಿಕ ಕುಟುಂಬದಲ್ಲಿ ಜನಿಸಿದವರು. ಮೈಸೂರಲ್ಲಿ ಎಂಬಿಬಿಎಸ್ ಮುಗಿಸಿ, ಬಳಿಕ ಕ್ಲಿನಿಕ್ ಪೆಥಾಲಜಿಯಲ್ಲಿ ಡಿಪ್ಲೊಮಾ ಮಾಡಿದ್ದಾರೆ. ಕೆ.ಆರ್.ಆಸ್ಪತ್ರೆಯಲ್ಲಿ ಜನರಲ್ ಮೆಡಿಸಿನ್‌ನಲ್ಲಿ ಎಂಡಿ ವ್ಯಾಸಂಗ ಹಾಗೂ ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನ ಸಂಸ್ಥೆಯಡಿ ಬೆಂಗಳೂರಿನ ಜಯದೇವ ಆಸ್ಪತ್ರೆಯಲ್ಲಿ ಕಾರ್ಡಿಯಾಲಜಿ ಯಲ್ಲಿ ಡಿಎಂ ಪದವಿ ಪಡೆದಿದ್ದಾರೆ. ಆರಂಭದಲ್ಲಿ ಮೈಸೂರು ಜಿಲ್ಲೆಯ ಎಚ್.ಡಿ. ಕೋಟೆ ತಾಲೂಕಿನ ಹೆಬ್ಬಾಳ ಗುಪ್ಪೆಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿಯಾಗಿ, ಮೈಸೂರು ವೈದ್ಯಕೀಯ ಕಾಲೇಜಿನ ವೈದ್ಯಕೀಯ ವಿಭಾಗದ ಉಪನ್ಯಾಸಕ, ಸಹಾಯಕ ಪ್ರಾಧ್ಯಾಪಕರಾಗಿ, ಸಹ ಪ್ರಾಧ್ಯಾಪಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ಇದೀಗ ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕರಾಗಿ ಅಧಿಕಾರಿ ಸ್ವೀಕರಿಸಿದ್ದಾರೆ.