ಬೆಳಗಾವಿ: ನೆರೆಯ ಮಹಾರಾಷ್ಟ್ರ ಮತ್ತು ಕರ್ನಾಟಕದ ವಿವಿಧ ಭಾಗಗಳಲ್ಲಿ ಹಣಕ್ಕಾಗಿ ಸುಪಾರಿ ಪಡೆದುಕೊಂಡು ಜನರನ್ನು ಅಪಹರಿಸುತ್ತಿದ್ದು ಐದು ಜನ ಅಂತಾರಾಜ್ಯ ಅಪಹರಣಕಾರರನ್ನು ಮಂಗಳವಾರ ನಿಪ್ಪಾಣಿ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮಹಾರಾಷ್ಟ್ರ ಕೊಲ್ಲಾಪುರ ಜಿಲ್ಲೆಯ ರಫೀಕ್ ನದಾಫ್ (29), ಮುಜಫರ್ ಸಯ್ಯದ್, ರೋಹನ ಖವರೆ (25) ತುಕಾರಾಮ ಲಾಂಬೋಲೆ (25) ಹಾಗೂ ಚಿಕ್ಕೋಡಿ ತಾಲೂಕಿನ ಶಿರಗಾಂವ ಗ್ರಾಮದ ರಜತ ನದಾಫ್ (25) ಬಂಧಿತರು. ಪ್ರಮುಖ ಆರೋಪಿ ಹಿದಾಯತ ಶಿಕಂದರ ಬಾಗವಾನ್ ತಪ್ಪಿಸಿಕೊಂಡಿದ್ದಾನೆ.
ಅಪಹರಣಕ್ಕೆ ಒಳಗಾದ ಶಬ್ಬೀರ ಮಕಾಂದಾರ ಮತ್ತು ಪ್ರಮುಖ ಆರೋಪಿತ ಹಿದಾಯತ ಶಿಕಂದರ ಬಾಗವಾನ್ ಮಧ್ಯೆ ಹಣಕಾಸಿನ ವ್ಯವಹಾರ ನಡೆದಿತ್ತು. ಈ ಹಿನ್ನೆಲೆಯಲ್ಲಿ ಶಬ್ಬೀರ್‌ನನ್ನು ಅಪಹರಿಸಲು ಬಂಧಿತ ಆರೋಪಿಗಳಿಗೆ ಪ್ರಮುಖ ಆರೋಪಿ ಹಿದಾಯತ ಶಿಕಂದರ ಬಾಗವಾನ್ ಸುಪಾರಿ ನೀಡಿರುವುದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.
ಮಾ. 15ರಂದು ಶಬ್ಬೀರ್ ಮಕಾಂದಾರ ನಿಪ್ಪಾಣಿ ತಾಲೂಕಿನ ಕೊಗನೊಳ್ಳಿಯಲ್ಲಿ ತನ್ನ ಸಂಬಂಧಿಕರ ಮನೆಯಲ್ಲಿನ ಮದುವೆ ನಿಶ್ಚಿತಾರ್ಥ ಮುಗಿಸಿಕೊಂಡು ವಾಪಸ್ ಇಚಲಕರಂಜಿಗೆ ಹೋಗುವ ಸಂದರ್ಭದಲ್ಲಿ ಕಾರನ್ನು ಅಡ್ಡಗಟ್ಟಿದ ಆರೋಪಿಗಳು ಕಾರಿನಲ್ಲಿ ಹಾಕಿಕೊಂಡು ಅಪಹರಣಗೈದಿದ್ದರು. ಈ ಕುರಿತು ಅಪಹರಣಗೊಂಡ ಶಬ್ಬೀರ ಮಕಾಂದರ್ ಪುತ್ರ ಸಮೀರ್ ಮಕಾಂದಾರ ನಿಪ್ಪಾಣಿ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಈ ಕುರಿತು ತನಿಖೆ ಕೈಗೊಂಡ ಪೊಲೀಸರು ಮಂಗಳವಾರ ಕೊಲ್ಲಾಪುರ ಸಮೀಪದ ಕಳಂಬವಾಡಿ ಬಳಿ ಐವರು ಆರೋಪಿಗಳನ್ನು ಬಂಧಿಸಿ, ಅಪಹರಣಕ್ಕೆ ಒಳಗಾಗಿದ್ದ ಶಬ್ಬೀರ್ ಮಕಾಂದಾರ ಅವರನ್ನು ಬಿಡುಗಡೆಗೊಳಿಸಿ ಕುಟುಂಬಸ್ಥರಿಗೆ ಒಪ್ಪಿಸಿದ್ದಾರೆ. ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ. ತಪ್ಪಿಸಿಕೊಂಡಿರುವ ಪ್ರಮುಖ ಆರೋಪಿಯ ಬಂಧನಕ್ಕೆ ಕ್ರಮ ವಹಿಸಲಾಗಿದೆ ಎಂದು ಎಸ್‌ಪಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.
ತನಿಖಾ ತಂಡದಲ್ಲಿ ಡಿಎಸ್‌ಪಿ ಮನೋಜಕುಮಾರ ನಾಯಕ, ಸಿಪಿಐ ಸಂತೋಷ ಸತ್ಯನಾಯಕ, ಪಿಎಸ್‌ಐ ಬಿ.ಎಸ್. ತಳವಾರ, ಕುಮಾರ ಹಡಕರ, ಮಾರುತಿ ಖಾನಪ್ಪನವರ, ಪ್ರಕಾಶ ಸಾವೋಜಿ, ಸಂಜು ಕಾಡಗೌಡ, ನಾಗಪ್ಪ ಅಮರ, ರವಿ ಢಂಗ, ಮುತ್ತಣ್ಣ ತೆರದಾಳ, ಮಾರುತಿ ಕಾಂಬಳೆ, ಉದಯ ಕಾಂಬಳೆ ಇತರರು ಇದ್ದರು.