ಜಿಲ್ಲೆ

ಬಸ್, ಕಾರು ನಡುವೆ ಡಿಕ್ಕಿಯಾಗಿ ಐವರಿಗೆ ಗಾಯ

ಹನೂರು: ತಾಲೂಕಿನ ಕೌದಳ್ಳಿ ಬಳಿಯ ಸಂತೇಖಾನೆಯ ಬಳಿ ಶುಕ್ರವಾರ ಬಸ್ ಹಾಗೂ ಕಾರು ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಐವರು ಗಾಯಗೊಂಡಿದ್ದಾರೆ.

ಮೈಸೂರಿನ ಅಶೋಕ್ (29), ಪುನೀತ್‌ಕುಮಾರ್ (26), ಭರತ್ (21), ಸಂಜಯ್ (18), ಮಹದೇವಪ್ರಸಾದ್ (18)ಗಾಯಗೊಂಡವರು.

ಬೆಳಗ್ಗೆ 9ರಲ್ಲಿ ದೇವರ ದರ್ಶನ ಪಡೆಯಲು ಕಾರಿನಲ್ಲಿ ಮಹದೇಶ್ವರಬೆಟ್ಟಕ್ಕೆ ತೆರಳುತ್ತಿದ್ದರು. ಈ ವೇಳೆ ಸಂತೇಖಾನೆಯ ಬಳಿ ಎದುರು ಬಂದ ಕೆಎಸ್‌ಆರ್‌ಟಿಸಿ ಬಸ್ ನಡುವೆ ಡಿಕ್ಕಿ ಸಂಭವಿಸಿದೆ. ಪರಿಣಾಮ ಕಾರಿನಲ್ಲಿದ್ದ ಐವರು ಗಾಯಗೊಂಡರು. ಸ್ಥಳೀಯರು ಗಾಯಾಳುಗಳನ್ನು ತುರ್ತು ವಾಹನದ ಮೂಲಕ ಕಾಮಗೆರೆಯ ಖಾಸಗಿ ಆಸ್ಪತ್ರೆಗೆ ಕಳುಹಿಸಿಕೊಟ್ಟರು. ಇವರಲ್ಲಿ ಇಬ್ಬರು ತೀವ್ರ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಸ್ಥಳಕ್ಕಾಗಮಿಸಿದ ರಾಮಾಪುರ ಪೋಲಿಸರು ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.