ಕಾರಟಗಿ ತಾಲೂಕಿನ ರೈಸ್ ಟೆಕ್ನಾಲಜಿ ಪಾರ್ಕ್ ಕಚೇರಿಯಲ್ಲಿ ಕನಕಗಿರಿ-ಕಾರಟಗಿ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ಜಿಲ್ಲಾಧ್ಯಕ್ಷ ರೆಡ್ಡಿ ಶ್ರೀನಿವಾಸ, ನಾಗರಾಜ ಅರಳಿ, ದೇವರಾಜ ಭಾವಿಕಟ್ಟಿ, ಹಜರತ್ ಹುಸೇನ್ ಇತರರಿದ್ದರು. 
ಜಿಲ್ಲೆ

ಪಂಚ ಗ್ಯಾರಂಟಿಗಳ ಯಶಸ್ಸಿಗೆ ಕೈಜೋಡಿಸಿ

ರುದ್ರಪ್ಪ ವಾಲಿ

ಕಾರಟಗಿ: ರಾಜ್ಯ ಸರ್ಕಾರ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪುವಂತೆ ರೂಪಿಸಿ ಜಾರಿಗೊಳಿಸಿರುವ ಪಂಚ ಗ್ಯಾರಂಟಿ ಯೋಜನೆಗಳನ್ನು ಜನತೆಗೆ ತಲುಪಿಸುವ ಹೊಣೆ ಅಧಿಕಾರಿಗಳು ಹಾಗೂ ಗ್ಯಾರಂಟಿ ಸಮಿತಿಗಳ ಮೇಲಿದೆ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ರೆಡ್ಡಿ ಶ್ರೀನಿವಾಸ್ ಹೇಳಿದರು.

ತಾಲೂಕಿನ ಸೋಮನಾಳ ಬಳಿಯ ರೈಸ್ ಟೆಕ್ನಾಲಜಿ ಪಾರ್ಕ್ ಕಚೇರಿಯಲ್ಲಿ ಗುರುವಾರ ಆಯೋಜಿಸಿದ್ದ ಕನಕಗಿರಿ-ಕಾರಟಗಿ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.

ಕ್ಷೇತ್ರದ ವ್ಯಾಪ್ತಿಯಲ್ಲಿ ಗೃಹಲಕ್ಷ್ಮಿ ಯೋಜನೆಯಡಿ 56 ಸಾವಿರ ಫಲಾನುಭವಿಗಳಿದ್ದು ಜಿಎಸ್‌ಟಿ, ಆದಾಯ ತೆರಿಗೆ ಸೇರಿದಂತೆ ನಾನಾ ಸಮಸ್ಯೆಗಳಿಂದ ವಂಚಿತರಾದವರಿಗೆ ಹಾಗೂ ಇನ್ನುಳಿದ ಬಾಕಿ ಅನುದಾನವನ್ನು ಮುಂಬರುವ ದಿನಗಳಲ್ಲಿ ನೀಡಲಾಗುವುದು. ಶಕ್ತಿ ಯೋಜನೆಯಡಿ ಆಗಸ್ಟ್‌ನಲ್ಲೇ ಗಂಗಾವತಿ ತಾಲೂಕಿನಲ್ಲಿ 34ಸಾವಿರ ಮಹಿಳಾ ಪ್ರಯಾಣಿಕರು ಪ್ರಯಾಣ ಮಾಡಿದ್ದಾರೆ. ಯುವನಿಧಿ ಯೋಜನೆಯಡಿ 1,900ಯುವಕರಿಗೆ ಸಹಾಯಧನ ವಿತರಣೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಅರ್ಹರನ್ನು ಗುರುತಿಸಿ ಫಲಾನುಭವಿಗಳ ಪಟ್ಟಿಗೆ ಸೇರಿಸಬೇಕು. ಅನ್ನಭಾಗ್ಯ ಯೋಜನೆಯಡಿ 57ಸಾವಿರ ಕುಟುಂಬಗಳಿಗೆ ಪಡಿತರ ವಿತರಿಸಲಾಗುತ್ತಿದೆ. ಜಿಲ್ಲೆಯಲ್ಲಿ ಅ.6ರಂದು ನಡೆಯುತ್ತಿರುವ ಮುಖ್ಯಮಂತ್ರಿಗಳ ಕಾರ್ಯಕ್ರಮಕ್ಕೆ ಕ್ಷೇತ್ರದ ವ್ಯಾಪ್ತಿಯಿಂದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳನ್ನು ಕರೆತರುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಗ್ಯಾರಂಟಿ ಯೋಜನೆಗಳ ಸದುಪಯೋಗ ಪಡೆದು ಆರ್ಥಿಕವಾಗಿ ಸ್ವಾವಲಂಬಿ ಜೀವನ ಸಾಗಿಸುತ್ತಿರುವ ಫಲಾನುಭವಿಗಳ ಸಕ್ಸಸ್ ಸ್ಟೋರಿಗಳನ್ನು ಎಲ್ಲ ಇಲಾಖೆ ಅಧಿಕಾರಿಗಳು ನಿಗದಿತ ಸಮಯದೊಳಗೆ ಸಲ್ಲಿಸಬೇಕು ಎಂದರು.

ತಾಲೂಕು ಸಮಿತಿ ಅಧ್ಯಕ್ಷ ದೇವರಾಜ ಭಾವಿಕಟ್ಟಿ ಮಾತನಾಡಿ, ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವ ಹೊಣೆ ನಮ್ಮೆಲ್ಲರ ಮೇಲಿದೆ ಎಂದರು.

ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಗಳ ಅಧ್ಯಕ್ಷರಿಗೆ ಹಾಗೂ ಸದಸ್ಯರಿಗೆ ಗುರುತಿನ ಚೀಟಿ ವಿತರಿಸಲಾಯಿತು. ಹಿರಿಯ ಸಾಹಿತಿ ಎಸ್.ಎಲ್.ಭೈರಪ್ಪ ನಿಧನರಾದ ಹಿನ್ನೆಲೆ ಮೌನಚಾರಣೆ ಮಾಡಿ ಸಂತಾಪ ಸೂಚಿಸಲಾಯಿತು.

ಸದಸ್ಯರಾದ ಸೋಮನಾಥ ದೊಡ್ಡಮನಿ, ಶಕುಂತಲಾ, ಕನಕಗಿರಿ ತಾಲೂಕು ಸಮಿತಿ ಅಧ್ಯಕ್ಷ ಹಜರತ್ ಹುಸೇನ್, ಕಾರಟಗಿ ತಾಲೂಕು ಅಧ್ಯಕ್ಷ ದೇವಪ್ಪ ಭಾವಿಕಟ್ಟಿ, ತಾಪಂ ಇಒಗಳಾದ ರಾಜಶೇಖರ್, ಲಕ್ಷ್ಮೀದೇವಿ ಇತರರಿದ್ದರು.