ಮೈಸೂರು: ರಾಜ್ಯ ಸರ್ಕಾರದ ಪಂಚ ಗ್ಯಾರಂಟಿಗಳ ಸಮಾವೇಶ ಮಾರ್ಚ್ 15 ರಂದು ಮಧ್ಯಾಹ್ನ 12 ಗಂಟೆಗೆ ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯಲಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ‘ಗ್ಯಾರಂಟಿಗಳ ಸಮಾವೇಶ, ಬರ ಪರಿಶೀಲನಾ’ ಸಭೆಯಲ್ಲಿ ಮಾತನಾಡಿದರು.
ಸಮಾವೇಶವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ. ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು ಭಾಗವಹಿಸುವರು. ರಾಜ್ಯ ಸರ್ಕಾರ ವಾಗ್ದಾನ ನೀಡಿದಂತೆ ಐದು ಗ್ಯಾರಂಟಿಗಳನ್ನು ಜಾರಿಗೊಳಿಸಿದ್ದು, ಕೋಟ್ಯಂತರ ಫಲಾನುಭವಿಗಳಿಗೆ ಅನುಕೂಲವಾಗಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಗೃಹಲಕ್ಷ್ಮಿ ಯೋಜನೆಯಡಿ 6.73 ಲಕ್ಷ, ಗೃಹಜ್ಯೋತಿ 9 ಲಕ್ಷ, ಯುವನಿಧಿ 783, ಅನ್ನಭಾಗ್ಯ ಯೋಜನೆಯಡಿ 22.76 ಲಕ್ಷ ಫಲಾನುಭವಿಗಳಿದ್ದು, 7.10 ಲಕ್ಷ ಪಡಿತರ ಚೀಟಿಗಳಿವೆ ಎಂದು ಮಾಹಿತಿ ನೀಡಿದರು.
ಸಮಾವೇಶದಲ್ಲಿ ಜಿಲ್ಲೆಯ 50 ಸಾವಿರ ಫಲಾನುಭವಿಗಳು ಭಾಗವಹಿಸಲಿದ್ದು, ಅವರಿಗೆ ವ್ಯವಸ್ಥಿತ ಕುಡಿಯುವ ನೀರು, ಊಟದ ವ್ಯವಸ್ಥೆ ಮಾಡಲು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಮಾತನಾಡಿ, ಜಿಲ್ಲೆಯ 256 ಗ್ರಾ.ಪಂ. ಹಾಗೂ 16 ಸ್ಥಳೀಯ ಸಂಸ್ಥೆಗಳಿಂದ 50 ಸಾವಿರ ಫಲಾನುಭವಿಗಳು ಆಗಮಿಸುತ್ತಿದ್ದು, 500 ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ. ಸಂಬಂಧಿಸಿದ ಅಧಿಕಾರಿಗಳು ಸಮಾವೇಶಕ್ಕೆ ಆಗಮಿಸುವ ವಾಹನಗಳಿಗೆ ಸೂಕ್ತ ಪಾರ್ಕಿಂಗ್ ವ್ಯವಸ್ಥೆ, ವೇದಿಕೆ, ಆಹಾರದ ವ್ಯವಸ್ಥೆಯ ಜವಾಬ್ದಾರಿಯನ್ನು ನೋಡಿಕೊಳ್ಳಬೇಕು ಎಂದು ಸೂಚನೆ ನೀಡಿದರು.