ಸೋಮವಾರಪೇಟೆಯಲ್ಲಿ ಇಂದಿರಾ ಕ್ಯಾಂಟೀನ್ ಅನ್ನು ಶಾಸಕ ಡಾ.ಮಂತರ್‌ಗೌಡ ಮತ್ತು ಅತಿಥಿಗಳು ವೇದಿಕೆಯಲ್ಲಿ ತಿಂಡಿ ತಿನ್ನುವ ಮೂಲಕ ಉದ್ಘಾಟಿಸಿದರು. ಜಯಂತಿ, ಮೋಹಿನಿ, ಮಹೇಶ್, ಕೃಷ್ಣಮೂರ್ತಿ ಇದ್ದರು. 
ಜಿಲ್ಲೆ

ಐದು ಗ್ಯಾರಂಟಿ ಬಡವರು, ರೈತರ ಬದುಕಿಗೆ ಆಶಾಕಿರಣ

ಸೋಮವಾರಪೇಟೆ: ಸೋಮವಾರಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ನಗರಾಭಿವೃದ್ಧಿ ಮತ್ತು ಪೌರಾಡಳಿತ ಇಲಾಖೆ ವತಿಯಿಂದ ನಿಮಿರ್ಸಸಲಾದ ಇಂದಿರಾ ಕ್ಯಾಂಟೀನ್ ಅನ್ನು ಶಾಸಕ ಡಾ.ಮಂತರ್‌ಗೌಡ ಸೋಮವಾರ ಉದ್ಘಾಟಿಸಿದರು.

ಹಸಿವುಮುಕ್ತ ಕರ್ನಾಟಕ ಕನಸನ್ನು ನನಸಾಗಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಇಂದಿರಾ ಕ್ಯಾಂಟೀನ್ ಜತೆಗೆ ಐದು ಗ್ಯಾರಂಟಿಗಳು ಬಡವರು, ಶೋಷಿತರು, ಕಾರ್ಮಿಕರು, ರೈತರ ಬದುಕಿಗೆ ಆಶಾಕಿರಣವಾಗಿದೆ. ಬಡವರ ಪರ ಯೋಜನೆಗಳಿಗೆ ರಾಜ್ಯ ಸರ್ಕಾರ ವಾರ್ಷಿಕ 50,000 ಕೋಟಿ ರೂ.ಗಿಂತ ಹೆಚ್ಚಿನ ಹಣವನ್ನು ನೀಡುತ್ತಿದೆ. ಆದರೂ ಭಾರತ ಹಸಿವು ಸೂಚ್ಯಂಕದಲ್ಲಿ 205ನೇ ಸ್ಥಾನದಲ್ಲಿದೆ. ಹಸಿವುಮುಕ್ತ ರಾಷ್ಟ್ರವಾಗಬೇಕಾದರೆ ಬಡವರ ಕಲ್ಯಾಣಕ್ಕೆ ದೇಶದ ಎಲ್ಲ ರಾಜ್ಯಗಳಲ್ಲಿ ಗ್ಯಾರಂಟಿ ಯೋಜನೆಗಳನ್ನು ರೂಪಿಸಲೇಬೇಕಾಗಿದೆ ಎಂದು ಡಾ.ಮಂತರ್‌ಗೌಡ ಹೇಳಿದರು.

ಸೋಮವಾರಪೇಟೆ ಪಟ್ಟಣ ಹಾಗೂ ಸುತ್ತಮುತ್ತಲಿನ ಬಡವರು, ಕಾರ್ಮಿಕರು, ರೈತರು, ಗ್ರಾಮೀಣ ಜನರು, ವಿದ್ಯಾರ್ಥಿಗಳು ಸೇರಿದಂತೆ ಎಲ್ಲ ವರ್ಗದ ಜನತೆ ಇಂದಿರಾ ಕ್ಯಾಂಟೀನ್ ಸೌಲಭ್ಯ ಪಡೆದುಕೊಳ್ಳಬೇಕು. ನನ್ನ ಕ್ಷೇತ್ರ ಹಸಿವುಮುಕ್ತವಾಗಬೇಕು ಎಂಬ ಬದ್ಧತೆಯಿಂದ ಮೂರು ಇಂದಿರಾ ಕಾಂಟೀನ್ ತರಲಾಗಿದೆ. ಬೆಳಗ್ಗೆ ಒಬ್ಬರು ಸೇವಿಸುವ ತಿಂಡಿಗೆ ಸರ್ಕಾರ 45 ರೂ. ಖರ್ಚು ಮಾಡುತ್ತಿದೆ. ಗ್ರಾಹಕರು 5 ರೂ. ನೀಡಿದರೆ ಸಾಕು. ಮಧ್ಯಾಹ್ನ ಹಾಗೂ ರಾತ್ರಿ ಊಟಕ್ಕೆ 55 ರೂ. ನೀಡಲಾಗುತ್ತಿದ್ದು, 10 ರೂ. ನೀಡಿ ಊಟ ಮಾಡಬಹುದು. ಇಂತಹ ಜನಕಲ್ಯಾಣ ಯೋಜನೆಗಳು ಕಾಂಗ್ರೆಸ್ ನೇತೃತ್ವದ ಸರ್ಕಾರದಿಂದ ಮಾತ್ರ ಸಾಧ್ಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕ್ಯಾಂಟೀನ್ ನಡೆಸುವವರು ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಸ್ವಚ್ಛತೆ ಕಾಪಾಡದಿದ್ದರೆ ಕ್ರಮ ಜರುಗಿಸಲಾಗುವುದು. ಶುಚಿ, ರುಚಿಯಾದ ಊಟವನ್ನು ಮಾತ್ರ ಇಲ್ಲಿನ ಜನತೆ ಇಷ್ಟಪಡುತ್ತಾರೆ. ಹಾಗಾಗಿ ಗ್ರಾಹಕರೊಂದಿಗೆ ಸೌಜನ್ಯದಿಂದ ವರ್ತಿಸಬೇಕು ಎಂದು ಕಿವಿಮಾತು ಹೇಳಿದರು.

ವೇದಿಕೆಯಲ್ಲಿ ತಿಂಡಿ ತಿಂದ ಶಾಸಕರು ರುಚಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಉಪ್ಪಿಟ್ಟು ತುಂಬ ಟೇಸ್ಟ್ ಇದೆ. ನಮ್ಮ ಮನೆಯಲ್ಲಿ ಉಪ್ಪಿಟ್ಟು ತಿನ್ನಲು ಭಯವಾಗುತ್ತದೆ ಎಂದು ಹಾಸ್ಯ ಚಟಾಕಿ ಹಾರಿಸಿದರು.

ವೇದಿಕೆಯಲ್ಲಿ ಇಂದಿರಾಗಾಂಧಿ ಅಭಿಮಾನಿಗಳ ಸಂಘದ ಅಧ್ಯಕ್ಷ ಎಚ್.ಎ.ನಾಗರಾಜ್, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಜಯಂತಿ ಶಿವಕುಮಾರ್, ಉಪಾಧ್ಯಕ್ಷೆ ಮೋಹಿನಿ, ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಆರ್. ಮಹೇಶ್, ಸದಸ್ಯರಾದ ಶೀಲಾ ಡಿಸೋಜ, ಬಿ.ಸಿ.ವೆಂಕಟೇಶ್, ಪಿ.ಕೆ.ಚಂದ್ರು, ಮೃತ್ಯುಂಜಯ, ಕಿರಣ್ ಉದಯ್‌ಶಂಕರ್, ಎಸ್.ಕೆ.ವಿನಿ, ತಹಸೀಲ್ದಾರ್ ಕೃಷ್ಣಮೂರ್ತಿ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಜಿ.ಎಂ.ಕಾಂತರಾಜು, ಸುಡಾ ಅಧ್ಯಕ್ಷ ಕೆ.ಎ.ಆದಂ, ಇಒ ಪರಮೇಶಕುಮಾರ್, ಸಿಒ ಸತೀಶ್, ಇಂಜಿನಿಯರ್ ಹೇಮಂತ್ ಇದ್ದರು.