ಜಿಲ್ಲೆ

ಆರ್ಥಿಕ ಸಬಲೀಕರಣಕ್ಕೆ ಅವಕಾಶ : ಉಮಾನಾಥ ಶೆಟ್ಟಿ ಹೇಳಿಕೆ

ಸೌಮ್ಯ ಆರ್

ಪುತ್ತೂರು ಗ್ರಾಮಾಂತರ: ರಾಜ್ಯ ಕಾಂಗ್ರೆಸ್ ಸರ್ಕಾರ ಜನರ ಕಲ್ಯಾಣಕ್ಕಾಗಿ ಪಂಚ ಗ್ಯಾರಂಟಿ ಯೋಜನೆ ಜಾರಿಗೆ ತಂದು ಬಡ ಜನತೆ, ಮಹಿಳೆಯರು, ಯುವ ಜನತೆಯ ಆರ್ಥಿಕ ಸಬಲೀಕರಣಕ್ಕೆ ಅವಕಾಶ ಮಾಡಿಕೊಟ್ಟಿದೆ ಎಂದು ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಪುತ್ತೂರು ತಾಲೂಕು ಅಧ್ಯಕ್ಷ ಉಮಾನಾಥ ಶೆಟ್ಟಿ ಪೆರ್ನೆ ಹೇಳಿದರು.

ಪುತ್ತೂರು ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ವತಿಯಿಂದ ಪಾಣಾಜೆಯಲ್ಲಿ ನಡೆದ ಪಾಣಾಜೆ, ಬೆಟ್ಟಂಪಾಡಿ, ನಿಡ್ಪಳ್ಳಿ ಗ್ರಾಮಗಳಲ್ಲಿ ಪಂಚ ಗ್ಯಾರಂಟಿ ಯೋಜನೆ ನೋಂದಣಿಗೆ ಬಾಕಿ ಇರುವ, ತಿರಸ್ಕೃತ ಅರ್ಜಿ ವಿಲೇವಾರಿ ಶಿಬಿರ, ಯುವನಿಧಿ ವಿಶೇಷ ನೋಂದಣಿ ಅಭಿಯಾನದಲ್ಲಿ ಮಾತನಾಡಿದರು.

ಅನೇಕ ಮಂದಿ ಗ್ಯಾರಂಟಿ ಯೋಜನೆ ಪ್ರಯೋಜನ ಪಡೆದುಕೊಂಡಿದ್ದರೂ, ಕೆಲವು ಮಂದಿ ವಂಚಿತರಾಗಿದ್ದಾರೆ. ವಂಚಿತರಾಗಿರುವ ಎಲ್ಲ ಅರ್ಹ ಫಲಾನುಭವಿಗಳಿಗೆ ಗ್ಯಾರಂಟಿ ಯೋಜನೆ ಸವಲತ್ತು ಒದಗಿಸಿಕೊಡುವ ನಿಟ್ಟಿನಲ್ಲಿ ಪ್ರಯತ್ನಗಳಾಗುತ್ತಿವೆ. ತಾಂತ್ರಿಕ ಸಮಸ್ಯೆ ಹಿನ್ನೆಲೆಯಲ್ಲಿ ಅರ್ಜಿ ತಿರಸ್ಕೃತಗೊಂಡಿದೆ ಎಂದರು.

ಪಾಣಾಜೆ ಗ್ರಾಪಂ ಅಧ್ಯಕ್ಷೆ ಮೈಮುನಾತುಲ್ ಮೆಹರಾ, ನಿಡ್ಪಳ್ಳಿ ಗ್ರಾಪಂ ಅಧ್ಯಕ್ಷ ವೆಂಕಟ್ರಮಣ ಬೊರ್ಕರ್, ಪುತ್ತೂರು ತಾಲೂಕು ಕೆಡಿಪಿ ಸದಸ್ಯ ಕೃಷ್ಣಪ್ರಸಾದ್ ಆಳ್ವ, ಪುತ್ತೂರು ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರಾದ ವಿಶ್ವಜಿತ್ ಅಮ್ಮುಂಜೆ, ಸಂತೋಷ್ ಭಂಡಾರಿ ಚಿಲ್ಮೆತ್ತಾರ್, ತಾರಾನಾಥ ನಾಯ್ಕ ನುಳಿಯಾಲು, ಅಬ್ಬು ನವಗ್ರಾಮ, ತಾಲೂಕು ಪಂಚಾಯಿತಿ ಸಂಯೋಜಕ ಭರತ್ ರಾಜ್ ಮತ್ತಿತರರು ಉಪಸ್ಥಿತರಿದ್ದರು.

60 ಮಂದಿಯ ಅರ್ಜಿ ವಿಲೇವಾರಿ

ತಿರಸ್ಕೃತ ಅರ್ಜಿ ಸರಿಪಡಿಸುವ ನಿಟ್ಟಿನಲ್ಲಿ ಮಾಹಿತಿ ನೀಡಲಾಯಿತು. ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಇಲಾಖಾಧಿಕಾರಿಗಳು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಪಂಚಾಯಿತಿ ಸದಸ್ಯರ ಪಾಲ್ಗೊಳ್ಳುವಿಕೆಯೊಂದಿಗೆ ನಡೆದ ಕಾರ್ಯಕ್ರಮದಲ್ಲಿ ಪಾಣಾಜೆ, ಬೆಟ್ಟಂಪಾಡಿ, ನಿಡ್ಪಳ್ಳಿ ಗ್ರಾಮ ಪಂಚಾಯಿತಿಗೆ ಒಳಪಟ್ಟ ಗ್ಯಾರಂಟಿ ಯೋಜನೆಗೆ ಹೊಸದಾಗಿ ಸೇರ್ಪಡೆ ಸೇರಿದಂತೆ 200ರಷ್ಟು ಗ್ಯಾರಂಟಿ ಯೋಜನೆ ವಂಚಿತ ಮಂದಿ ಅರ್ಜಿ ಸಲ್ಲಿಸಿದರು. ಈ ಪೈಕಿ 60 ಮಂದಿಯ ಅರ್ಜಿ ವಿಲೇವಾರಿ ಮಾಡಲಾಯಿತು.