ಜಿಲ್ಲೆ

ಭೀಕರ ಅಪಘಾತ‌ ಐವರು ಸಾವು

ಅಪಘಾತದಲ್ಲಿ ಇಬ್ಬರು ಚಿಣ್ಣರು ಒಂದೇ ಕುಟುಂಬದ ಐವರು ಮೃತಪಟ್ಟ ಹೃದಯವಿದ್ರಾವಕ ಘಟನೆ ಅಫಜಲಪುರ ತಾಲೂಕಿನ ಬಳೂರ್ಗಿ ಬಳಿ ಗುರುವಾರ ಸಂಜೆ ಜರುಗಿದೆ.

ಬಾಬುರಾವ ಯಡ್ರಾಮಿ

ಅಫಜಲಪುರ ತಾಲೂಕಿನ ಬಳೂರ್ಗಿ ಬಳಿ ಘಟನೆ | ಜವರಾಯನ ರೂಪದಲ್ಲಿ ಬಂದ ಲಾರಿ ಬೈಕ್ ಗೆ ಡಿಕ್ಕಿ
ವಿಜಯವಾಣಿ ಸುದ್ದಿಜಾಲ ಕಲಬುರಗಿ

ಅಪಘಾತದಲ್ಲಿ ಇಬ್ಬರು ಚಿಣ್ಣರು ಒಂದೇ ಕುಟುಂಬದ ಐವರು ಮೃತಪಟ್ಟ ಹೃದಯವಿದ್ರಾವಕ ಘಟನೆ ಅಫಜಲಪುರ ತಾಲೂಕಿನ ಬಳೂರ್ಗಿ ಬಳಿ ಗುರುವಾರ ಸಂಜೆ ಜರುಗಿದೆ.

ನೇಪಾಳದ ಗುಟೂ ಮೂಲದ ರೋಷನ್ (೨೮), ಅಸ್ಮಿತಾ ರೋಷನ್ (೨೩), ಸ್ವಸ್ತಿಕಾ (೧೯), ದಡಕನ್ (೫), ಲಖನ್ (೧.೫ ವರ್ಷ) ಮೃತ ದುರ್ದೈವಿಗಳು. ಬಸವೇಶ್ವರ ವೃತ್ತದಲ್ಲಿ ಫಾಸ್ಟ್ಫುಡ್ ವ್ಯಾಪಾರ ಮಾಡಿಕೊಂಡು ಜೀವನ ನಡೆಸುತ್ತಿದ್ದರು.
ಮಹಾರಾಷ್ಟçದ ದುಧನಿಯಲ್ಲಿ ರೋಷನ್ ಅವರ ಸಹೋದರ ನವೀನ್ ಎಂಬಾತ ಚೈನೀಸ್ ಫುಡ್ ಅಂಗಡಿ ಹಾಕಿಕೊಂಡಿದ್ದ. ಕಳೆದ ಕೆಲ ದಿನಗಳಿಂದ ಅನಾರೋಗ್ಯಕ್ಕೆ ಗುರಿಯಾಗಿದ್ದು, ಆರೋಗ್ಯ ವಿಚಾರಿಸುವುದಕ್ಕಾಗಿ ಒಂದೇ ಬೈಕ್‌ನಲ್ಲಿ ಪುಟ್ಟ ಮಕ್ಕಳಿಬ್ಬರು, ರೋಷನ್, ಅಸ್ಮಿತಾ, ಸ್ವಸ್ತಿಕಾ ತೆರಳಿದ್ದರು.
ಸಂಜೆ ದುಧನಿಯಿಂದ ಅಫಜಲಪುರಕ್ಕೆ ವಾಪಸ್ ಆಗುವಾಗ ಬಳೂರ್ಗಿ ಮಾರ್ಗ ಮಧ್ಯೆದಲ್ಲಿ ವೇಗವಾಗಿ ಬಂದ ಲಾರಿ ಡಿಕ್ಕಿ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಇಬ್ಬರ ಮೇಲೆ ಲಾರಿ ಹಾಯ್ದಿದ್ದು, ಸ್ಥಳದಲ್ಲೇ ನಾಲ್ವರು ಮೃತಪಟ್ಟಿದ್ದಾರೆ. ಇನ್ನೊರ್ವ ಅಫಜಲಪುರ ಸರ್ಕಾರಿ ಆಸ್ಪತ್ರೆಯಲ್ಲಿ ಅಸುನೀಗಿದ್ದಾನೆ. ಪುಟ್ಟ ಮಕ್ಕಳು ಸೇರಿ ಎಲ್ಲರನ್ನೂ ಕಳೆದುಕೊಂಡು ಕುಟುಂಬಸ್ಥರ ಆಕ್ರಂಧನ ಮುಗಿಲು ಮುಟ್ಟಿತ್ತು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸುಲು, ಎಎಸ್‌ಪಿ ಶ್ರೀನಿಧಿ, ಡಿವೈಎಸ್‌ಪಿ ಗೋಪಿ, ಸಿಪಿಐ ಪಂಡಿತ್ ಸಗರ, ಪಿಎಸ್‌ಐ ಮಡಿವಾಳಪ್ಪ ಬಾಗೋಡಿ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದರು. ಅಫಜಲಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
===
(ಬಾಕ್ಸ್)
೧೦ ದಿನದ ಹಿಂದಷ್ಟೆ ಮದುವೆ, ಇಂದು ಮಸಣ
ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟ ಸ್ವಸ್ತಿಕಾಳ ವಿವಾಹವೂ ದಸರಾ ಹಬ್ಬದಂದು ಜರುಗಿತ್ತು. ಇನ್ನು ಬಾಳಬೇಕಿದ್ದ ಯುವತಿ ಜವರಾಯನ ಅಟ್ಟಹಾಸಕ್ಕೆ ಬಲಿಯಾಗಿದ್ದಾಳೆ. ಅ.೨೩ರಂದು ಅಫಜಲಪುರದ ಕಲಬುರಗಿಯ ರಸ್ತೆಯ ದೇವಿ ಮಂದಿರದಲ್ಲಿ ಸ್ವಸ್ತಿಕಾಳ ಮದುವೆಯೂ ಕೃಷ್ಣ ಜತೆ ನೆರವೇರಿತ್ತು. ಕೇವಲ ೧೧ ದಿನದಲ್ಲಿಯೇ ಪತ್ನಿಯನ್ನು ಕಳೆದುಕೊಂಡ ಪತಿಯ ಆಕ್ರಂಧನ ನೆರೆದ ಜನರ ಕಣ್ಣಲ್ಲಿ  ನೀರು ತರಿಸಿತು.