ಬೆಂಗಳೂರು: ವಿಜಯವಾಣಿ ಮತ್ತು ದಿಗ್ವಿಜಯ 247 ನ್ಯೂಸ್ ಸಹಯೋಗದಲ್ಲಿ ಸ್ವದೇಶಿ ಜಾಗರಣ ಮಂಚ್ ಕರ್ನಾಟಕ ಜ.9ರಿಂದ ಜ.13ರವರೆಗೆ ಬಸವೇಶ್ವರನಗರದ ಸಾಣೆಗೊರವನಹಳ್ಳಿಯ ನೇತಾಜಿ ಆಟದ ಮೈದಾನದಲ್ಲಿ ಸ್ವದೇಶಿ ಮೇಳ ಆಯೋಜಿಸಿದೆ. ಸಾರ್ವಜನಿಕರಿಗೆ ಉಚಿತ ಪ್ರವೇಶವಿದೆ. ಗುರುವಾರ ಸಂಜೆ 5.30ಕ್ಕೆ ಮೇಳ ಉದ್ಘಾಟನೆಗೊಳ್ಳಲಿದೆ. ರಾತ್ರಿ 7.30ಕ್ಕೆ ಭಾವಸಂಗಮ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ಶುಕ್ರವಾರ (ಜ.10) ಬೆಳಗ್ಗೆ 10.30ಕ್ಕೆ ದೇಶ ಭಕ್ತಿಗೀತೆಗಳ ಸಮೂಹ ಗಾಯನ ಸ್ಪರ್ಧೆ, 2.30ಕ್ಕೆ ಕಾಲೇಜು ವಿದ್ಯಾರ್ಥಿಗಳ ಸಮಾವೇಶ, ಸಂಜೆ 6ಕ್ಕೆ ಬಹುರಾಷ್ಟ್ರೀಯ ಕಂಪನಿಗಳ ಒಳಗುಟ್ಟು ಉಪನ್ಯಾಸ, ರಾತ್ರಿ 7.15ಕ್ಕೆ ಲಯ ಲಾವಣ್ಯ ಸಾಂಸ್ಕೃತಿಕ ಕಾರ್ಯಕ್ರಮವಿದೆ. ಶನಿವಾರ (ಜ.11) ಬೆಳಗ್ಗೆ 10ಕ್ಕೆ ಆರ್ಯುವೇದ ಶಿಬಿರ, 2.30ಕ್ಕೆ ತಾರಸಿ ತೋಟ ತರಬೇತಿ, ಸಂಜೆ 6ಕ್ಕೆ ಉಪನ್ಯಾಸ, 7.15ಕ್ಕೆ ಯಕ್ಷಗಾನ ‘ನರಕಾಸುರ ವಧೆ’ ಪ್ರದರ್ಶನಗೊಳ್ಳಲಿದೆ. ಭಾನುವಾರ
(ಜ.12) ಬೆಳಗ್ಗೆ 7.30ಕ್ಕೆ ರಂಗೋಲಿ ಸ್ಪರ್ಧೆ, 10.30ಕ್ಕೆ ಸ್ವದೇಶಿ ವಸ್ತು ಭಂಡಾರ ತರಬೇತಿ ಕಾರ್ಯಾ ಗಾರ, 3ಕ್ಕೆ ಕುಟುಂಬ ಪ್ರಬೋಧನ್, ಸಂಜೆ 6ಕ್ಕೆ ಸ್ವದೇಶಿ ಆಂದೋಲನದಲ್ಲಿ ನಮ್ಮ ಪಾತ್ರ ಉಪನ್ಯಾಸ, ರಾತ್ರಿ 7.15ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ಸೋಮವಾರ (ಜ.13) ಬೆಳಗ್ಗೆ 10ಕ್ಕೆ ನಿತ್ಯಬಳಕೆ ವಸ್ತುಗಳ ತರಬೇತಿ ಕಾರ್ಯಗಾರ, 2.30ಕ್ಕೆ ಪಂಚಗವ್ಯ ಚಿಕಿತ್ಸಾ ಶಿಬಿರ, ಸಂಜೆ 7.15ಕ್ಕೆ ಚಿಂತಕರ ಚಾವಡಿ ಹರಟೆ ‘ಭಾರತೀಯ ಕುಟುಂಬ’ ಸಾಂಸ್ಕೃತಿಕ ಕಾರ್ಯಕ್ರಮವಿದೆ. ಸೀರೆ ಧರಿಸಿ ಬರುವ ಮಹಿಳೆಯರನ್ನು ಪ್ರೋತ್ಸಾಹಿಸಲು ಲಕ್ಕಿ ಡಿಪ್ ಕೂಡ ಇದೆ. ಸೀರೆಗಳನ್ನು ಬಹುಮಾನವಾಗಿ ಕೊಡಲಾಗುತ್ತದೆ.
ದೊಡ್ಡ ಮತ್ತು ಸಣ್ಣ ನಗರಗಳಲ್ಲಿ ಸ್ವದೇಶಿ ಮೇಳ ಆಯೋಜಿಸುವ ಸ್ವದೇಶಿ ಜಾಗರಣ ಮಂಚ್ನ ಆರಂಭ, ಮಾಡುವ ಕೆಲಸ, ಸ್ವದೇಶಿ ಆರ್ಥಿಕತೆ ಬಗೆಗಿನ ಅದರ ಚಿಂತನೆಗಳು ಇತ್ಯಾದಿ ವಿಷಯಗಳ ಕುರಿತು ಡಾ. ಎಚ್. ಪಾಂಡುರಂಗ ವಿಠಲ ನೀಡಿರುವ ವಿವರ ಇಲ್ಲಿದೆ.
ರಾಷ್ಟ್ರ ಋಷಿ ಎಂದು ಖ್ಯಾತರಾದ ಶ್ರೀ ದತ್ತೋಪಂತ ಠೇಂಗಡೀಜಿ ಭಾರತೀಯ ಕಾರ್ವಿುಕ ಸಂಘದ ನಾಯಕರು. ಸ್ವದೇಶಿ ಜಾಗರಣ ಮಂಚ್, ಭಾರತೀಯ ಕಿಸಾನ್ ಸಂಘ್, ಭಾರತೀಯ ಮಜ್ದೂರ್ ಸಂಘಗಳ ಸಂಸ್ಥಾಪಕರು. ಮಹಾರಾಷ್ಟ್ರದ ವಾರ್ಧಾ ಸಮೀಪದ ಆರ್ವಿ ಗ್ರಾಮದಲ್ಲಿ ಜನಿಸಿದ ಠೇಂಗಡೀಜಿ, ಭಾರತದ ಸಾಮಾಜಿಕ, ಅರ್ಥಿಕ ಪರಿಸ್ಥಿತಿ ಮೇಲೆ ತಮ್ಮ ಛಾಪನ್ನು ಒತ್ತಿದ್ದಾರೆ. ಮಹಾತ್ಮ ಗಾಂಧಿ ನಂತರ ಸ್ವದೇಶಿ ಚಿಂತನೆಯನ್ನು ಒಂದು ಚಳವಳಿಯಾಗಿ ಬೆಳೆಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಇವರು ಸ್ಥಾಪಿಸಿದ ಸ್ವದೇಶಿ ಜಾಗರಣ ಮಂಚ್ ದೇಶದಲ್ಲಿ ಸ್ವದೇಶಿ ಮೇಳಗಳೂ ಸೇರಿ ಹಲವು ಕಾರ್ಯಕ್ರಮಗಳ ಮೂಲಕ ಸ್ವದೇಶಿ ಚಿಂತನೆಯನ್ನು ಪಸರಿಸುತ್ತಿದೆ. ಪ್ರತಿರೋಧದ ಮೂಲಕ ತಪ್ಪು ಆರ್ಥಿಕ ನೀತಿಗಳ ಕುರಿತು ಸರ್ಕಾರವನ್ನು ಎಚ್ಚರಿಸುತ್ತಿದೆ.
ಆರ್ಥಿಕ ವಿಚಾರಗಳ ದೃಷ್ಟಿಕೋನ
ಅರ್ಥಿಕತೆ ಮಾನವನ ಅಭಿವೃದ್ಧಿಯ ದ್ಯೋತಕ. ಪಾಶ್ಚಿಮಾತ್ಯ ಸಾಮಾಜಿಕ ಆರ್ಥಿಕ ಅಭಿವೃದ್ಧಿಯ ಸಂರಚನೆ ನಮಗೆ ಹೊಂದುವುದಿಲ್ಲ. ಭಾರತದ ಸುಸ್ಥಿರ ಅಭಿವೃದ್ಧಿಯ ಕಾರ್ಯಯೋಜನೆ ರೂಪಿಸಿದ್ದು ಶ್ರೀ ದತ್ತೋಪಂತ ಠೇಂಗಡೀಜಿ ಯ ಕೊಡುಗೆ. ಅವರ ವಿವರಣೆ ಇದು: ‘ಪಾಶ್ಚಾತ್ಯೀಕರಣವು ಆಧುನಿಕೀಕರಣ ಅಲ್ಲ; ಪಾಶ್ಚಾತ್ಯ ಮಾದರಿಗಳು ಇಡೀ ವಿಶ್ವದ ಮಾದರಿಗಳಲ್ಲ.’ ಗುರೂಜಿಯವರ ಚಿಂತನೆಯಾದ ಪರಸ್ಪರಾವಲಂಬಿಗಳಾದ ಭಾಗಗಳುಳ್ಳ ಸಮಷ್ಟಿ ವ್ಯವಸ್ಥೆ. ಅದರ ಮುಂದುವರಿದ ಭಾಗವೇ ದೀನದಯಾಳ ಉಪಾಧ್ಯಾಯರ ಏಕಾತ್ಮ ಮಾನವ ದರ್ಶನ ಚಿಂತನೆ. ಈ ಚಿಂತನೆಗಳನ್ನು ಜನರಿಗೆ ಅರ್ಥ ಮಾಡಿಸಿರುವುದು 3ನೇ ತಲೆಮಾರಿನ ಚಿಂತಕ ದತ್ತೋಪಂತ ಠೇಂಗಡಿ.
ಸ್ವದೇಶಿ ಜಾಗರಣ ಮಂಚ್ ಬೆಳವಣಿಗೆ
80ರ ದಶಕದಲ್ಲೇ ಎಬಿವಿಪಿ, ಬಿಎಂಎಸ್, ಬಿಕೆಎಸ್ ಸಂಘಟನೆಗಳು ಜೀವನಶೈಲಿಯಾಗಿ ಸ್ವದೇಶಿಯನ್ನು ಅಳವಡಿಸಿಕೊಳ್ಳುವುದು ಮುಖ್ಯ ಎಂಬ ವಿಚಾರವಾಗಿ ಜನರಲ್ಲಿ ಜಾಗೃತಿ ಮೂಡಿಸಲು ಪ್ರಯತ್ನಿಸಿದವು. ಈ ವಿಚಾರಕ್ಕೆ ಸ್ಪಷ್ಟ ರೂಪ ಕೊಡಲು 1991ರ ನ.22ರಂದು ನಾಗಪುರದಲ್ಲಿ ಸ್ವದೇಶಿ ಜಾಗರಣ ಮಂಚ್ ಸ್ಥಾಪಿಸಲಾಯಿತು. ಮೇಲಿನ ಮೂರು ರಾಷ್ಟ್ರೀಯ ಸಂಘಟನೆಗಳ ಜತೆ ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಮತ್ತು ಸಹಕಾರ ಭಾರತಿ ಪ್ರತಿನಿಧಿಗಳು ಠೇಂಗಡಿಯವರ ಉಪಸ್ಥಿತಿಯಲ್ಲಿ ಈ ನಿರ್ಣಯ ಕೈಗೊಂಡರು. ನಾಗಪುರ ವಿವಿಯ ಮಾಜಿ ಕುಲಪತಿ ಡಾ. ಎಂ.ಜಿ. ಬೊಕಾರೆ ಸಂಯೋಜಕರಾಗಿರುವ ಕೇಂದ್ರ ಸಮಿತಿಯನ್ನು ರಚಿಸಲಾಯಿತು. 1992ರ ಜ.12ರಂದು ಕೇಂದ್ರ ಸರಕಾರದ ಅರ್ಥಿಕ ನೀತಿಯ ವಿರುದ್ಧ ದೊಡ್ಡ ಚಳವಳಿ ಪ್ರಾರಂಭಿಸಲಾಯಿತು. ಸ್ವದೇಶಿ, ಬೌದ್ಧಿಕ ಆಸ್ತಿ ಹಕ್ಕುಗಳು, ಗ್ಯಾಟ್ ಮತ್ತು ಬಹುರಾಷ್ಟ್ರೀಯ ಕಂಪನಿಗಳ ಆರ್ಥಿಕ ಸಾಮ್ರಾಜ್ಯವಾದ ಮೊದಲಾದ ಪುಸ್ತಕಗಳನ್ನು ಪ್ರಕಟಿಸಿ, ಚಳವಳಿಗೆ ಪ್ರಚಾರ ನೀಡಲಾಗಿದೆ. ಕ್ರಮೇಣ ವನವಾಸಿ ಕಲ್ಯಾಣ ಆಶ್ರಮ, ವಿದ್ಯಾ ಭಾರತಿ, ರಾಷ್ಟ್ರ ಸೇವಿಕಾ ಸಮಿತಿ, ಭಾರತೀಯ ಶಿಕ್ಷಕ ಮಂಡಲ್ ಮೊದಲಾದ ಸಂಘಟನೆಗಳೂ ಕೈಜೋಡಿಸಿದವು. ನಿಧಾನವಾಗಿ ಸ್ವದೇಶಿ ಜಾಗರಣ ಮಂಚ್ ಸ್ವದೇಶಿ ವಿಚಾರಧಾರೆಯನ್ನು ಜನರು ಒಪ್ಪಲಾರಂಭಿಸಿದ್ದಾರೆ.
ಸ್ವದೇಶಿ ಆರ್ಥಿಕತೆ ಭಾರತೀಯ ಆರ್ಥಿಕತೆಯು ನಾಲ್ಕು ಲಕ್ಷಣಗಳನ್ನು ಹೊಂದಿದೆ. ಕೂಲಿಯ ಉದ್ಯೋಗ ಇಲ್ಲದ ಸ್ವಂತ ಉದ್ದಿಮೆ; ಪ್ರಕೃತಿಮಾತೆಯನ್ನು ಧ್ವಂಸ ಮಾಡದೆ, ಹಾಲು ಕರೆದುಕೊಳ್ಳುವುದು; ಧರ್ಮಸೂತ್ರ ಗಳ ಅನ್ವಯದೊಡನೆ ಇರುವ ಸಮಾನತೆಗೆ ಪ್ರಯತ್ನ; ಕೈಚಳಕ ತೋರಬಲ್ಲ ಮಾರುಕಟ್ಟೆ ಇಲ್ಲದ ಸ್ವತಂತ್ರ ಸ್ಪರ್ಧೆಯಾಗಿದೆ.