ಶಿವಮೊಗ್ಗ: ಭದ್ರಾವತಿಯ ಶಿವರಾಮನಗರ ಮತ್ತು ಮಾಚೇನಹಳ್ಳಿ ನಡುವೆ ಚಾಕು, ಲಾಂಗ್, ವಿಕೆಟ್ ಹಿಡಿದು ನಡುರಾತ್ರಿ ವಾಹನಗಳನ್ನು ಅಡ್ಡಗಟ್ಟಿ ದರೋಡೆಗೆ ಹೊಂಚು ಹಾಕಿದ್ದ ಗ್ಯಾಂಗ್ ಅನ್ನು ಪೊಲೀಸರು ಬಂಧಿಸಿದ್ದಾರೆ.
ಲೋಕೇಶ್, ಆಕಾಶ್, ಸುಂದರ್, ಸುಜಿತ್, ದಿಲೀಪ್ ಬಂಧಿತರು. ರಸ್ತೆಯಲ್ಲಿ ಓಮ್ನಿ ಕಾರು ನಿಲ್ಲಿಸಿಕೊಂಡು ಮಾರಕಾಸ್ತ್ರ ಹಿಡಿದು ದರೋಡೆಗೆ ಹೊಂಚು ಹಾಕುತ್ತಿದ್ದರು. ಪೊಲೀಸರು ದಾಳಿ ನಡೆಸಿದಾಗ ಐವರು ಪರಾರಿಯಾಗಲು ಯತ್ನಿಸಿದ್ದರು.
ಆರೋಪಿಗಳು ಭದ್ರಾವತಿಯ ವಿವಿಧೆಡೆ ದನಗಳ್ಳತನ ಮಾಡಿದ್ದರು. ಅವುಗಳ ಮಾರಾಟದಿಂದ ಬಂದ ಹಣದಲ್ಲಿ ಮಜಾ ಮಾಡುತ್ತಿದ್ದರು. ಪೊಲೀಸರಿಗೆ ಅನುಮಾನ ಬಂದ ಹಿನ್ನೆಲೆ ದನಗಳ್ಳತನ ಬಿಟ್ಟು ದರೋಡೆಗೆ ಹೊಂಚು ಹಾಕಿದ್ದರು ಎನ್ನಲಾಗಿದೆ. ಭದ್ರಾವತಿ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.