ಜಿಲ್ಲೆ

ವಿದ್ಯಾರ್ಥಿನಿಗೆ ಚುಡಾಯಿಸಿದ ಐವರ ಬಂಧನ

ಮರಿದೇವ ಹೂಗಾರ

ಹುಬ್ಬಳ್ಳಿ: ಇಲ್ಲಿಯ ಶರಾವತಿ ನಗರದ ಬಳಿ ಶಾಲಾ ವಿದ್ಯಾರ್ಥಿನಿಗೆ ಚುಡಾಯಿಸಿದ ಇಬ್ಬರನ್ನು ಹಾಗೂ ಸಹಕರಿಸಿದ ಮೂವರನ್ನು ಹಳೇಹುಬ್ಬಳ್ಳಿ ಠಾಣೆ ಪೊಲೀಸರು ಬಂಧಿಸಿದ್ದು, ಸ್ಕೂಟಿ ಮತ್ತು ಐದು ಮೊಬೈಲ್ ಫೋನ್ ಶನಿವಾರ ವಶಪಡಿಸಿಕೊಂಡಿದ್ದಾರೆ.

ಎರಡು ದಿನಗಳ ಹಿಂದೆ ಶಾಲೆಯಿಂದ ಮನೆಗೆ ತೆರಳುವಾಗ ಬಾಲಕಿಯನ್ನು ಇಬ್ಬರು ಯುವಕರು ಸ್ಕೂಟಿಯಲ್ಲಿ ಹಿಂಬಾಲಿಸಿ ಚುಡಾಯಿಸಿದ್ದರು. ಈ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೆಯಾಗಿತ್ತು. ಬಾಲಕಿಯ ಪೋಷಕರು ಶುಕ್ರವಾರ ಪೋಕ್ಸೊ ಪ್ರಕರಣ ದಾಖಲಿಸಿದ್ದರು.

‘ಇನ್‌ಸ್ಪೆಕ್ಟರ್ ಸುರೇಶ ಯಳ್ಳೂರ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿ ಕಾರ್ಯಾಚರಣೆ ನಡೆಸಲಾಗಿತ್ತು. ಪ್ರಕರಣ ದಾಖಲಾದ ಎರಡು ಗಂಟೆಯೊಳಗೆ ಪ್ರಮುಖ ಆರೋಪಿಗಳಾದ ಅಯೋಧ್ಯಾನಗರ ಶುಭಂ ತಡಸ ಮತ್ತು ಮೆಹಬೂಬ ಹಿತ್ತಲಮನಿ ಅವರನ್ನು ಬಂಧಿಸಲಾಗಿದೆ. ಅವರಿಗೆ ಸಹಕರಿಸಿದ ಸಾಗರ ಸಾತಪುತೆ, ಶ್ರೀವತ್ಸವ ಬೆಂಡಿಗೇರಿ, ಸಚಿನ ನರೇಂದ್ರ ಅವರನ್ನೂ ಬಂಧಿಸಲಾಗಿದೆ ಎಂದು ಹು-ಧಾ ಪೊಲೀಸ್ ಆಯುಕ್ತ ಎನ್. ಶಶಿಕುಮಾರ ತಿಳಿಸಿದ್ದಾರೆ.

ಪಿಎಸ್‌ಐ ರುದ್ರಪ್ಪ ಗುಡದರಿ, ಎಎಸ್‌ಐ ಪಿ.ಬಿ. ಕಾಳೆ, ಸಿಬ್ಬಂದಿ ಫಕ್ಕಿರೇಶ ಗೊಬ್ಬರಗುಂಪಿ, ಅಭಯ ಕಟ್ನಳ್ಳಿ, ನಾಗರಾಜ ಕೆಂಚಣ್ಣನವರ, ಕೃಷ್ಣ ಮೋಟೆಬೆನ್ನೂರ, ಸಂತೋಷ ವಲ್ಯಾಪುರ, ರಮೇಶ ಹಲ್ಲೆ, ಕಲ್ಲನಗೌಡ ಗುರನಗೌಡ, ವಿಠಲ ಹೊಸಳ್ಳಿ, ಜಗದೇಶ ಗೌಂಡಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಪ್ರಮುಖ ಆರೋಪಿ ಶುಭಂ ತಡಸ ವಿರುದ್ಧ ಕಸಬಾಪೇಟೆ ಮತ್ತು ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಎರಡು ಪ್ರಕರಣ, ಸಾಗರ ಸಾತಪುತೆ ವಿರುದ್ಧ ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಎರಡು, ಸಚಿನ ನರೇಂದ್ರ ವಿರುದ್ಧ ಒಂದು ಪ್ರಕರಣ ದಾಖಲಾಗಿದೆ ಎಂಬುದು ವಿಚಾರಣೆ ವೇಳೆ ತಿಳಿದು ಬಂದಿದೆ ಎಂದು ಆಯುಕ್ತರು ಸುದ್ದಿಗಾರರಿಗೆ ಮಾಹಿತಿ ನೀಡಿದರು.