ಮಂಗಳೂರು: ದ.ಕ.ಜಿಲ್ಲೆಯಲ್ಲಿ ಸೆ.1ರಂದು ಮೀನುಗಾರಿಕಾ ಋತು ಆರಂಭಗೊಳ್ಳಲಿದೆ. ಮಂಗಳೂರು ಬಂದರ್‌ನಲ್ಲಿ ಮೀನುಗಾರಿಕಾ ದೋಣಿಗಳು ಕಡಲಿಗಿಳಿಯಲು ಸಜ್ಜಾಗಿವೆ. ಕರೊನಾ ಹಾಗು ಮೀನುಗಾರಿಕಾ ರಜೆಯ ಹಿನ್ನೆಲೆಯಲ್ಲಿ ಊರಿಗೆ ಮರಳಿದ ಮೀನುಗಾರರು ಸುದೀರ್ಘ ರಜೆಯ ಬಳಿಕ ಮರಳಿ ಬರಲಾರಂಭಿಸಿದ್ದಾರೆ. ಆಳ ಸಮುದ್ರ ಮೀನುಗಾರಿಕೆಯೂ ಆರಂಭಗೊಳ್ಳಲಿದೆ.
ಮಂಗಳೂರಿನ ಆಳ ಸಮುದ್ರ ಮೀನುಗಾರಿಕೆಯಲ್ಲಿ ಶೇ.80ರಷ್ಟು ಕಾರ್ಮಿಕರು (ಸುಮಾರು 12000 ಮಂದಿ) ಒಡಿಶಾ, ಜಾರ್ಖಂಡ್, ಉತ್ತರ ಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ, ಮಧ್ಯಪ್ರದೇಶ, ತಮಿಳುನಾಡು ಹಾಗೂ ಕೇರಳ ಜಿಲ್ಲೆಯವರು. ಪ್ರಸ್ತುತ ಕಾರ್ಮಿಕರು ಕರೊನಾ ಲಕ್ಷಣಗಳಿಲ್ಲದಿದ್ದಲ್ಲಿ ಹೊರ ರಾಜ್ಯಗಳಿಂದ ಆಗಮಿಸಿ ತಮ್ಮ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬಹುದು. ಈ ಪೈಕಿ ಶೇ.25 ಮಂದಿ ಮಂಗಳೂರು ತಲುಪಿದ್ದಾರೆ.
ಆಳ ಸಮುದ್ರ ಮೀನುಗಾರಿಕೆ ಆರಂಭಕ್ಕೆ ಸಂಬಂಧಿಸಿ ಮೀನುಗಾರರು ಸಿದ್ಧತೆ ಆರಂಭಿಸಿದ್ದಾರೆ. ಇರುವ ಕಾರ್ಮಿಕರನ್ನು ಉಪಯೋಗಿಸಿ ದೋಣಿಗಳಿಗೆ ಬಣ್ಣ ಬಳಿದು, ಇಂಜಿನ್ ದುರಸ್ತಿ ಸೇರಿದಂತೆ ನಿರ್ವಹಣೆ, ಬಲೆ ರಿಪೇರಿ ಮೊದಲಾದ ಕಾರ್ಯಗಳು ಅಂತಿಮ ಹಂತದಲ್ಲಿದೆ. ಐಸ್ ಪ್ಲಾಂಟ್‌ಗಳು ತೆರೆದುಕೊಂಡಿದ್ದು, ಮೊದಲ ದಿನ ಮೀನುಗಾರಿಕೆಗೆ ಹೋಗುವವರಿಗೆ ಬೇಕಾದಷ್ಟು ಐಸ್ ಸಿದ್ಧಗೊಳ್ಳುತ್ತಿದೆ. ಆರಂಭದ ದಿನಗಳಲ್ಲಿ ಕೆಲವು ದೋಣಿಗಳಷ್ಟೇ ಮೀನುಗಾರಿಕೆಗೆ ಹೋಗಬಹುದು. 10 ದಿನಗಳ ಬಳಿಕ ಮೀನಿನೊಂದಿಗೆ ಬಂದರ್‌ಗೆ ಮರಳುತ್ತಾರೆ ಎಂದು ಬಂದರ್‌ನ ಮೀನುಗಾರ ಮಜೀದ್ ತಿಳಿಸಿದ್ದಾರೆ.
ಕರೊನಾ ಕಾರಣ ಒಂದು ತಿಂಗಳು ವಿಳಂಬ
ಕರೊನಾ ಹಾವಳಿ ಕಾರಣ ಕಾರ್ಮಿಕರ ಕೊರತೆಯಿಂದ ಈ ಬಾರಿಯ ಆಳ ಸಮುದ್ರ ಮೀನುಗಾರಿಕೆ ಒಂದು ತಿಂಗಳು ವಿಳಂಬವಾಗಿ ಆರಂಭಗೊಳ್ಳುತ್ತಿದೆ. ಹೊರ ರಾಜ್ಯಗಳ ಪ್ರಯಾಣಿಕರಿಗೆ ಸರ್ಕಾರ ಹೇರಿದ್ದ ಪ್ರಯಾಣ ನಿರ್ಬಂಧ, 14 ದಿನಗಳ ಕ್ವಾರಂಟೈನ್ ಕೂಡ ತೆರವು ಮಾಡಲಾಗಿದೆ. ಸೇವಾ ಸಿಂಧು ಆ್ಯಪ್‌ನಲ್ಲೂ ನೋಂದಣಿ ಅಗತ್ಯವಿಲ್ಲ. ಹಾಗಾಗಿ ಹೊರ ರಾಜ್ಯದ ಮೀನುಗಾರರು ಮತ್ತೆ ಮಂಗಳೂರು ಕಡೆಗೆ ಪ್ರಯಾಣ ಬೆಳೆಸಿದ್ದಾರೆ.
ಮೀನು ದರ ಅಗ್ಗ ಸಾಧ್ಯತೆ
ದಕ್ಷಿಣ ಕನ್ನಡದಲ್ಲಿ ಆಳ ಸಮುದ್ರ ಮೀನುಗಾರಿಕೆ ನಿಷೇಧ ಬಳಿಕ ಲಾಕ್‌ಡೌನ್ ಸಂದರ್ಭ ತಮಿಳುನಾಡಿನಿಂದ ಮೀನು ಪೂರೈಕೆಯಾ ಗುತ್ತಿತ್ತು. ನಾಡ ದೋಣಿಗಳಿಗೆ ಮೀನು ಲಭ್ಯತೆ ಕಡಿಮೆ ಇದ್ದುದರಿಂದ ದರ ದುಪ್ಪಟ್ಟಾಗಿತ್ತು. ಕೆಲವು ದಿನಗಳಿಂದ ಮಲ್ಪೆ, ಕಾರವಾರ, ಭ ಟ್ಕಳ ಮೊದಲಾದ ಕಡೆಗಳಿಂದ ಮೀನುಗಳು ಜಿಲ್ಲೆಗೆ ಬರಲಾರಂಭಿಸಿವೆ. ಮಂಗಳೂರು ಬಂದರ್‌ಗೆ ಮೀನು ಬರಲಾರಂಭಿಸಿದ ಬಳಿಕ ರುಚಿಯಾದ, ತಾಜಾ ಮೀನು ಅಗ್ಗದ ದರದಲ್ಲಿ ಲಭ್ಯವಾಗಲಿದ್ದು, ಮೀನು ಪ್ರಿಯರು ಖುಷಿಯಾಗಿದ್ದಾರೆ. ಅದಕ್ಕೆ ಇನ್ನು 10 ದಿನ ಕಾಯಬೇಕು.
ಕರೊನಾ ನಿಯಮ ಸಡಿಲಗೊಂಡರೂ ಭಯ ಕಡಿಮೆಯಾಗಿಲ್ಲ. ಕೆಲ ಕಾರ್ಮಿಕರಷ್ಟೇ ಬಂದಿದ್ದಾರೆ. ಒಡಿಶಾದಿಂದ ಕಾರ್ಮಿಕರನ್ನು ಕರೆಸಲು ಬಸ್ ವ್ಯವಸ್ಥೆ ಮಾಡಿದ್ದೇವೆ. ಶೀಘ್ರದಲ್ಲೇ ಕಾರ್ಮಿಕರು ಮಂಗಳೂರಿಗೆ ಆಗಮಿಸುವ ನಿರೀಕ್ಷೆ ಇದೆ.
- ನವೀನ್ ಬಂಗೇರ, ಉಪಾಧ್ಯಕ್ಷರು, ಅಖಿಲ ಕರ್ನಾಟಕ ಪರ್ಸಿನ್ ಮೀನುಗಾರರ ಸಂಘ
ಸೆ.1ರಂದು ಆಳ ಸಮುದ್ರ ಮೀನುಗಾರಿಕೆ ಆರಂಭಗೊಳ್ಳಲಿದೆ. ಹೊರ ರಾಜ್ಯದ ಮೀನುಗಾರರಿಗೆ ಬರಲು ನಿರ್ಬಂಧ ಇಲ್ಲ. ಗಡಿಗಳು ತೆರವುಗೊಂಡಿವೆ. ಕ್ವಾರಂಟೈನ್ ಅವಶ್ಯಕತೆ ಇಲ್ಲ. ಕಾರ್ಮಿಕರು ಕೋವಿಡ್ ಲಕ್ಷಣಗಳಿದ್ದಲ್ಲಿ ತಪಾಸಣೆ ನಡೆಸಿ ಬರುವುದರಿಂದ ಮೀನುಗಾರಿಕೆ ನಿರಾತಂಕ.
- ನಿತಿನ್ ಕುಮಾರ್, ಅಧ್ಯಕ್ಷರು, ಟ್ರಾಲ್‌ಬೋಟ್ ಮೀನುಗಾರರ ಸಂಘ, ಮಂಗಳೂರು.
ಉಡುಪಿಯಲ್ಲಿ ಮೊದಲ ಸುತ್ತು ಮುಕ್ತಾಯ
ಉಡುಪಿ: ಸರ್ವಋತು ಬಂದರು ಮಲ್ಪೆಯಲ್ಲಿ ಆ.10ರಂದು ಮಲ್ಪೆಯಲ್ಲಿ ಯಾಂತ್ರಿಕೃತ ಮೀನುಗಾರಿಕೆ ಆರಂಭವಾಗಿದೆ. ಬಹುತೇಕ ಆಳ ಸಮುದ್ರ ಮೀನುಗಾರಿಕೆ ಬೋಟುಗಳು ಮೊದಲ ಸುತ್ತು ಮೀನುಗಾರಿಕೆ ಮುಗಿಸಿ ಮರಳಿ ಬಂದಿವೆ. ಆ.30ರಿಂದ ಪರ್ಸಿನ್ ಬೋಟುಗಳು ಮೀನುಗಾರಿಕೆಗಾಗಿ ಕಡಲಿಗೆ ಇಳಿಯಲಿವೆ. ಲಾಕ್‌ಡೌನ್ ಅವಧಿಯಲ್ಲಿ ಊರಿಗೆ ಹೋದ ಮೀನುಗಾರರ ಪೈಕಿ ಕೆಲವರಷ್ಟೇ ವಾಪಸ್ಸಾಗಿದ್ದಾರೆ. ಸೀಮಿತ ಸಂಖ್ಯೆಯ ಕಾರ್ಮಿಕರಿಂದಲೇ ಮೀನುಗಾರಿಕೆ ಮುಂದುವರಿದಿದೆ.