ಜಿಲ್ಲೆ

ಆಳ ಸಮುದ್ರ ಮೀನುಗಾರಿಕೆ ಆರಂಭ

Uttara Kannada - Subash Hegde
ಕಾರವಾರ: ಆರವತ್ತೊಂದು ದಿನಗಳ ಬಿಡುವಿನ ಬಳಿಕ ಆಳ ಸಮುದ್ರಕ್ಕೆ ತೆರಳಲು ದೋಣಿಗಳು ಸಜ್ಜಾಗಿವೆ. ಅರಬ್ಬಿ ಸಮುದ್ರದಲ್ಲಿ ಮೀನುಗಳ ಸಂತಾನೋತ್ಪತ್ತಿಯ ಸಮಯವಾಗಿದ್ದರಿಂದ ಜೂನ್ 1 ರಿಂದ ಜು.31 ರವರೆಗೆ 10 ಎಚ್‌ಪಿಗಿಂತ ಹೆಚ್ಚಿನ ಸಾಮರ್ಥ್ಯದ ಇಂಜಿನ್ ಬಳಸಿ ಆಳ ಸಮುದ್ರ ಮೀನುಗಾರಿಕೆ ನಡೆಸುವುದನ್ನು ನಿಷೇಽಸಲಾಗಿತ್ತು. ಇದರಿಂದ ಬೋಟ್‌ಗಳನ್ನು ಬಂದರಿನಲ್ಲಿ ಕಟ್ಟಿಡಲಾಗಿತ್ತು. ಬಂದರುಗಳು ವಹಿವಾಟಿಲ್ಲದೇ ಬಿಕೋ ಎನ್ನುತ್ತಿದ್ದವು. ಆಗಸ್ಟ್ 1ರಿಂದ ಆಳ ಸಮುದ್ರ ಮೀನುಗಾರಿಕೆಗೆ ಅವಕಾಶವಿದ್ದು, ಇದರಿಂದ ಬೋಟ್‌ಗಳನ್ನು ರಿಪೇರಿ ಮಾಡಿ, ಮೀನುಗಾರಿಕೆಗೆ ಬೇಕಾದ ಬಲೆ, ಬುಟ್ಟಿ ಮುಂತಾದ ಅಗತ್ಯ ವಸ್ತುಗಳನ್ನು ಭರ್ತಿ ಮಾಡಿಕೊಳ್ಳುವ ಕಾರ್ಯವನ್ನು ಮೀನುಗಾರರು ಕೈಗೊಂಡಿರುವುದು ಬುಧವಾರ ಕಂಡುಬಂತು. ಬಂದರುಗಳಲ್ಲಿ ಚುರುಕಿನ ಚಟುವಟಿಕೆ ಪ್ರಾರಂಭವಾಯಿತು. ಬೋಟ್‌ಗಳಿಗೆ ತೋರಣ ಕಟ್ಟಿ, ಹೂ ಮಾಲೆ ಹಾಕಿ ಈಗಾಗಲೇ ಪೂಜೆ ಮಾಡಿಕೊಂಡ ಮಾಲೀಕರು ಮೀನುಗಾರಿಕೆಗೆ ತೆರಳಲು ಸಿದ್ಧತೆ ಮಾಡಿಕೊಂಡರು. ಇದುವರೆಗೆ ಜಿಲ್ಲೆಯಲ್ಲಿ 110 ಬೋಟ್‌ಗಳು ಆಳ ಸಮುದ್ರ ಮೀನುಗಾರಿಕೆ ಡೀಸೆಲ್ ಪಾಸ್‌ಬುಕ್ ಪಡೆದುಕೊಂಡಿವೆ. ಮೊದಲ ಒಂದು ವಾರ ಶೆಟ್ಲಿ (ಫ್ರಾನ್ಸ್)ಮೀನುಗಾರಿಕೆ ನಡೆಯಲಿದ್ದು, ಉತ್ತಮ ಇಳುವರಿ ದೊರೆಯುವ ನಿರೀಕ್ಷೆಯಲ್ಲಿ ಮೀನುಗಾರರಿದ್ದಾರೆ. ಇನ್ನಷ್ಟು ವಿಳಂಬ: ಟ್ರಾಲರ್ ಬೋಟ್‌ಗಳು ತಕ್ಷಣ ಮೀನುಗಾರಿಕೆಗೆ ತೆರಳಲು ಸಿದ್ಧತೆ ಮಾಡಿಕೊಂಡಿವೆ. ವಾರಗಳ ಕಾಲ ಕಡಲಲ್ಲೇ ಇದ್ದು ಮೀನುಗಾರಿಕೆ ನಡೆಸುವ ಪರ್ಸೀನ್ ಬೋಟ್‌ಗಳು ನೀರಿಗೆ ಇಳಿಯಲು ಇನ್ನೂ ಕೆಲವು ದಿನ ವಿಳಂಬವಾಗಬಹುದು. ಅವುಗಳಲ್ಲಿ ಕಾರ್ಯ ನಿರ್ವಹಿಸುವ ಹೊರ ರಾಜ್ಯದ ಮೀನುಗಾರರು ಇನ್ನಷ್ಟೇ ಆಗಬಮಿಸಬೇಕಿದೆ ಎಂದು ಮೀನುಗಾರರ ಮುಖಂಡ ರಾಜೇಶ ಮಾಜಾಳಿಕರ್ ಮಾಹಿತಿ ನೀಡಿದ್ದಾರೆ. 400 ಟ್ರಾನ್ಸ್ಫಾಂಡರ್ ಅಳವಡಿಕೆ ಇಸ್ರೋ ಅಭಿವೃದ್ಧಿಪಡಿಸಿದ 2 ವೇ ಕಮ್ಯುನಿಕೇಶನ್ ಟ್ರಾನ್ಸ್ಫಾಂಡರನ್ನು ಕೇಂದ್ರ ಸರ್ಕಾರದ ಅನುದಾನದಲ್ಲಿ ಬೋಟ್‌ಗಳಿಗೆ ಉಚಿತವಾಗಿ ಅಳವಡಿಸುವ ಕಾರ್ಯ ನಡೆದಿದೆ. ಇದುವರೆಗೆ 400 ಬೋಟ್‌ಗಳಿಗೆ ಈ ಸಾಧನ ಅಳವಡಿಸಲಾಗಿದೆ. ಅಪಾಯದ ಸಂದರ್ಭದಲ್ಲಿ ಎಮರ್ಜೆನ್ಸಿ ಬಟನ್ ಒತ್ತಿದರೆ, ಈ ಟ್ರಾನ್ಸ್ಫಾಂಡರ್‌ಗಳ ಮೂಲಕ ಸಮೀಪದ ಮತ್ತೊಂದು ದೋಣಿ ಅಥವಾ ರಕ್ಷಣಾ ಇಲಾಖೆಗೆ ತಲುಪಬಹುದು. ಅಲ್ಲದೇ ಕೋಸ್ಟ್ ಗಾರ್ಡ್, ಕರಾವಳಿ ಕಾವಲುಪಡೆ ಅಥವಾ ಮೀನುಗಾರಿಕೆ ಇಲಾಖೆಗಳು ಈ ವ್ಯವಸ್ಥೆಯ ಮೂಲಕ ಬೋಟ್‌ಗಳು ಯಾವ ಸ್ಥಳದಲ್ಲಿವೆ ಎಂಬುದನ್ನು ಗುರುತಿಸಿ, ರಕ್ಷಣಾ ಕಾರ್ಯದಲ್ಲಿ ತೊಡಗಬಹುದು. ಸಮುದ್ರದಲ್ಲಿ ಏಳುವ ಚಂಡ ಮಾರುತಗಳ ಸಂದರ್ಭದಲ್ಲಿ ಬೋಟ್‌ಗಳಿಗೆ ಹಾನಿಯುಂಟಾಗಿ ನಾಪತ್ತೆಯಾಗುವುದನ್ನು ತಪ್ಪಿಸಲು ಈ ವ್ಯವಸ್ಥೆ ಅನುಕೂಲವಾಗಲಿದೆ. ಇನ್ನಷ್ಟು ಬೋಟ್‌ಗಳು ಹಾಗೂ ಔಟ್‌ಬೋರ್ಡ್ ಇಂಜಿನ್ ಹೊಂದಿರುವ ಸಣ್ಣ ಬೋಟ್‌ಗಳಿಗೂ ಮುಂದಿನ ದಿನದಲ್ಲಿ ಅಳವಡಿಸಲಾಗುವುದು ಎಂದು ಮೀನುಗಾರಿಕೆ ಇಲಾಖೆ ಅಽಕಾರಿಗಳು ತಿಳಿಸಿದ್ದಾರೆ. ಮೀನುಗಾರರ ಅನುಕೂಲಕ್ಕಾಗಿ ಇಸ್ರೋದಿಂದ `ನಭ ಮಿತ್ರ' ಎಂಬ ಆ್ಯಪ್ ಅಭಿವೃದ್ಧಿಪಡಿಸಲಾಗಿದೆ. 2 ವೇ ಕಮ್ಯುನಿಕೇಶನ್ ಟ್ರಾನ್ಸ್ಫಾಂಡರ್ ಜತೆ ಈ ಆ್ಯಪ್ ಸಂಪರ್ಕ ಹೊಂದಿರುತ್ತದೆ. ಎಲ್ಲ ಮೀನುಗಾರರು ಅದನ್ನು ಅಳವಡಿಸಿಕೊಳ್ಳಬೇಕು. ಆ್ಯಪ್ ಬಳಕೆಯ ಬಗ್ಗೆ ನಾವು ಮೀನುಗಾರರಿಗೆ ತರಬೇತಿ ನೀಡುತ್ತೇವೆ. ಈ ಆ್ಯಪ್ ಮೂಲಕ ಸಮುದ್ರದ ವಾತಾವರಣದ ವಿವರ ತಿಳಿಯಬಹುದು. ಬೋಟ್ ಮಾಲೀಕರು ತಮ್ಮ ಬೋಟ್ ಸಮುದ್ರದಲ್ಲಿ ಎಲ್ಲಿದೆ. ಎಷ್ಟು ಮೀನು ಹಿಡಿಯಲಾಗಿದೆ ಮುಂತಾದ ಮಾಹಿತಿಯನ್ನು ದಡದಲ್ಲಿ ಇದ್ದುಕೊಂಡೇ ತಿಳಿಯಬಹುದು. ರವೀಂದ್ರ ತಳೇಕರ್ ಮೀನುಗಾರಿಕೆ ಇಲಾಖೆ ಜಂಟಿ ನಿರ್ದೇಶಕ