ಮೂಲ್ಕಿ: ಮೀನುಗಾರಿಕೆ ಸಾಹಸಿ ವೃತ್ತಿಯಾಗಿದ್ದು, ಸರ್ವ ಋತುವಿನಲ್ಲೂ ಬೀಸು ಬಲೆ ಮೀನುಗಾರಿಕೆ ಮೀನುಗಾರರಿಗೆ ವರದಾನವಾಗಿದೆ. ಅನುಭವ ಮತ್ತು ನೈಪುಣ್ಯ ಈ ಮೀನುಗಾರಿಕೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಬಲೆಯನ್ನು ವಿಶೇಷವಾಗಿ ನಿರ್ಮಿಸಿ ಅದಕ್ಕೆ ಸೂಕ್ತ ಸೀಸದ ಭಾರ ಅಳವಡಿಸಿ ತುದಿಗೆ ಹಗ್ಗ ಕಟ್ಟಿ ಬಳಿಕ ಸುತ್ತಿ ಬೀಸಿ ಎಸೆಯುವ ಮೂಲಕ ನಡೆಸುವ ಮೀನುಗಾರಿಕೆ ಇದಾಗಿದೆ. ಬಿರುಗಾಳಿ ಹಾಗೂ ಸಮುದ್ರ ಪ್ರಕ್ಷುಬ್ಧ ಸಂದರ್ಭ ಮೀನುಗಾರಿಕೆ ಅಸಾಧ್ಯವಾದ ಕಾಲದಲ್ಲೂ ಬೀಸು ಬಲೆ ಮೀನುಗಾರಿಕೆ ಸಾಧ್ಯ.
ಇದು ನದಿ ದಡ ಅಥವಾ ಸಣ್ಣ ದೋಣಿ(ಪಾತಿ)ಯಲ್ಲಿಯೂ ನಡೆಸಲು ಸಾಧ್ಯ. ಸಮುದ್ರ ಪ್ರಕ್ಷುಬ್ಧಗೊಂಡ ಸಂದರ್ಭ ಮೀನುಗಳು ನದಿ ಪ್ರವೇಶಿಸುತ್ತದೆ. ಸಮುದ್ರ ಭರತ ಸಂದರ್ಭದಲ್ಲಿಯೂ ನೀರಿನ ಒತ್ತಡಕ್ಕೆ ಸಿಲುಕಿ ಮೀನುಗಳು ನದಿಯತ್ತ ಬರುತ್ತದೆ. ಈ ಸಂದರ್ಭ ಬೀಸು ಬಲೆ ಮೂಲಕ ಮೀನುಗಾರಿಕೆ ಸಾಧ್ಯ.
ಉತ್ತಮ ಆದಾಯ: ಉತ್ತಮ ಅನುಭವ ಹಾಗೂ ನೈಪುಣ್ಯ ಇದ್ದಲ್ಲಿ ಇದರಲ್ಲಿ ದಿನಕ್ಕೆ 5 ಸಾವಿರ ರೂ.ಗೂ ಅಧಿಕ ವರಮಾನ ಸಾಧ್ಯ. ಕಡಿಮೆ ಎಂದರೂ ಒಂದು ಸಾವಿರಕ್ಕೆ ಕೊರತೆ ಬಾರದು ಎನ್ನುವುದು ಬೀಸುಬಲೆ ಮೀನುಗಾರರ ಮಾತು. ಬೀಸುಬಲೆಯನ್ನು ಹಿಂದೆ ಅನುಭವಿ ಮೀನುಗಾರರು ನೂಲಿನಿಂದ ನೇಯ್ದು ನಿರ್ಮಿಸುತ್ತಿದ್ದರು. ಈಗ ಯಾಂತ್ರೀಕೃತವಾಗಿ ಲಭ್ಯವಿರುವ ನೈಲಾನ್ ಬಲೆಯನ್ನು ಹೊಲಿದು ಕಟ್ಟಿ ಬಲೆ ನಿರ್ಮಿಸಲಾಗುತ್ತದೆ. ಬೀಸುವ ವ್ಯಕ್ತಿಯ ಶಕ್ತಿ ಮತ್ತು ನೈಪುಣ್ಯದ ಆಧಾರದ ಮೇಲೆ ಬಲೆ ಎಷ್ಟು ಆಳಕ್ಕಿಳಿಯಬೇಕು ಎಂದು ಪೂರ್ವ ನಿರ್ಧರಿಸಿ ಬಲೆಗೆ ಭಾರಕ್ಕಾಗಿ ಸೀಸ ಕಟ್ಟಲಾಗುತ್ತದೆ. ಅನನುಭವಿಗಳು ಬಲೆ ಬೀಸಲು ಹೋಗಿ ತಾವೇ ಅಪಾಯಕ್ಕೆ ಸಿಲುಕಿಕೊಂಡ ನಿದರ್ಶನವಿದೆ. ಹಗ್ಗ ಕೈ ತಪ್ಪಿದರೆ ಬಲೆಯೂ ನೀರು ಪಾಲಾಗುವ ಸಂಭವವಿದೆ ಎಂದು ಮೀನುಗಾರರು ನೆನಪಿಸಿಕೊಳ್ಳುತ್ತಾರೆ.
ಗಾಳ ಮೀನುಗಾರಿಕೆ: ನದಿ ದಡದಲ್ಲಿ ಅಥವಾ ಗಾಳದ ಮೂಲಕವೂ ಮೀನುಗಾರಿಕೆ ಸಾಧ್ಯವಿದ್ದು, ಇದರಲ್ಲಿ ಬೀಸು ಬಲೆಯಷ್ಟು ಶೀಘ್ರ ಹಾಗೂ ದೊಡ್ಡ ಪ್ರಮಾಣದಲ್ಲಿ ಮೀನುಗಾರಿಕೆ ಅಸಾಧ್ಯ.
ಲಭ್ಯ ಮೀನುಗಳು: ಕೇವಾಜಿ, ಏರಿ, ಕಾಣೆ ಪೈಯೆ ಲಭಿಸಿದಲ್ಲಿ ಉತ್ತಮ ಆದಾಯ ಇನ್ನುಳಿದಂತೆ ಏಡಿ, ಕಡ್ಡಾಯಿ, ಚೋಡಿ, ತೇಡೆ, ನಂಗ್, ಉಚ್ಚೇಯಿ, ಬಲ್ಚಟ್, ಮಾಲ ಮಧ್ಯಮ ಆದಾಯ ನೀಡುತ್ತದೆ. ನದಿ ಅಥವಾ ಸಮುದ್ರ ಬದಿಯಲ್ಲಿ ನಡೆಸುವ ಮೀನುಗಾರಿಕೆಯಿಂದ ಹಲವು ಕುಟುಂಬಗಳು ಸಮೃದ್ಧಗೊಂಡಿವೆ.
ಅನುಭವಿಗಳಿಗೆ ಬೀಸುಬಲೆ ಉತ್ತಮ ಆದಾಯ ತರುತ್ತಿದೆ. ಸರ್ವ ಋತುಗಳಲ್ಲಿ ಬೀಸುಬಲೆಯಿಂದ ಮೀನುಗಾರಿಕೆ ಸಾಧ್ಯ.
ಚಂದ್ರ ಕುಮಾರ್, ಮೀನುಗಾರ, ಹಳೆಯಂಗಡಿ ಪಂಚಾಯಿತಿ ಸದಸ್ಯ