ಜಿಲ್ಲೆ

ಮೀನುಗಾರರ ಸಂಕಷ್ಟ ಪರಿಹಾರ

ಇಂದಿರಾ ಎನ್ ಕೆ

ಗಂಗೊಳ್ಳಿ: ಇತ್ತೀಚೆಗೆ ಮೀನುಗಾರಿಕೆ ವೇಳೆ ನಾಪತ್ತೆಯಾಗಿರುವ ಗಂಗೊಳ್ಳಿ ಗ್ರಾಮದ ನಾರಾಯಣ ಮೊಗವೀರ ಕುಟುಂಬಕ್ಕೆ ಮೀನುಗಾರ ಸಂಕಷ್ಟ ಪರಿಹಾರ ನಿಯಮದಡಿ ಪರಿಹಾರ ಒದಗಿಸಬೇಕು. ಯಜಮಾನನನ್ನು ಕಳೆದುಕೊಂಡ ಆ ಕುಟುಂಬದ ನೋವನ್ನು ಅಧಿಕಾರಿಗಳು ಅರ್ಥ ಮಾಡಿಕೊಳ್ಳಬೇಕು ಎಂದು ಶಾಸಕ ಗುರುರಾಜ್ ಗಂಟಿಹೊಳೆ ಆಗ್ರಹಿಸಿದರು.

ಜಿಪಂನಲ್ಲಿ ನಡೆದ ಕ್ಷೇತ್ರದ ಮೀನುಗಾರಿಕೆ ಹಾಗೂ ಬಂದರು ಯೋಜನೆಗಳ ಬಗೆಗಿನ ಚರ್ಚೆ ವೇಳೆ ಶಾಸಕ ಗುರುರಾಜ್ ಗಂಟಿಹೊಳೆ ನಾಪತ್ತೆಯಾದ ಮೀನುಗಾರನನ್ನು ಹುಡುಕುವಲ್ಲಿ ಜಿಲ್ಲಾಡಳಿತ ನಿರ್ಲಕ್ಷೃದ ವಿರುದ್ಧ ಆಕ್ರೋಶ ಹೊರಹಾಕಿದರು.

ಉಡುಪಿ ಜಿಪಂನಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಮೀನುಗಾರಿಕೆ ಇಲಾಖೆ ಅಧಿಕಾರಿಗಳೊಂದಿಗೆ ಕ್ಷೇತ್ರದ ಮೀನುಗಾರಿಕೆ ಯೋಜನೆ, ಮೀನುಗಾರರ ಸಮಸ್ಯೆ ಬಗ್ಗೆ ಚರ್ಚಿಸಿದ ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ, ಜ.2ರಂದು ಪರ್ಸಿನ್ ಬೋಟ್‌ನಲ್ಲಿ ಮೀನುಗಾರಿಕೆ ವೇಳೆ ಸಮುದ್ರದಲ್ಲಿ ಕಾಲು ಜಾರಿ ಬಿದ್ದು ನಾಪತ್ತೆಯಾಗಿರುವ ಬಡ ಮೀನುಗಾರ ನಾರಾಯಣ ಮೊಗವೀರ ಅವರ ಸುಳಿವು ಸಿಗದೇ ಇರುವುದು ಅತ್ಯಂತ ದುಃಖದಾಯಕ ಸಂಗತಿ. ನಾಪತ್ತೆಯಾಗಿರುವವರನ್ನು ಹುಡುಕಲು ಜಿಲ್ಲಾಡಳಿತ, ಸಂಬಂಧಿಸಿದ ಇಲಾಖೆಗೆ ಮನವಿ ಮಾಡಲಾಗಿದೆ. ಈವರೆಗೂ ಮೀನುಗಾರರನ್ನು ಹುಡುಕಲು ಸಾಧ್ಯವಾಗದಿರುವುದು, ಅಗತ್ಯ ಮುತುವರ್ಜಿ ವಹಿಸದೇ ಇರುವುದು ಖಂಡನೀಯ. ಬಡ ಮೀನುಗಾರರ ನೋವಿಗೆ ಸ್ಪಂದಿಸದ ಜಿಲ್ಲಾಡಳಿತ ಈ ಬಗ್ಗೆ ನಿರ್ಲಕ್ಷೃ ತೋರಿದೆ ಎಂದರು.