ಗಂಗೊಳ್ಳಿ: ಮತ್ಸೃ ಸಮೃದ್ಧಿ ಉಂಟಾಗಲಿ, ಮೀನುಗಾರಿಕೆಗೆ ತೆರಳಿದಾಗ ಯಾವುದೇ ಅಡ್ಡಿ ಆತಂಕಗಳು ಎದುರಾಗದಿರಲಿ, ಸುರಕ್ಷಿತ ಹಾಗೂ ಉತ್ತಮ ಮೀನುಗಾರಿಕಾ ಋತುವಾಗಿರಲಿ ಎಂದು ಪ್ರಾರ್ಥಿಸಿ ಗಂಗೊಳ್ಳಿಯಲ್ಲಿ ಮೀನುಗಾರರು ಬುಧವಾರ ಸಮುದ್ರಪೂಜೆ ನೆರವೇರಿಸಿದರು.
ಗಂಗೊಳ್ಳಿಯ ಅರ್ಚಕ ವಿಠ್ಠಲ್‌ದಾಸ್ ಭಟ್ ಹಾಗೂ ಅಜಿತ್ ಭಟ್ ನೇತೃತ್ವದಲ್ಲಿ ಸಮುದ್ರ ಪೂಜೆಯ ಧಾರ್ಮಿಕ ವಿಧಿಗಳು ನೆರವೇರಿದವು. ಬಳಿಕ ಪರ್ಸಿನ್ ಬೋಟ್, ತ್ರಿಸೆವೆಂಟಿ ಬೋಟ್ ಹಾಗೂ ಟ್ರಾಲರ್ ಬೋಟ್‌ಗಳ ಸಂಘದ ಸದಸ್ಯರು ಸಮುದ್ರರಾಜನಿಗೆ ಹಾಲು, ಸೀಯಾಳ, ಫಲಪುಷ್ಪವನ್ನು ಅರ್ಪಿಸಿದರು.
ಪರ್ಸಿನ್ ಬೋಟುಗಳ ಮೀನುಗಾರರ ಸಂಘದ ಅಧ್ಯಕ್ಷ ಲಕ್ಷ್ಮೀನಾರಾಯಣ ಮಡಿವಾಳ, ತ್ರಿಸೆವೆಂಟಿ ಬೋಟುಗಳ ಮೀನುಗಾರರ ಸಂಘದ ಅಧ್ಯಕ್ಷ ಸೌಪರ್ಣಿಕಾ ಬಸವ ಖಾರ್ವಿ, ಟ್ರಾಲರ್ ಬೋಟುಗಳ ಮೀನುಗಾರರ ಸಂಘದ ಅಧ್ಯಕ್ಷ ಗಣೇಶ್ ಖಾರ್ವಿ, ಪ್ರಮುಖರಾದ ಪ್ರಭಾಕರ ಎಚ್.ಕುಂದರ್, ಸುಬ್ರಹ್ಮಣ್ಯ ಖಾರ್ವಿ, ರಾಘವೇಂದ್ರ ಗಂಗೊಳ್ಳಿ, ಸರ್ವಮಂಗಲ ಚಂದ್ರ ಖಾರ್ವಿ, ಬೋಟುಗಳ ಮಾಲೀಕರು, 3 ಸಂಘಗಳ ಸದಸ್ಯರು, ಮೀನುಗಾರರು ಉಪಸ್ಥಿತರಿದ್ದರು.
ಮಳೆಗಾಲದ ಎರಡು ತಿಂಗಳ ಮೀನುಗಾರಿಕಾ ನಿರ್ಬಂಧ ಜು.31ಕ್ಕೆ ಮುಗಿದಿದ್ದು, ಟ್ರಾಲರ್ ಹಾಗೂ ತ್ರಿಸೆವೆಂಟಿ ಬೋಟುಗಳು ಆ.8ಕ್ಕೆ ಕಡಲಿಗೆ ಇಳಿದರೆ, 11ರಂದು ಪರ್ಸಿನ್ ಬೋಟುಗಳು ಮೀನುಗಾರಿಕೆ ಆರಂಭಿಸಲಿವೆ.