ಉಡುಪಿ: ಮಹಾರಾಷ್ಟ್ರ ಕರಾವಳಿಯ ಸಮುದ್ರದಲ್ಲಿ ಮುಳುಗುತ್ತಿದ್ದ ಮೀನುಗಾರಿಕಾ ಬೋಟ್‌ನಲ್ಲಿದ್ದ ಉಡುಪಿಯ ಏಳು ಮೀನುಗಾರರನ್ನು, ಅತ್ಯಾಧುನಿಕ ಸಂವಹನ ತಂತ್ರಜ್ಞಾನದ ನೆರವಿನಲ್ಲಿ ಇತ್ತೀಚೆಗೆ ರಕ್ಷಿಸಲಾಗಿದೆ.
ಮಲ್ಪೆಯ ತಾರಾನಾಥ್ ಕುಂದರ್ ಮಾಲೀಕತ್ವದ ಮಥುರಾ ಬೋಟ್‌ನಲ್ಲಿ ವಿನೋದ್ ಹರಿಕಾಂತ್, ಮಹೇಶ್, ಲೋಕೇಶ್, ಶೇಖರ್, ಗಂಗಾಧರ್ ಮೊಗೇರ, ನಾಗಪ್ಪ ನಾರಾಯಣ್ ಹರಿಕಾಂತ್ ಮತ್ತು ಅನಿಲ್ ಗತಬೀರ ಹರಿಕಾಂತ್ ಮೀನುಗಾರಿಕೆಗೆಂದು ಆಳಸಮುದ್ರಕ್ಕೆ ತೆರಳಿದ್ದರು. ನ.26ರಂದು ಅವರ ಬೋಟ್ ಮಹಾರಾಷ್ಟ್ರ ಕರಾವಳಿ ಪ್ರದೇಶದಲ್ಲಿ ಅಪಾಯಕ್ಕೆ ಸಿಲುಕಿತ್ತು. ಸಹಾಯಕ್ಕಾಗಿ ಮೊರೆಯಿಡುತ್ತಿದ್ದ ಮೀನುಗಾರರನ್ನು ಗಮನಿಸಿದ ಇನ್ನೊಂದು ಬೋಟ್‌ನಲ್ಲಿದ್ದ ಮಹೂರ್ ಎಂಬುವರು ತಕ್ಷಣ ಕಾರ್ಯಾಚರಣೆಗೆ ಇಳಿದು ಬಿಎಸ್‌ಎನ್‌ಎಲ್-ಸ್ಕೈಲೊ 2-ವೇ ಸಂವಹನ ತಂತ್ರಜ್ಞಾನ ಮೂಲಕ ಕರಾವಳಿ ರಕ್ಷಣಾ ಪಡೆ ಹಾಗೂ ಬೋಟ್ ಮಾಲೀಕರನ್ನು ಸಂಪರ್ಕಿಸಿದ್ದರು. ರಕ್ಷಣಾ ಪಡೆ ಸಿಬ್ಬಂದಿ ದ್ವಿಮುಖ ಸಂವಹನ ವ್ಯವಸ್ಥೆ ಬಳಸಿ ನಿಖರ ಸ್ಥಳ ಪತ್ತೆ ಹಚ್ಚಿ ಮೀನುಗಾರರನ್ನು ರಕ್ಷಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಮಥುರಾ ಬೋಟ್ ಮಾಲೀಕ ತಾರಾನಾಥ ಕುಂದರ್, ಏಳು ಮೀನುಗಾರರ ಸುರಕ್ಷಿತ ಮರಳುವಿಕೆ ನೆಮ್ಮದಿ ನೀಡಿದೆ. ಮುಳುಗುತ್ತಿದ್ದ ಬೋಟ್‌ನ ಪಕ್ಕದಲ್ಲಿದ್ದ ಇನ್ನೊಂದು ದೋಣಿ ಆಧುನಿಕ ಸಂವಹನಗಳನ್ನು ಹೊಂದಿದ್ದರಿಂದ ಮೀನುಗಾರರ ಕಿರುಚಾಟ ಕೇಳಿ ಪ್ರಾಣ ರಕ್ಷಣೆ ಸಾಧ್ಯವಾಗಿದೆ. ಇಂತಹ ಆಧುನಿಕ ಸಂವಹನ ಸಾಧನಗಳು ಶೀಘ್ರದಲ್ಲೇ ಎಲ್ಲ ಬೋಟುಗಳಿಗೆ ಲಭ್ಯವಾಗಬೇಕು ಎಂದು ಆಗ್ರಹಿಸಿದರು.
ಬೋಟ್‌ಗಳಲ್ಲಿ ಉಪಗ್ರಹ ಆಧಾರಿತ ನೇವಿಗೇಶನ್ ವ್ಯವಸ್ಥೆ ಇದ್ದರೆ ಸಮುದ್ರದಲ್ಲಿರುವ ಮೀನುಗಾರರ ಮೊಬೈಲ್ನೊಂದಿಗೆ ಅದು ಜೋಡಿಸಲ್ಪಟ್ಟು ಅಪಾಯದ ಸಂದರ್ಭ ಸಮಯೋಚಿತ ಎಚ್ಚರಿಕೆಯ ಸಂದೇಶಗಳನ್ನು ನೀಡುತ್ತದೆ. ಇಂತಹ ತಂತ್ರಜ್ಞಾನದಿಂದ ಮೀನು ಲಭ್ಯತೆಯ ಮುನ್ಸೂಚನೆಗಳನ್ನೂ ಪಡೆಯಬಹುದು.
ಗಣೇಶ್ ಕೆ., ಮೀನುಗಾರಿಕಾ ಇಲಾಖೆ ಅಧಿಕಾರಿ