ಶಾಖ ನಿರೋಧಕ ಪೆಟ್ಟಿಗೆಗಳನ್ನು ಶಾಸಕ ವೇದವ್ಯಾಸ ಕಾಮತ್ ಅವರು ಸ್ಟೇಟ್‌ಬ್ಯಾಂಕ್ ಮೀನು ಮಾರುಕಟ್ಟೆಯಲ್ಲಿ ಸಾಂಕೇತಿಕವಾಗಿ ವಿತರಿಸಿದರು.  
ಜಿಲ್ಲೆ

ಮೀನುಗಾರರಿಗೆ ಸರ್ಕಾರದಿಂದ ವಿವಿಧ ಸೌಲಭ್ಯ -ಶಾಸಕ ವೇದವ್ಯಾಸ ಕಾಮತ್ ಮಾಹಿತಿ

reportermng

ಮಂಗಳೂರು : ರಾಜ್ಯ ವಲಯ ಯೋಜನೆಯಡಿ ಮೀನುಗಾರ ಮಹಿಳೆಯರಿಗೆ ರಾಜ್ಯ ಸರ್ಕಾರ ಉಚಿತವಾಗಿ ನೀಡುವ ಶಾಖ ನಿರೋಧಕ ಪೆಟ್ಟಿಗೆಗಳನ್ನು ಶಾಸಕ ವೇದವ್ಯಾಸ ಕಾಮತ್ ಅವರು ಸ್ಟೇಟ್‌ಬ್ಯಾಂಕ್ ಮೀನು ಮಾರುಕಟ್ಟೆಯಲ್ಲಿ ಸಾಂಕೇತಿಕವಾಗಿ ವಿತರಿಸಿದರು.

ಈ ಸಂದರ್ಭದಲ್ಲಿ ಶಾಸಕರು ಮಾತನಾಡಿ ‘ಕೇಂದ್ರ ಹಾಗೂ ರಾಜ್ಯ ಸರ್ಕಾರ ಮೀನುಗಾರರ ಹಿತದೃಷ್ಟಿಯಿಂದ ವಿವಿಧ ಯೋಜನೆಗಳನ್ನು ಜಾರಿಗೆ ತಂದಿದೆ. ಕೇಂದ್ರ ಸರ್ಕಾರ ಮತ್ಸೃಸಂಪದ ಯೋಜನೆಯಡಿ ಆಳ ಸಮುದ್ರ ಮೀನುಗಾರಿಕೆ ನಡೆಸುವವರಿಗೆ ಬೋಟ್, ಇನ್ಸುಲೇಟೆಡ್ ವಾಹನಗಳು ಸಹಿತ ವಿವಿಧ ಸೌಲಭ್ಯ ಕಲ್ಪಿಸಿದೆ. ನಗರದ ಮೀನು ಮಾರುಕಟ್ಟೆಯ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ವಿಶೇಷ ಚಿಂತನೆ ನಡೆಸಲಾಗಿದ್ದು, ಸ್ಥಳೀಯ ಮೀನುಗಾರರೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.

ರಾಜ್ಯದ ಬಿಜೆಪಿ ಸರ್ಕಾರ ನಾಡದೋಣಿಗಳಿಗೆ ಸೀಮೆ ಎಣ್ಣೆ, ನದಿಯಲ್ಲಿ ಮೀನುಗಾರಿಕೆ ಮಾಡುವವರಿಗೆ ಬಲೆ, ಸಬ್ಸಿಡಿ ಡೀಸೆಲ್, ಮೀನುಗಾರ ಮಕ್ಕಳಿಗೆ ವಿದ್ಯಾನಿಧಿ ಯೋಜನೆಯಡಿ ಸ್ಕಾಲರ್‌ಶಿಪ್ ನೀಡುವ ಮೂಲಕ ಆಸರೆಯಾಗಿದೆ. ಸದ್ಯ ರಾಜ್ಯ ವಲಯ ಯೋಜನೆಯಡಿ ನಗರದಲ್ಲಿ 160 ಮೀನು ಮಾರಾಟ ಮಹಿಳೆಯರಿಗೆ ಶಾಖ ನಿರೋಧಕ ಪೆಟ್ಟಿಗೆಗಳನ್ನು ಒದಗಿಸಲಾಗಿದೆ ಎಂದು ಅವರು ತಿಳಿಸಿದರು.