ಜಿಲ್ಲೆ

ಮೀನುಗಾರಿಕೆ ಅಭಿವೃದ್ಧಿಗೆ ತಾಂತ್ರಿಕ ತರಬೇತಿ ಪೂರಕ: ಚೇತನ್ ಬೆಂಗ್ರೆ ಅಭಿಪ್ರಾಯ

Mangaluru - Prakash MC Manjeshwar

ಮಂಗಳೂರು: ಮೀನುಗಾರಿಕೆ ಚಟುವಟಿಕೆಗಳಲ್ಲಿ ತಾಂತ್ರಿಕ ತರಬೇತಿ ಅತ್ಯಂತ ಮುಖ್ಯ. ಜಿಲ್ಲೆಯ ಬೋಟ್ ಮಾಲೀಕರು ಮತ್ತು ಮೀನುಗಾರರು ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಟ್ರಾಲ್ ಬೋಟ್ ಅಸೋಸಿಯೇಷನ್ ಅಧ್ಯಕ್ಷ ಚೇತನ್ ಬೆಂಗ್ರೆ ಅವರು ಕರೆ ನೀಡಿದರು.
ನಗರದ ಮೀನುಗಾರಿಕೆ ಕಾಲೇಜಿನಲ್ಲಿ ಮೀನುಗಾರಿಕೆ ಕಾಲೇಜಿನ ತಾಂತ್ರಿಕ ಮತ್ತು ತಂತ್ರಜ್ಞಾನ ವಿಭಾಗ ಹಾಗೂ ಹೈದರಾಬಾದ್ ನ ರಾಷ್ಟ್ರೀಯ ಮೀನುಗಾರಿಕೆ ಅಭಿವೃದ್ಧಿ ಮಂಡಳಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ 3 ದಿನಗಳ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತಾನಾಡಿದರು.
ಜಿಲ್ಲೆಯ ಮೀನುಗಾರರ ಹಿತಾಸಕ್ತಿಗನುಗುಣವಾಗಿ ನಗರದಲ್ಲಿರುವ ಮೀನುಗಾರಿಕಾ ಕಾಲೇಜು ಅತ್ಯುತ್ತಮ ಸಂಶೋಧನೆ ಮತ್ತು ತರಬೇತಿ ಕಾರ್ಯಕ್ರಮಗಳನ್ನು ಸಂಯೋಜಿಸುತ್ತಿದೆ. ಇದನ್ನು ಮೀನುಗಾರರ ಸಮುದಾಯ ಮತ್ತು ದೋಣಿ ಮಾಲೀಕರು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು ಎಂದು ಪರ್ಸಿನ್ ಬೋಟ್ ಅಸೋಸಿಯೇಷನ್ ಅಧ್ಯಕ್ಷ ಶಶಿಕುಮಾರ್ ಬೆಂಗ್ರೆ ಹೇಳಿದರು.
ಈ ಕಾಲೇಜಿಗೆ 54 ವರ್ಷವಾಗಿರುವದರಿಂದ ಸರ್ಕಾರ ಮೀನುಗಾರಿಕೆ ಕಾಲೇಜನ್ನು ವಿಶ್ವವಿದ್ಯಾಲಯವನ್ನಾಗಿ ಪರಿಗಣಿಸಬೇಕು ಎಂದು ಅವರು ಆಗ್ರಹಿಸಿದರು.
ತರಬೇತಿ ಸಂಯೋಜಕ ಡಾ.ಜಯಾ ನಾಯ್ಕ, ಮುಖ್ಯ ಅತಿಥಿ ರಾಜ್ ಕುಮಾರ್ ನಾಯ್ಕ, ಪ್ರೊಫೆಸರ್ ಮತ್ತು ಪ್ರಭಾರ ಡೀನ್ ಡಾ. ಎಸ್. ವರದರಾಜು ಮಾತನಾಡಿದರು. ಸಹ ಪ್ರಾಧ್ಯಾಪಕ ಶಶಿಧರ ಬಾದಾಮಿ ವಂದಿಸಿದರು. ಪ್ರಾಪ್ತಿ ತರಬೇತಿ ನಡೆಸಿಕೊಟ್ಟರು.