- ಬೆಟ್ಟದಪುರ: ಮಳೆಗಾಲದ ಆರಂಭದಲ್ಲಿ ತೀವ್ರವಾಗಿ ಹರಡುವ ಮಲೇರಿಯಾ ರೋಗ ತಡೆಗೆ ಬೆಟ್ಟದಪುರದ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಗುರುವಾರ ಗ್ರಾಮದ ಪ್ರತಿ ಮನೆಗಳಿಗೆ ಭೇಟಿ ನೀಡಿ ಸಂಗ್ರಹಿತ ನೀರಿನಲ್ಲಿರುವ ಲಾರ್ವಾ ಸಮೀಕ್ಷೆ ನಡೆಸಿದರು.
ಸೊಳ್ಳೆಗಳ ಇರುವಿಕೆಯನ್ನು ಸೂಕ್ಷ್ಮವಾಗಿ ಪರಿಶೀಲನೆ ಮಾಡಿ, ಅವುಗಳ ನಿಯಂತ್ರಣಕ್ಕೆ ಸಲಹೆ, ಸೂಚನೆ ಮತ್ತು ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಮನೆಯಲ್ಲಿದ್ದವರಿಗೆ ಮಾಹಿತಿ ನೀಡಿ ಆರೋಗ್ಯ ಜಾಗೃತಿ ಮೂಡಿಸಲಾಯಿತು. ಲಾರ್ವಾ ಮತ್ತು ಸೊಳ್ಳೆಗಳನ್ನು ತಿನ್ನುವ ಗಪ್ಪಿ ಗಾಂಬೂಸಿಯ ಮೀನುಗಳನ್ನು ಗ್ರಾಮದ ಕೆರೆಗೆ ವಿಸರ್ಜನೆ ಮಾಡುವ ಮೂಲಕ ಸಾರ್ವಜನಿಕರಿಗೆ ಹಾಗೂ ಮಕ್ಕಳಿಗೆ ಸೊಳ್ಳೆಗಳಿಂದ ಹರಡುವ ಡೆಂಗ್ಯೂ, ಮಲೇರಿಯಾ, ಚಿಕೂನ್ ಗುನ್ಯಾ ಮತ್ತಿತರ ರೋಗಗಳ ಬಗ್ಗೆ ಅರಿವು ಮೂಡಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಕೀಟಶಾಸ್ತ್ರಜ್ಞರಾದ ರತ್ನಕುಮಾರಿ, ವೈದ್ಯಾಧಿಕಾರಿ ಡಾ.ಪೂಜಾ, ಗ್ರಾಪಂ ಅಭಿವೃದ್ಧಿ ಅಧಿಕಾರಿ ಮಂಜುನಾಥ, ಕಾರ್ಯದರ್ಶಿ ಪಾಂಡು, ಹಿರಿಯ ಆರೋಗ್ಯ ನಿರೀಕ್ಷಕರಾದ ಸಿದ್ದೇಗೌಡ, ಕುಮಾರ, ಅರೋಗ್ಯ ಸುರಕ್ಷತಾ ಅಧಿಕಾರಿ ದೇವಕಿ ಸೇರಿದಂತೆ ಆಶಾ ಕಾರ್ಯಕರ್ತೆಯರು ಹಾಗೂ ಸಾರ್ವಜನಿಕರು ಇದ್ದರು.