ಜಿಲ್ಲೆ

ಅನುಮಾನಾಸ್ಪದ ಬೋಟ್‌ ಕಂಡೆ ಮಾಹಿತಿ ನೀಡಿ

ಕಾರವಾರ: ಯಾವುದೇ ಅನುಮಾನಾಸ್ಪದ ವ್ಯಕ್ತಿ ಅಥವಾ ಬೋಟ್‌ಗಳು ಕಂಡುಬAದರೆ ತಕ್ಷಣ ಮಾಹಿತಿ ನೀಡಿ ಎಂದು ಮೀನುಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಬಬಬಿನಿ ಬೋಪಣ್ಣ ಮೀನುಗಾರರಿಗೆ ಕರೆ ನೀಡಿದರು.

ನಗರದ ಬೈತಖೋಲ್ ಪರ್ಸೀನ್ ಬೋಟ್ ಯೂನಿಯನ್ ಕಚೇರಿಯಲ್ಲಿ ಶುಕ್ರವಾರ ಮೀನುಗಾರ ಮುಖಂಡರ ಸಭೆ ನಡೆಸಿ ಅವರು ಮಾತನಾಡಿದರು. ಭಾರತ, ಪಾಕಿಸ್ತಾನ ಯುದ್ಧ ಪ್ರಾರಂಭವಾಗಿದೆ. ಅದು ಎಷ್ಟು ದಿನವೂ ಹೋಗಬಹುದು. ಯಾವುದೇ ಸಂದರ್ಭ ಎದುರಾಗಬಹುದು. ಕರಾವಳಿ ಕಾವಲುಪಡೆ, ಕೋಸ್ಟ್ ಗಾರ್ಡ್ ಅಸ್ತು ತಿರುಗುತ್ತದೆ. ಆದರೆ, ಮೀನುಗಾರರು ಕಡಲ ತೀರದಲ್ಲಿ ದೂರದವರೆಗೆ ಹೋಗುತ್ತಾರೆ.

ಹೊರ ರಾಜ್ಯದ ಬೋಟ್‌ಗಳು, ಅಥವಾ ಸ್ಥಳೀಯ ಬೋಟ್‌ಗಳಲ್ಲಿ ಅಪರಿಚಿತ ವ್ಯಕ್ತಿಗಳು ಕಂಡುಬಂದಲ್ಲೂ ತಕ್ಷಣ ಮಾಹಿತಿ ನೀಡಿ. ಕೆಲವೊಮ್ಮೆ ಸಣ್ಣ ಸಂಗತಿಗಳು ದೊಡ್ಡ ಅನಾಹುತ ತಡೆಗಟ್ಟಬಹುದು. ಜೂನ್ 1 ರಿಂದ ಆಳ ಸಮುದ್ರ ಮೀನುಗಾರಿಕೆಗೆ ಅಧಿಕೃತವಾಗಿ ನಿಷೇಧ ಇರಲಿದೆ. ಆದರೆ, ಈಗಾಗಲೇ ಆಳ ಸಮುದ್ರ ಮೀನುಗಾರಿಕೆ ಬಂದ್ ಮಾಡಲಾಗಿದೆ. ಹೆಚ್ಚಿನ ಕಲಾಸಿಗಳು (ಕಾರ್ಮಿಕರು)ಊರುಗಳಿಗೆ ತೆರಳಿದ್ದಾರೆ. ಯಾಂತ್ರೀಕೃತ ದೋಣಿಗಳ ಓಡಾಟ ಹೆಚ್ಚಲಿದ್ದು, ಅವರೂ ಅತ್ಯಂತ ಸೂಕ್ಷ್ಮವಾಗಿ ಕಾರ್ಯ ನಿರ್ವಹಿಸಬೇಕು ಎಂದರು. ಈಗ ಇರುವ ಕಲಾಸಿಗಳ ಮಾಹಿತಿಯನ್ನು ಹಂಚಿಕೊಳ್ಳಿ ಎಂದರು.

ಉತ್ತರ ಕನ್ನಡ ಜಿಲ್ಲೆಯಲ್ಲಿ 8 ಮೀನುಗಾರಿಕೆ ಬಂದರುಗಳಿದ್ದು, ಜಿಲ್ಲೆಯಲ್ಲಿ 1080 ರಷ್ಟು ಯಾಂತ್ರೀಕೃತ, 4218 ಮೋಟರೀಕೃತ ಬೋಟ್‌ಗಳಿವೆ. 1.50 ಲಕ್ಷಕ್ಕೂ ಅಽಕ ಮೀನುಗಾರರಿದ್ದಾರೆ. ಮುಖಂಡರು ಎಲ್ಲ ಮನೆಗಳಿಗೆ ಸುದ್ದಿ ಮುಟ್ಟಿಸಬೇಕು ಎಂದರು.

ಮೀನುಗಾರಿಕೆ ಇಲಾಖೆ ಉಪ ನಿರ್ದೇಶಕ ಪ್ರತೀಕ ಶೆಟ್ಟಿ, ಉತ್ತರ ಕನ್ನಡ ಜಿಲ್ಲಾ ಸಹಕಾರ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ವೆಂಕಟೇಶ ತಾಂಡೇಲ, ಗೌರೀಶ ತಾಂಡೇಲ, ಚೇತನ ಹರಿಕಂತ್ರ ಇತರರು ಇದ್ದರು.

ಸಹಕರಿಸಿ, ಆತಂಕ ಬೇಡ

ಕರಾವಳಿ ಕಾವಲು ಪಡೆಯ ಇನ್ಸ್ಪೆಕ್ಟರ್ ನಿಶ್ಚಲ ಕುಮಾರ್ ಮಾತನಾಡಿ, ಯುದ್ಧದ ಸಂದರ್ಭ ಬಂದರೆ ಎಚ್ಚರಿಕೆಯಿಂದ ಇರಬೇಕು ಎಂಬ ಕಾರಣಕ್ಕೆ ಮೇ 12 ರಂದು ಕಾರವಾರದಲ್ಲಿ ಕಲ್ಪಿತ ಕಾರ್ಯಾಚರಣೆ ನಡೆಯಲಿದೆ. ಅಂದು 6 ಗಂಟೆಯ ಹೊತ್ತಿಗೆ ಕಡಲ ತೀರದಲ್ಲಿ ಪ್ರವಾಸಿಗರನ್ನು ತೆರವು ಮಾಡಲಾಗುವುದು. ಅಂದು ಸಾಯಂಕಾಲ 7.30 ಕ್ಕೆ ಸೈರನ್ ಮೊಳಗಲಿದೆ. ಜನ ಭಯಪಡುವ ಅಗತ್ಯವಿಲ್ಲ. ಸ್ವಯಂ ಪ್ರೇರಣೆಯಿಂದ ಮನೆಗಳ ಒಳಗೆ ತೆರಳಿ ಬೆಳಕನ್ನು ಬಂದ್ ಮಾಡಿ. 8 ಗಂಟೆಯವರೆಗೆ ಈ ಬ್ಲಾ÷್ಯಕ್ ಔಟ್ ಪ್ರಕ್ರಿಯೆ ನಡೆಸೋಣ. ಭಯಪಡುವ ಅವಶ್ಯಕತೆ ಇಲ್ಲ. ಸಹಕಾರ ನೀಡಿ ಎಂದು ಕರೆ ನೀಡಿದರು.