ಜಿಲ್ಲೆ

ಮೀನು ದರ ಮೂರು ಪಟ್ಟು ದುಬಾರಿ

ಮಂಗಳೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಲಾಕ್‌ಡೌನ್ ಸಡಿಲಿಕೆ ಬಳಿಕ ಮಾಂಸ ಪ್ರಿಯರ ಜೇಬಿಗೆ ಕತ್ತರಿ ಬೀಳಲಾರಂಭಿಸಿದೆ. ಮೀನು ದರ ಮೂರು ಪಟ್ಟು ಹೆಚ್ಚಳವಾಗಿದ್ದು, ಕೋಳಿ, ಆಡು ಮಾಂಸ ದರದಲ್ಲೂ ಇಳಿಕೆಯಾಗಿಲ್ಲ.

ತಿಂಗಳ ಹಿಂದೆ 250 ರೂ.ಇದ್ದ ಬಂಗುಡೆ ಕೆ.ಜಿ.ಗೆ 400 ರೂ, 100 ರೂ.ಇದ್ದ ಬೂತಾಯಿಗೆ 260 ರೂ, ಸಿಗಡಿ(ವೈಟ್) 300 ರೂ.ನಿಂದ 550 ರೂ, ಸಿಗಡಿ(ಕಂದು) 250 ರೂ.ನಿಂದ 400 ರೂ., ಅಂಜಲ್ 600 ರೂ.ನಿಂದ 1000 ರೂ, ಮಾಂಜಿ 750 ರೂ.ನಿಂದ 1100 ರೂ, ಸಿಲ್ವರ್ ಫಿಶ್ 400 ರೂ.ನಿಂದ 600 ರೂ.ಗೆ ಏರಿಕೆಯಾಗಿದೆ.

ಮಂಗಳೂರು ಹಾಗು ಉಡುಪಿಯ ಮಲ್ಪೆಯ ಮೀನುಗಾರಿಕೆ ಬಹುತೇಕ ಸ್ಥಗಿತಗೊಂಡ ಕಾರಣ ಗೋವಾ, ಆಂಧ್ರಪ್ರದೇಶ ಮೊದಲಾದ ಹೊರ ರಾಜ್ಯಗಳಿಂದ ಕರಾವಳಿಗೆ ಮೀನು ಪೂರೈಕೆಯಾಗುತ್ತಿದೆ. ಸಾಗಾಟ ವೆಚ್ಚ ಹೆಚ್ಚಾಗಿರುವುದರಿಂದ ಮತ್ತು ಗ್ರಾಹಕರಿಂದ ಉತ್ತಮ ಬೇಡಿಕೆ ಇರುವುದರಿಂದ ಮೀನು ದರ ಹೆಚ್ಚಳವಾಗಿದೆ.

ಕೋಳಿ, ಆಡು ಮಾಂಸವೂ ದುಬಾರಿ: ಲಾಕ್‌ಡೌನ್ ಅವಧಿಯಲ್ಲಿ ಹೆಚ್ಚಳವಾಗಿದ್ದ ಕೋಳಿ, ಆಡು ಮಾಂಸದ ದರ ಲಾಕ್‌ಡೌನ್ ಸಡಿಲಿಕೆ ಬಳಿಕವೂ ಕಡಿಮೆಯಾಗಿಲ್ಲ. ಕೋಳಿ ಉತ್ಪಾದನೆ ಆಗದೆ ಅಂಗಡಿಗಳಿಗೆ ಪೂರೈಕೆಯಾಗುತ್ತಿಲ್ಲ. ಮಟನ್ ಪೂರೈಕೆಯೂ ಕಡಿಮೆಯಾಗಿದೆ. ಈ ಹಿನ್ನೆಲೆಯಲ್ಲಿ ಕೋಳಿ(ಲೈವ್) 180 ರೂ., ಮಾಂಸ ಸ್ಕಿನೌಟ್ 290 ರೂ., ವಿದ್ ಸ್ಕಿನ್ 250 ರೂ. ದರವಿದೆ. ಆಡು 850 ರೂ. ದರವಿದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.

ಇನ್ನಷ್ಟು ಹೆಚ್ಚಳ ಸಾಧ್ಯತೆ

ಬಾರ್ ಆ್ಯಂಡ್ ರೆಸ್ಟೋರೆಂಟ್, ಮಾಂಸಹಾರಿ ಹೋಟೆಲ್‌ಗಳು ಪೂರ್ಣಪ್ರಮಾಣದಲ್ಲಿ ಕಾರ್ಯಾರಂಭಿಸಿದರೆ ಮೀನು ದರ ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ. ಇನ್ನು ಮೀನುಗಾರಿಕೆ ರಜಾ ಅವಧಿ ಮುಗಿದು ಆಗಸ್ಟ್‌ನಲ್ಲಿ ಮೀನುಗಾರಿಕೆ ಆರಂಭ ಆಗುವ ತನಕ ಮೀನು ದರ ದುಬಾರಿಯಾಗಿರುತ್ತದೆ ಎಂದು ಮೀನು ವ್ಯಾಪಾರಸ್ಥ ಮಜೀದ್ ಬಂದರು ತಿಳಿಸಿದ್ದಾರೆ.

ಉಡುಪಿಯಲ್ಲಿ ಮಟನ್ ದರ ಏರಿಕೆ ಉಡುಪಿ ಜಿಲ್ಲೆಯಲ್ಲಿ ಮಟನ್ ದರ ಏರಿಕೆಯಾಗಿದೆ. ಬನ್ನೂರು ಸ್ಪೆಷಲ್ ಮಟನ್‌ಗೆ ಕೆ.ಜಿ.ಗೆ 700 ರೂ. ಇದೆ. ಸಾಮಾನ್ಯ ಕುರಿ ಮಾಂಸಕ್ಕೆ ಕೆ.ಜಿ.ಗೆ 600 ರೂ.ಇದೆ. ರೇಟ್ ಅಧಿಕವಿದ್ದರೂ ಮಟನ್‌ಗೆ ಬೇಡಿಕೆ ಕುಂದಿಲ್ಲ. ರಾಣೆಬೆನ್ನೂರು, ಹೊನ್ನಾಳಿ, ಶಿವಮೊಗ್ಗದಿಂದ ಜಿಲ್ಲೆಗೆ ಕುರಿಗಳು ಪೂರೈಕೆಯಾಗುತ್ತವೆ. ರಂಜಾನ್ ಬಳಿಕ ಸ್ವಲ್ಪ ಪ್ರಮಾಣದಲ್ಲಿ ಮಾರಾಟ ಕಡಿಮೆಯಾಗಿದೆ, ಆದರೂ ರೇಟ್ ಇಳಿಕೆಯಾಗಿಲ್ಲ ಎನ್ನುತ್ತಾರೆ ಉಡುಪಿಯ ವ್ಯಪಾರಿ ಜಾಕಿರ್. ಜೀವಂತ ಕೋಳಿ ಕೆ.ಜಿ.ಗೆ 170 ರಿಂದ 180 ರೂ, ಸ್ಕಿನ್ ಔಟ್ ಚಿಕನ್ ಕೆ.ಜಿ.ಗೆ 260 ರಿಂದ 270 ರೂ.ದರವಿದೆ.

ಲಾಕ್‌ಡೌನ್ ಬಳಿಕ ಕರಾವಳಿಯಲ್ಲಿ ಮೀನುಗಾರಿಕೆ ಸ್ಥಗಿತಗೊಂಡಿದೆ. ಉತ್ಪಾದನೆ ಇಲ್ಲದೆ ಕೋಳಿ, ಆಡುಗಳ ಪೂರೈಕೆಯೂ ಕಡಿಮೆಯಾಗಿದೆ. ಇವೆಲ್ಲವೂ ಹೊರ ಜಿಲ್ಲೆ, ರಾಜ್ಯಗಳಿಂದ ಪೂರೈಕೆಯಾಗುತ್ತಿರುವುದರಿಂದ ಸಹಜವಾಗಿಯೇ ದರ ಹೆಚ್ಚಳವಾಗಿದೆ. ಸಮಾರಂಭಗಳು, ಹೋಟೆಲ್‌ಗಳು ಇಲ್ಲದೆ ಮಾಂಸ ದರ ಈ ಮಟ್ಟದಲ್ಲಿದೆ. ಇಲ್ಲದಿದ್ದರೆ ಇನ್ನಷ್ಟು ದುಬಾರಿಯಾಗುವ ಸಾಧ್ಯತೆ ಇತ್ತು. ಮೆಲ್ವಿನ್, ಮಾಂಸ ವ್ಯಾಪಾರಿ ಮಂಗಳೂರು