ಜಿಲ್ಲೆ

ದುಬಾರಿ, ಮಾಂಸವೂ ತುಟ್ಟಿ!: ಜಿಲ್ಲೆಯಲ್ಲಿ ತಾಜಾ ಮತ್ಸ್ಯ ಲಭ್ಯತೆ ಕೊರತೆ : ಮಾರುಕಟ್ಟೆಗಳಲ್ಲಿ ದಾಸ್ತಾನು ಬಿಕ್ಕಟ್ಟು

ಸೌಮ್ಯ ಆರ್

ವಿಜಯವಾಣಿ ಸುದ್ದಿಜಾಲ ಕುಂಬಳೆ

ಪ್ರಸಕ್ತ ವರ್ಷ ಅವಧಿಗೂ ಮೊದಲೇ ಮೀನು ಹಾಗೂ ಮಾಂಸದ ಬೆಲೆ ಗಗನಕ್ಕೇರಿದ್ದು, ಜಿಲ್ಲೆಯ ಜನಸಾಮಾನ್ಯರ ಆಹಾರ ಪದ್ಧತಿ ಮೇಲೆ ವ್ಯತಿರಿಕ್ತ ಪರಿಣಾಮ ಉಂಟು ಮಾಡಿದೆ.

ಎರಡು ವಾರಗಳಿಂದ ಮೀನಿನ ದರ ಸತತ ಹೆಚ್ಚುತ್ತಿದ್ದು, ಕೆಲವು ದಿನಗಳಿಂದ ಮಾಂಸದ ಬೆಲೆಯೂ ಗಮನಾರ್ಹ ಹೆಚ್ಚಳವಾಗಿದೆ.

ರಾಜ್ಯದಲ್ಲಿ ಜೂ.10ರಿಂದ ಟ್ರಾಲಿಂಗ್ ನಿಷೇಧಗೊಳ್ಳಲಿದೆ. ವಾಡಿಕೆಯಂತೆ ಪ್ರತಿ ವರ್ಷವೂ ಟ್ರಾಲಿಂಗ್ ನಿಷೇಧದ ಬಳಿಕ ದರದಲ್ಲಿ ವ್ಯತ್ಯಾಸವಾಗಲಿದ್ದು, ಈ ಬಾರಿ ಟ್ರಾಲಿಂಗ್ ನಿಷೇಧಕ್ಕೂ ಮೊದಲೆ ಮೀನು, ಮಾಂಸದ ದರದಲ್ಲಿ ಹೆಚ್ಚಳವಾಗಿದೆ. ಜತೆಗೆ ಮೀನಿನ ಲಭ್ಯತೆಯೂ ಕುಸಿತವಾಗಿದೆ. ಮೀನಿನ ವ್ಯಾಪಾರಿಗಳು ಚಿಂತಿತರಾಗಿದ್ದು, ಅತ್ತ ಸಾಕಿದ ಮೀನುಗಳಿಗೂ ಬೇಡಿಕೆಯಿಲ್ಲದಿರುವುದರಿಂದ ವ್ಯಾಪಾರ ನಷ್ಟವುಂಟಾಗುವ ಭೀತಿ ಇದೆ. ಸೀಗಡಿ ಮೀನಿಗೆ ಕೆ.ಜಿಗೆ 500 ರೂ. ತನಕ ದರ ಇದೆ.

ಮಾಂಸದ ಬೆಲೆಯೂ ಏರಿಕೆ

ಜಿಲ್ಲೆಯಲ್ಲಿ ಕೋಳಿ ಮಾಂಸದ ದರ ತಲಾ ಕೆ.ಜಿ.ಗೆ 255ರಿಂದ 265 ರೂ. ಇದೆ. ಗೋಮಾಂಸಕ್ಕೆ 350 ರೂ. ವಿಧಿಸಲಾಗುತ್ತಿದ್ದು, ವಿಶೇಷ ಸಂದರ್ಭಗಳಲ್ಲಿ 400 ರೂ. ತನಕ ಹೆಚ್ಚಿಸಲಾಗುತ್ತದೆ. ಮಾರುಕಟ್ಟೆಯಲ್ಲಿ ಮೀನುಗಳ ಕಡಿಮೆ ಲಭ್ಯತೆಯಿಂದಾಗಿ ಮಾಂಸದ ಬೆಲೆ ಮತ್ತಷ್ಟು ಹೆಚ್ಚಾಗುತ್ತದೆ ಎಂದು ಗ್ರಾಹಕರು ಆತಂಕ ವ್ಯಕ್ತಪಡಿಸಿದ್ದಾರೆ. ಕುರಿಯ ಮಾಂಸ 750 ರಿಂದ 800ರೂ.ಗಳವರೆಗೆ ಇದ್ದು, ಒಣ ಮೀನಿನ ಬೆಲೆಯೂ ಗಗನಕ್ಕೇರಿದೆ.

ಪ್ರಸ್ತುತ ರಾಜ್ಯದಲ್ಲಿರುವ ಮಾಂಸದ ಮಾರುಕಟ್ಟೆಗಳಲ್ಲಿ ಈಗಾಗಲೇ ದಾಸ್ತಾನು ಬಿಕ್ಕಟ್ಟು ಪ್ರಾರಂಭವಾಗಿದ್ದು, ದಿನಗಳೆದಂತೆ ದರದಲ್ಲಿ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.

ಮಾರ್ಕೆಟ್ ದರದ ವಿವರ

ಬೂತಾಯಿ ಮೀನಿನ ಬೆಲೆ ತಲಾ ಕೆ.ಜಿ.ಗೆ 250 ರಿಂದ 300 ರೂ. ಇದೆ. ನೈಮೀನ್ ಮೀನಿನ ಬೆಲೆ 460 ರೂ.ಗಿಂತ ಹೆಚ್ಚಾಗಿದೆ. ಮಂತಾಲ್ ಮೀನಿಗೆ ಕೆಜಿಗೆ 360 ರೂ. ಆಗಿದೆ. ಬಂಗುಡೆಗೆ 300 ರೂ. ಇದೆ. ಆಪೋಲಿ ಮತ್ತು ಅಯಕ್ಕುರ ಮುಂತಾದ ಮೀನುಗಳು ಮಾರುಕಟ್ಟೆಗೆ ಸಾಕಷ್ಟು ಪ್ರಮಾಣದಲ್ಲಿ ಪೂರೈಕೆಯಾಗುತ್ತಿಲ್ಲ. ಶನಿವಾರ ಆಯಕ್ಕುರ ಮೀನು 1,200 ರೂ.ತನಕ ಮಾರಾಟವಾಗಿದೆ ಎಂದು ಸಣ್ಣ ವ್ಯಾಪಾರಿಗಳು ಮಾಹಿತಿ ನೀಡಿದ್ದಾರೆ.

ತರಕಾರಿಗಳ ರೇಟ್‌ನಲ್ಲ್ಲೂ ವ್ಯತ್ಯಯ

ಪ್ರತಿ ವರ್ಷವೂ ಮಳೆಗಾಲ ಸಂದರ್ಭ ತರಕಾರಿಗಳ ದರದಲ್ಲಿ ಏರಿಳಿತವಾಗುವುದು ಸಹಜ. ಈ ಬಾರಿಯೂ ಮಳೆಗಾಲ ಆರಂಭವಾದ ಬಳಿಕ ತರಕಾರಿ ದರಗಳಲ್ಲಿ ಹೆಚ್ಚಳವಾಗಿದೆ. ಹೊರರಾಜ್ಯಗಳಿಂದ ಆಮದಾಗುವ ತರಕಾರಿ ಪ್ರಮಾಣ ಕಡಿಮೆಯಾಗಿದ್ದು, ರಾಜ್ಯದಲ್ಲೂ ಬೆಳೆ ಇಳಿಮುಖವಾಗಿದೆ. ಅತ್ತ ಕೋಳಿ ಮಾಂಸಕ್ಕೆ ಬೇಡಿಕೆ ಹೆಚ್ಚಳವಾಗಿದ್ದು, ಇತ್ತ ಮನೆಗಳಲ್ಲಿ ಬೆಳೆದ ತರಕಾರಿಗಳತ್ತ ಜನರು ಮುಖಮಾಡುತ್ತಿದ್ದಾರೆ.

  • ಮಾಂಸಪ್ರಿಯರ ಆಹಾರ ಪದ್ಧತಿಯಲ್ಲಿ ವ್ಯತ್ಯಯ
  • ಟ್ರಾಲಿಂಗ್‌ಗೂ ಮೊದಲೆ ದರದಲ್ಲಿ ಏರುಪೇರು
  • ದರದಲ್ಲಿ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆ
  • ಮಳೆಯಿಂದಾಗಿ ತರಕಾರಿ ಪೂರೈಕೆಯಲ್ಲೂ ಇಳಿಕೆ

ಬಿಡಿಕೆ 9 ಜೂನ್ 1-ಮೀನುಗಳು

ಬಿಡಿಕೆ 9 ಜೂನ್ 1(ಎ)- ತರಕಾರಿಗಳು