ಜಿಲ್ಲೆ

ಚಿಕ್ಕನಾಗಮಂಗಲ ಕರೆಯಲ್ಲಿ ಮೀನುಗಳ ಮಾರಣಹೋಮ

ಬೆಂಗಳೂರು ಗ್ರಾಮಾಂತರ ಡೆಸ್ಕ್

ಜಲಚರಗಳ ಜೀವಕ್ಕೆ ಕುತ್ತುತಂದ ಬಿಬಿಎಂಪಿ ತ್ಯಾಜ್ಯ, ವಿಷಯುಕ್ತ ನೀರು

ಆನೇಕಲ್: ಬೆಂಗಳೂರು ಮಹಾನಗರ ಪಾಲಿಕೆಯ ಕಸವನ್ನು ಆನೇಕಲ್ ತಾಲೂಕಿನ ಶಾಂತಿಪುರದ ತ್ಯಾಜ್ಯ ನಿರ್ವಹಣಾ ಘಟಕದಲ್ಲಿ ವಿಲೇವಾರಿ ಮಾಡುತ್ತಿದ್ದು, ಅಲ್ಲಿನ ಅವೈಜ್ಞಾನಿಕ ನಿರ್ವಹಣೆಯಿಂದ ಕಲುಷಿತ ನೀರು ಚಿಕ್ಕನಾಗಮಂಗಲ ಕೆರೆಗೆ ಹರಿದು ಲಕ್ಷಾಂತರ ಮೀನುಗಳ ಮಾರಣಹೋಮವಾಗಿದೆ.


ತಾಲೂಕಿನ ಚಿಕ್ಕನಾಗಮಂಗಲ ಕೆರೆಯ ಸುತ್ತುಮುತ್ತಲ ಬಡಾವಣೆಗಳ ತ್ಯಾಜ್ಯ ನೀರು ಹಾಗೂ ಸಮೀಪದಲ್ಲಿರುವ ಬಿಬಿಎಂಪಿ ಘನತ್ಯಾಜ್ಯ ಘಟಕದ ಕಲುಷಿತ ಕೆರೆ ಸೇರಿದ್ದು, ಇದರಿಂದ ಮೂರು ದಿನಗಳಿಂದ ಲಕ್ಷಾಂತರ ಮೀನುಗಳು ಮೃತಪಟ್ಟಿವೆ. ಸತ್ತ ಮೀನುಗಳು ಕೊಳೆತು ಗಬ್ಬು ನಾರುತ್ತಿದ್ದು, ಸ್ಥಳೀಯರಲ್ಲಿ ಸಾಂಕ್ರಾಮಿಕ ಭೀತಿ ಎದುರಾಗಿದೆ.


ಘಟಕದ ಮುಖ್ಯಸ್ಥರಿಗೆ ನೋಟಿಸ್: ಶಾಂತಿಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಮದನ್ ಮಾತನಾಡಿ, ಬಿಬಿಎಂಪಿ ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ಲಾರಿಗಟ್ಟಲೇ ಕಸವನ್ನು ಹೊರಭಾಗದಲ್ಲಿ ಹಾಕಲಾಗಿದೆ. ಮಳೆ ಹೆಚ್ಚಾದ್ದರಿಂದ ತ್ಯಾಜ್ಯ, ರಾಸಾಯನಿಕ ನೀರು ಚಿಕ್ಕನಾಗಮಂಗಲ ಕೆರೆಗೆ ಹರಿದಿದ್ದರಿಂದ ಮೀನುಗಳು ಮೃತಪಟ್ಟಿವೆ. ಈ ಸಂಬಂಧ ಘಟಕದ ಮುಖ್ಯಸ್ಥರಿಗೆ ನೋಟಿಸ್ ನೀಡಲಾಗಿದೆ. ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ ಎಂದು ತಿಳಿಸಿದರು.


ಕಿರಣ್ ಮಜುಂದಾರ್ ಷಾ ಆಕ್ರೋಶ
ಉದ್ಯಮಿ ಕಿರಣ್ ಮಜುಂದಾರ್ ಷಾ ಒಡೆತನದ ಬಯೋಕಾನ್ ಪ್ರತಿಷ್ಠಾನದ ಮೂಲಕ ಚಿಕ್ಕನಾಗಮಂಗಲ ಕೆರೆಯನ್ನು ಅಭಿವೃದ್ಧಿಪಡಿಸಲಾಗಿತ್ತು. ಈ ಕಾರಣಕ್ಕೆ ಕೆರೆಗೆ ಬಯೋಕಾನ್ ಕೆರೆ ಎಂದೇ ಸ್ಥಳೀಯರು ಕರೆಯುತ್ತಿದ್ದರು. ಲಕ್ಷಾಂತರ ರೂ. ವೆಚ್ಚ ಮಾಡಿ ಅಭಿವೃದ್ಧಿ ಪಡಿಸಿದ್ದ ಕೆರೆಗೆ ಈಗ ತ್ಯಾಜ್ಯ ನೀರು ಹರಿದು, ಜಲಚರಗಳು ಮೃತಪಟ್ಟಿರುವುದಕ್ಕೆ ಉದ್ಯಮಿ ಕಿರಣ್ ಮಜುಂದಾರ್ ಅವರು ಎಕ್ಸ್ ಖಾತೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದು, ಕೆರೆಯಲ್ಲಿ ಮೀನುಗಳ ಮಾರಣ ಹೋಮಕ್ಕೆ ಸರ್ಕಾರಿ ಇಲಾಖೆಗಳ ನಿರ್ಲಕ್ಷ್ಯವೇ ಕಾರಣ. ಕೆರೆ ಅಭಿವೃದ್ಧಿಗಾಗಿ ಮತ್ತು ಪರಿಸರ ಸಂರಕ್ಷಣೆಗಾಗಿ ಕೈಗೊಂಡಿದ್ದ ಪ್ರಯತ್ನಗಳು ವಿಫಲವಾಗಿವೆ. ವಿಷಕಾರಿ ನೀರು ಕೆರೆಗೆ ಹರಿದಿದ್ದರಿಂದ ಮೀನುಗಳು ಸತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಗಮನ ಸೆಳೆದಿದ್ದ ವಿಜಯವಾಣಿ
ಕಳೆದ ವರ್ಷ ಇದೇ ರೀತಿ ಕಲುಷಿತ ನೀರು ಕೆರೆಗೆ ಬಂದು ಲಕ್ಷಾಂತರ ಮೀನುಗಳು ಮೃತಪಟ್ಟಿದ್ದವು. ಈ ಸಂದರ್ಭದಲ್ಲಿ ವಿಜಯವಾಣಿ ವರದಿ ಪ್ರಕಟಿಸಿ ಅಧಿಕಾರಿಗಳ ಗಮನ ಸೆಳೆದಿತ್ತು. ಪ್ರಾರಂಭದಲ್ಲಿ ಎಚ್ಚೆತ್ತುಕೊಂಡಿದ್ದ ಅಧಿಕಾರಿಗಳು ಈಗ ಮತ್ತೆ ಕೆರೆಗೆ ಕಲುಷಿತ ನೀರು ಹರಿಯಲು ಬಿಟ್ಟಿದ್ದು, ಮತ್ತೊಮ್ಮೆ ಮೀನುಗಳ ಮಾರಣಹೋಮ ನಡೆದಿದೆ.