ಮಂಗಳೂರು: ಹಸಿ ಮೊಟ್ಟೆ ತಿನ್ನುವುದು ಸಾಮಾನ್ಯ. ಆದರೆ ಇಲ್ಲೊಬ್ಬ ಸ್ನೇಹಿತರ ಚಾಲೆಂಜ್ ಸ್ವೀಕರಿಸಿ ಹಸಿ ಮೀನನ್ನು ಚಾಕಲೇಟ್‌ನಂತೆ ಕಚ್ಚಿ ತಿಂದು ಎಲ್ಲರನ್ನೂ ನಿಬ್ಬೆರಗಾಗಿಸಿದ್ದಾರೆ. ಹಸಿ ಬಂಗುಡೆ ತಿಂದವರು ಕೂಳೂರು ಸಮೀಪದ ಪಂಜಿಮೊಗರು ನಿವಾಸಿ ಹರೀಶ್.
ಜು.25ರಂದು ಮಧ್ಯಾಹ್ನ 12ರ ಸುಮಾರಿಗೆ ಗೆಳೆಯರು ಜತೆಯಾಗಿ ಮಾತನಾಡುತ್ತಿರುವಾಗ ಹಸಿ ಮೀನು ತಿನ್ನುವ ಚಾಲೆಂಜ್ ಎದುರಾಗಿತ್ತು. ಇದಕ್ಕೆ ಒಪ್ಪಿದ ಹರೀಶ್, ತಕ್ಷಣ ಒಂದು ಮಧ್ಯಮ ಗಾತ್ರದ ಹಸಿ ಬಂಗುಡೆ ಮೀನನ್ನು ಬಾಲದ ಬದಿಯಿಂದ ಆರಂಭಿಸಿ, ತಲೆಯವರೆಗೆ ಏನನ್ನೂ ಬಿಸಾಡದೆ ಕ್ಷಣಾರ್ಧದಲ್ಲಿ ತಿಂದು ಮುಗಿಸಿದ್ದಾರೆ. ಆಶ್ಚರ್ಯದ ಸಂಗತಿಯೆಂದರೆ ಮೀನನ್ನು ಅಸಹ್ಯ ಪಡದೆ ತಿಂದಿರುವ ಹರೀಶ್, ಅದರ ಹೊಟ್ಟೆಯೊಳಗಿನ ತ್ಯಾಜ್ಯದ ಸಹಿತ ತಿಂದಿದ್ದಾರೆ.
ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಫೇಸ್‌ಬುಕ್‌ನಲ್ಲಿ ಎರಡು ದಿನಗಳಲ್ಲಿ 19 ಸಾವಿರಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಹರೀಶ್‌ಗೆ ಸಾಕಷ್ಟು ಮಂದಿ ಕರೆ ಮಾಡಿ ‘ಹೇಗೆ ಈ ರೀತಿ ಹಸಿ ಮೀನು ತಿಂದಿರಿ’ ಎಂದು ಕೇಳುತ್ತಿದ್ದಾರೆ. ಹಸಿ ಮೀನು ತಿಂದ ಹರೀಶ್ ಒಂದೇ ದಿನದಲ್ಲಿ ಭಾರಿ ಪ್ರಚಾರ ಪಡೆದಿದ್ದಾರೆ.